Mangaluru : ನ್ಯೂ ಇಯರ್ ಆಚರಣೆ ಮೇಲೆ ಹಿಂದೂಪರ ಸಂಘಟನೆಗಳ ಕೆಂಗಣ್ಣು -ಪಾರ್ಟಿ, ಸೆಲೆಬ್ರೇಶನ್ ಗೆ ವಿರೋಧ!!
Mangaluru : 2025 ಹೊಸ ವರ್ಷ (New Year) ಸಂಭ್ರಮಾಚರಣೆಗೆ ದಿನಗಣನೆ ಶುರುವಾಗಿದೆ. ಕಡಲನಗರಿ ಮಂಗಳೂರಿನಲ್ಲಿ(Mangaluru) ಹೊಸ ವರ್ಷಾಚರಣೆಗೆ ಮೊದಲೇ ಪಾರ್ಟಿ ಆಯೋಜನೆ ಮಾಡಲಾಗಿದೆ. ಆದರೆ ಇದೀಗ ಈ ನ್ಯೂ ಇಯರ್ ಪಾರ್ಟಿಗೆ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಯಸ್, ನ್ಯೂ ಇಯರ್ಗೆ ನಾಲ್ಕು ದಿನದ ಮೊದಲೇ ಅಂದರೆ ಇಂದು ಸಂಜೆ ಮಂಗಳೂರಿನ ಬೋಳಾರದ ಸಿಟಿ ಬೀಚ್ ನಲ್ಲಿ ಇಸ್ರೇಲ್ ಮೂಲದ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಡಿಜೆ ಪ್ಲೇಯರ್ ಸಜಂಕಾ ಕಾರ್ಯಕ್ರಮ ಆಯೋಜಿಸಲಾಗಿದೆ. ಹೊಸ ವರ್ಷದ ನೆಪದಲ್ಲಿ ಡ್ರಗ್ಸ್ ಪಾರ್ಟಿ ಮತ್ತು ಡಿಜೆ ಪ್ಲೇಯರ್ ಸಜಂಕಾ ಹಿಂದೂ ದೇವರ ಹಾಡುಗಳನ್ನು ವಿಚಿತ್ರವಾಗಿ ವಿಡಂಬಿಸಿದ್ದು, ಇದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪ ಕೇಳಿಬಂದಿದೆ. ಅಲ್ಲದೆ ನ್ಯೂ ಇಯರ್ ನೆಪದಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿರುವುದಾಗಿ ಹಿಂದೂಪರ ಸಂಘಟನೆಗಳು ಆರೋಪ ಮಾಡಿವೆ. ಹೀಗಾಗಿ ಇಂದಿನ ಡಿಜೆ ಪಾರ್ಟಿಗೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಕಾರ್ಯಕ್ರಮಕ್ಕೆ ತಡೆ ನೀಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಗೂ ಮನವಿ ನೀಡಿರುವ ಬಜರಂಗದಳ ಮತ್ತು ದುರ್ಗಾವಾಹಿನಿ ಸಂಘಟನೆಯ ಕಾರ್ಯಕರ್ತರು, ಇಂದು ಸಂಜೆ 6 ಗಂಟೆಗೆ ಪಾರ್ಟಿ ಆಯೋಜನೆಯ ಸ್ಥಳದಲ್ಲಿ ಪ್ರತಿಭಟನೆಗೂ ಕರೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ಸಜಂಕಾ ಎಂದು ಬಜರಂಗದಳ ಮುಖಂಡ ಪುನೀತ್ ಅತ್ತಾವರ ಕರೆ ನೀಡಿದ್ದು, ಪ್ರತಿಭಟನೆ ಎದುರಿಸಲು ಸಿದ್ದರಾಗಿ ಎಂಬ ಸಂದೇಶ ರವಾನೆ ಮಾಡಲಾಗಿದೆ.