Prayagraj: ಹೆಂಡತಿ ಗರ್ಭಿಣಿ ಎಂದು ಒಂದೇ ಕಾರಣ ನೀಡಿ ಮಹಾಕುಂಭದ ಸಮಯದಲ್ಲಿ ರಜೆ ಕೇಳಿದ 700 ಪೊಲೀಸರು

Prayagraj: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಜನವರಿ 2025 ರಂದು ನಡೆಯಲಿರುವ ಮಹಾ ಕುಂಭಮೇಳಕ್ಕೆ ಕೋಟಿಗಟ್ಟಲೆ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಭದ್ರತೆಗಾಗಿ ವಿವಿಧ ರಾಜ್ಯಗಳಿಂದ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಸುಮಾರು 6,000 ಪೊಲೀಸರನ್ನು ನಿಯೋಜಿಸಲಾಗಿದ್ದು, ಈ ಪೈಕಿ 1,200 ಸಿಬ್ಬಂದಿ ಡಿಸೆಂಬರ್‌ನಲ್ಲಿ ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ.
ರಜೆಗೆಂದು ಅರ್ಜಿ ಸಲ್ಲಿಸಿದ 1,200 ಪೊಲೀಸರಲ್ಲಿ 700 ಪೊಲೀಸರು ಒಂದೇ ಕಾರಣಗಳನ್ನು ನೀಡಿ ರಜೆ ಕೇಳಿದ್ದಾರೆ. ಅದೇನೆಂದರೆ ಪತ್ನಿಯ ಹೆರಿಗೆ ಅಥವಾ ಅನಾರೋಗ್ಯ ಎಂಬ ಕಾರಣ ನೀಡಿದ್ದಾರೆ.
ಮಹಾಕುಂಭದ ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿರುವ ಅಧಿಕಾರಿಗಳು ನಿಜಕ್ಕೂ ಆಶ್ಚರ್ಯಗೊಂಡಿದ್ದಾರೆ. ರಜೆ ಕೇಳಿದ ಪೊಲೀಸರಲ್ಲಿ ಹೆಚ್ಚಿನವರು 2018 ಮತ್ತು 2023 ರಲ್ಲಿ ನೇಮಕಗೊಂಡ ಕಾನ್ಸ್‌ಟೇಬಲ್‌ಗಳು. ಉತ್ತರ ಪ್ರದೇಶದ ಬಹುತೇಕ ಎಲ್ಲಾ ಜಿಲ್ಲೆಗಳ ಪೊಲೀಸರು ನಿಯೋಜನೆಗೊಂಡಿದ್ದಾರೆ. ಹೆಂಡತಿ ಹೆರಿಗೆ, ಅನಾರೋಗ್ಯದ ಜೊತೆಗೆ ಕೆಲವರು ಪೋಷಕರ ಅನಾರೋಗ್ಯ ಕಾರಣ ನೀಡಿ 250 ಪೊಲೀಸರು ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮನೆಯಲ್ಲಿ ಸಾವು ಕಂಡಿದ್ದು, ಕಾರ್ಯಕ್ಕೆ ರಜೆ ಬೇಕೆಂದು ಕೋರಿದ್ದಾರೆ.
ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಕೇವಲ ಅಗತ್ಯವುಳ್ಳವರಿಗೆ ಮಾತ್ರ ರಜೆ ನೀಡುತ್ತಿದ್ದು, ಕೆಲವರ ರಜೆಯನ್ನು ಕ್ಯಾನ್ಸಲ್ ಮಾಡಿದ್ದಾರೆ. ಜನವರಿ 13 ರಂದು ಮಹಾ ಕುಂಭದ ಜಾತ್ರೆ ಪ್ರಾರಂಭವಾಗಲಿದ್ದು, ದಿನಾಂಕ ಸಮೀಪಿಸುತ್ತಿದ್ದಂತೆ ಸಂತರು ಮತ್ತು ಮಹಾಂತರ ಶಿಬಿರಗಳನ್ನು ಸಹ ಸ್ಥಾಪಿಸಲಾಗುತ್ತಿದೆ. ಹಾಗಾಗಿ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸಾಕಷ್ಟು ಪೊಲೀಸರು ಲಭ್ಯವಾಗುವುದು ಬಹಳ ಮುಖ್ಯ.