Ajekar: ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ ಪ್ರಕರಣ; ಎರಡು ವಿಷದ ಬಾಟಲಿ ಖರೀದಿ ಮಾಡಿದ್ದ ದಿಲೀಪ್‌, ಪೊಲೀಸರಿಂದ ಒಟ್ಟು ನಾಲ್ಕು ಮೊಬೈಲ್‌ ವಶ

Share the Article

Udupi: ಅಜೆಕಾರು ದೆಪ್ಪುತ್ತೆಯ ಬಾಲಕೃಷ್ಣ ಕೊಲೆಗೆ ಸಂಬಂಧಪಟ್ಟಂತೆ ಆರೋಪಿ ಪ್ರತಿಮಾ ಗಂಡನಿಗೆ ನೀಡುತ್ತಿದ್ದ ಆಹಾರ ಪದಾರ್ಥದಲ್ಲಿ ಆರ್ಸೆನಿಕ್‌ ಟ್ರೈ ಆಕ್ಸೈಡ್‌ ಎಂಬ ವಿಷ ಪದಾರ್ಥ ಹಾಕಿರುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

ಈ ವಿಷ ಪದಾರ್ಥವನ್ನು ಪ್ರಿಯಕರ ದಿಲೀಪ್‌ ಹೆಗ್ಡೆ ಉಡುಪಿಯ ಲ್ಯಾಬ್‌ ಒಂದರಿಂದ ಪಡೆದಿದ್ದ ಎಂದು ತಿಳಿದು ಬಂದಿದ್ದು, ಅಜೆಕಾರು ಪೊಲೀಸರು ಲ್ಯಾಬ್‌ ಮಾಲಕರನ್ನು ಹಾಗೂ ಅವರ ಮೊಬೈಲ್‌ ಅನ್ನು ವಶಕ್ಕೆ ಪಡೆದಿದ್ದಾರೆ. ಇದರ ಜೊತೆ ಎ1 ಆರೋಪಿ ಪ್ರತಿಮಾಳಿಂದ ಎರಡು ಮೊಬೈಲ್‌, ಎ2 ಆರೋಪಿ ದಿಲೀಪ್‌ ಹೆಗ್ಡೆಯಿಂದ 1 ಮೊಬೈಲ್‌, ಎರಡು ಸಿಮ್‌ ಸೇರಿ ನಾಲ್ಕು ಮೊಬೈಲನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ.

ಈ ವಿಷದ ಬಾಟಲಿಯಲ್ಲಿ ಸ್ವಲ್ಪ ಸ್ವಲ್ಪವನ್ನೇ ಊಟದಲ್ಲಿ ಬೆರೆಸಿ ಸಾಯಿಸಲು ಪ್ರಯತ್ನ ಪಟ್ಟಿದ್ದ ಇವರು, ನಂತರ ಬಾಲಕೃಷ್ಣ ಅವರ ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರಿದ ಮೇಲೆ, ಹುಷಾರಾಗಿ ಬಂದ ನಂತರ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.

ಖಾಲಿಯಾದ ವಿಷದ ಬಾಟಲಿಯನ್ನು ಪ್ರಿಯಕರ ದಿಲೀಪ್‌ ಹೆಗ್ಡೆಗೆ ನೀಡಿದ ಪ್ರತಿಮಾ ಆತ ಅದನ್ನು ಕಾರ್ಕಳ ಕುಕ್ಕುಂದೂರಿನ ಅಯ್ಯಪ್ಪನಗರದ ಕುಕ್ಕುಂದೂರು-ಹಿರ್ಗಾನ ಸಂಪರ್ಕ ರಸ್ತೆಯ ಬಳಿ ಬಾಟಲಿ ಎಸೆದಿರುವುದಾಗಿ ಪೊಲೀಸರಿಗೆ ಹೇಳಿದ್ದಾನೆ. ಆದರೆ ಅ.27 ರಂದು ಪೊಲೀಸರು ಆರೋಪಿ ದಿಲೀಪ್‌ ಹೆಗ್ಡೆಯನ್ನು ಕರೆದುಕೊಂಡು ಬಾಟಲಿ ಹುಡುಕಾಟಕ್ಕೆಂದು ಹೋದಾಗ ಅಲ್ಲಿ ಯಾವುದೇ ಬಾಟಲಿ ಪತ್ತೆಯಾಗಿಲ್ಲ.

ಇದೀಗ ಬಾಲಕೃಷ್ಣ ಅವರ ತಂದೆಯ ಒಪ್ಪಿಗೆ ಮೇರೆಗೆ ಉತ್ತರಕ್ರಿಯೆ ಬಗ್ಗೆ ತೆಗೆದಿಟ್ಟಿದ್ದ ಮೂಳೆಗಳ ಎರಡು ತುಂಡುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ವಿಷ ಮೃತ ಮೂಳೆಗಳಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ.

ಪತಿಯನ್ನು ಹೇಗಾದರೂ ಮಾಡಿ ಸಾಯಿಸಬೇಕೆಂದು ಪಣ ತೊಟ್ಟಿದ್ದ ಪ್ರತಿಮಾ ಚೌತಿ ಹಬ್ಬದ ದಿನವೇ ಹಬ್ಬದ ಊಟದಲ್ಲಿ ಮೊದಲಿಗೆ ವಿಷ ಬೆರೆಸಿ ನೀಡಿದ್ದಳು. ಆ ದಿನ ವಾಂತಿ ಮಾಡಿದ್ದ ಬಾಲಕೃಷ್ಣ ಅವರಿಗೆ ನಂತರ ಸ್ವಲ್ಪ ಸ್ವಲ್ಪ ವೇ ವಿಷ ಹಾಕಿ ಅವರ ಆರೋಗ್ಯ ಪರಿಸ್ಥಿತಿ ತೀರ ಹದಗೆಡುವಂತೆ ಮಾಡಿದ್ದಳು ಈಕೆ.

ಇಂದು ದಿಲೀಪ್‌ ಕೋರ್ಟಿಗೆ
ಅ.28 ರಂದು ಆರೋಪಿ ದಿಲೀಪ್‌ ಹೆಗ್ಡೆಯನ್ನು ಸೋಮವಾರ (ಇಂದು) ಬೆಳಗ್ಗೆ ಕಾರ್ಕಳ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಲಿದ್ದಾರೆ. ಮೂರು ದಿನದ ಪೊಲೀಸ್‌ ಕಸ್ಟಡಿಗೆ ಮುಗಿದಿದ್ದು, ವಿಷದ ಬಾಟಲಿ ಸಹಿತ ಕೆಲವೊಂದು ಸೊತ್ತುಗಳನ್ನು ವಶಕ್ಕೆ ಪಡೆಯಬೇಕಾಗಿರುವ ಕಾರಣ ಇನ್ನಷ್ಟು ಹೆಚ್ಚಿನ ವಿಚಾರಣೆ ಆರೋಪಿಯನ್ನು ಮತ್ತಷ್ಟು ದಿನ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಹಾಗೆನೇ ನ್ಯಾಯಾಂಗ ಬಂಧನದಲ್ಲಿರುವ ಹಿರಿಯಡ್ಕ ಸಬ್‌ಜೈಲಿನಲ್ಲಿರುವ ಆರೋಪಿ ಪ್ರತಿಮಾಳನ್ನು ಕೂಡಾ ಪೊಲೀಸರು ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

Leave A Reply