Padibidri: ಬಾರುಕೋಲಿನಲ್ಲಿ ಯಕ್ಷಗಾನ ಕಲಾವಿದನಿಗೆ ದೈಹಿಕ ಹಲ್ಲೆ; ದೂರು ದಾಖಲು

Padibidri: ಯಕ್ಷಗಾನ ಕಲಾವಿದರೊಬ್ಬರಿಗೆ ದೈಹಿಕ ಹಲ್ಲೆ ನಡೆಸಿದ ಘಟನೆಯೊಂದು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸಾಲ ವಾಪಸು ನೀಡಲಿಲ್ಲ ಎಂದು ಆರೋಪ ಮಾಡಿ ಹಲ್ಲೆ ಮಾಡಲಾಗಿದೆ.
ಪಡುಬಿದ್ರಿ ನಿವಾಸಿ, ಸಸಿಹಿತ್ಲು ಮೇಳದ ನಿತಿನ್‌ಕುಮಾರ್ ಹಲ್ಲೆಗೊಳಗಾದ ವ್ಯಕ್ತಿ. ಸಚಿನ್ ಅಮೀನ್ ಉದ್ಯಾವರ, ಇವರ ತಂದೆ ಕುಶಾಲಣ್ಣ, ಇನ್ನೋರ್ವ ಫೈನಾನ್ಶಿಯರ್ ಆರೋಪಿಗಳು.
ಸಚಿನ್ ಮತ್ತು ನಿತಿನ್ ಇಬ್ಬರೂ ಯಕ್ಷಗಾನ ಕಲಾವಿದರು ಜೊತೆಗೆ ಗೆಳೆಯರು ಕೂಡಾ. ಆದರೆ ಪಡೆದ ಸಾಲ ಹಿಂದಿರುಗಿಸಿಲ್ಲ ಎನ್ನುವ ಕಾರಣಕ್ಕೆ ನಿತಿನ್‌ನನ್ನು ಆರೋಪಿ ಸಚಿನ್, ಆತನ ತಂದೆ ಕುಶಾಲಣ್ಣ, ಇನ್ನೋರ್ವ ಫೈನಾನ್ಶಿಯರ್ ಸೇರಿ ಉದ್ಯಾವರದ ಮನೆಯೊಂದರಲ್ಲಿ ಜ.21 ರಂದು ಕಂಬಳದ ಕೋಣಗಳ ಬಾರುಕೋಲಿನ ಮೂಲಕ ಹಲ್ಲೆ ಮಾಡಿದ್ದರು.
ಬೆತ್ತದಿಂದ ನಿತಿನ್ ಅವರ ಬೆನ್ನಿಗೆ, ತಲೆಗೆ, ಕಾಲಿಗೆ ಹೊಡೆದಿದ್ದಾರೆ. ಖಾಲಿ ಬಾಂಡ್ ಪೇಪರ್‌ಗೆ ಬಲವಂತದಿಂದ ಸಹಿ ಪಡೆದುಕೊಂಡಿದ್ದಾರೆ. ನಂತರ ಸಂಜೆ ಆರೋಪಿಗಳು ನಿತಿನ್‌ನನ್ನು ಕಳುಹಿಸಿದ್ದಾರೆ.
ಜ.21 ರ ರಾತ್ರಿ ವೇಳೆ ಪುತ್ತೂರಿನಲ್ಲಿ ನಡೆದ ಯಕ್ಷಗಾನಕ್ಕೆ ಹೋಗಿದ್ದ ನಿತಿನ್, ಜ.22 ರಂದು ಪಡುಬಿದ್ರಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈ ಘಟನೆಯ ಕುರಿತು ತನಿಖೆ ಮಾಡುತ್ತಿದ್ದಾರೆ.
Comments are closed.