Karnataka Government : ಗ್ಯಾರಂಟಿಗಳಿಗೆ ಹಣ ಸಂಗ್ರಹಿಸಲು ಸರ್ಕಾರದಿಂದ ಹೊಸ ಮಾಸ್ಟರ್ ಪ್ಲಾನ್ – ಸಂಪುಟ ಸಭೆಯಲ್ಲಿ ಸಿಕ್ತು ಇದೆಲ್ಲದಕ್ಕೂ ಅಸ್ತು
Karnataka Government : ಗ್ಯಾರಂಟಿಗಳ (Guarantee Scheme) ಭಾರದಿಂದ ತತ್ತರಿಸಿರುವ ರಾಜ್ಯ ಸರ್ಕಾರ(Karnataka Government ) ಸಂಪನ್ಮೂಲಗಳ ಕ್ರೋಢೀಕರಣಕ್ಕಾಗಿ ಹೊಸ ಹೊಸ ಮಾರ್ಗಗಳನ್ನು ಹುಡುಕ್ತಿದೆ. ಅಂತಯೇ ಇದೀಗ ಸರ್ಕಾರ ಹಣ ಸಂಗ್ರಹಕ್ಕೆ ತನ್ನ ಹೊಸ ಮಾರ್ಗವನ್ನು ಕಂಡುಕೊಂಡಿದೆ.
ಹೌದು, ಗ್ಯಾರಂಟಿಗಳ ಭಾರವನ್ನು ತಪ್ಪಿಸಲು ರಾಜ್ಯ ಸರ್ಕಾರ ವಿನೂತನ ಪ್ಲಾನ್ ಒಂದನ್ನು ಕಂಡುಕೊಂಡಿದೆ. ಅಕ್ರಮ ಕಲ್ಲುಗಣಿಗಾರಿಕೆ ನಡೆಸಿದವರು ಬಾಕಿ ಉಳಿಸಿಕೊಂಡ 6,105 ಕೋಟಿ ದಂಡ ಸಂಗ್ರಹಕ್ಕೆ ಒನ್ಟೈಮ್ ಸೆಟ್ಲ್ಮೆಂಟ್ ಯೋಜನೆ (OTS Scheme) ತರೋದಕ್ಕೆ ಮುಂದಾಗಿದೆ.
ರಾಜಧನ ಮತ್ತು ದಂಡ ವಸೂಲಿ ಮಾಡಲು ಉಪಖನಿಜ (Submineral) ರಿಯಾಯ್ತಿ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಪ್ರತಿ ಟನ್ಗೆ 80 ರೂ. ರಾಜಧನ ನಿಗದಿ ಮಾಡಿದೆ. ಇದರಿಂದ ಸರ್ಕಾರ 311.55 ಕೋಟಿ ಹೆಚ್ಚುವರಿ ಸಂಗ್ರಹದ ನಿರೀಕ್ಷೆಯಲ್ಲಿದೆ. ಅಲ್ಲದೇ, ಪರವಾನಗಿ ಪಡೆಯದೇ ಹೆಚ್ಚುವರಿಯಾಗಿ ಸಾಗಿಸಿದ ಉಪಖನಿಜಕ್ಕೆ ದಂಡ ಹಾಕಲು ತೀರ್ಮಾನಿಸಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್, ಇಂದಿನ ಸಭೆಯಲ್ಲಿ 20 ವಿಷಯಗಳ ಬಗ್ಗೆ ಚರ್ಚೆ ಮಾಡಿ ಅನುಮೋದನೆ ನೀಡಲಾಗಿದೆ. ಕಲ್ಲು ಗಣಿಗಳಲ್ಲಿನ ಕಲ್ಲುಗಳಿಗೆ ಒಂದು ಟನ್ಗೆ 70 ರೂ. ರಾಯಲ್ಟಿ ಇದೆ. ಅದನ್ನು ಹೆಚ್ಚಳ ಮಾಡಿ ಒಂದು ಟನ್ಗೆ 80 ರೂ.ಗೆ ನಿಗದಿ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಅಷ್ಟೇ ಅಲ್ಲದೆ ಖನಿಜಗಳನ್ನ ಹೊಂದಿರುವ ಭೂಮಿಗೆ ತೆರಿಗೆ ಹಾಕಲು ಸರ್ಕಾರದ ನಿರ್ಧಾರ ಮಾಡಿದೆ. ಜಮೀನಿನಲ್ಲಿ ಲಭ್ಯವಾಗುವ ಖನಿಜದ ಹಕ್ಕುಗಳು ಭೂಮಾಲಿಕನಿಗೆ ಸೇರುತ್ತದೆ. ಆದರೆ, 1 ಟನ್ಗೆ 100 ರೂ.ನಂತೆ ರಾಯಲ್ಟಿ ಹಾಕಲು ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ತಿಳಿಸಿದ್ದಾರೆ.