Bidar: ನಮ್ಮ ಅಂಗಾಗ ಮುಟ್ತಾರೆ, ವಿರೋಧ ಮಾಡಿದರೆ ಹಾಲ್ ಟಿಕೆಟ್ ಕೊಡಲ್ಲ; ವಿದ್ಯಾರ್ಥಿನಿಯ ಗೋಳು

Bidar: ಶಿಕ್ಷಕರೆಂದರೆ ಒಂದು ಕಾಲದಲ್ಲಿ ಕೈ ಮುಗಿಯ ಬೇಕೆನ್ನುವ ಮನೋಭಾವ ಇತ್ತು. ಆದರೆ ಈಗೀಗ ಕೆಲವೊಂದು ಶಿಕ್ಷಕರ ವರ್ತನೆ ನಿಜಕ್ಕೂ ಅಸಹ್ಯಕರ ಎನ್ನುವ ಮಟ್ಟಿಗೆ ಹೋಗಿದೆ. ವಿದ್ಯಾ ಬುದ್ಧಿ ಕಲಿತು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬಾಳಬೇಕೆನ್ನುವ ವಿದ್ಯಾರ್ಥಿಗಳಿಗೆ ಇಲ್ಲಿನ ಶಿಕ್ಷಕರು ಅಸಹ್ಯ ರೀತಿಯಲ್ಲಿ ನೋಡುವ, ಮೈ ಮುಟ್ಟುವ ಚಾಳಿ ಹೊಂದಿರುವ ಕುರಿತು ವರದಿಯಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ತವರು ಕ್ಷೇತ್ರವಾದ ಭಾಲ್ಕಿ ತಾಲೂಕಿನ ಕೋನಮೇಳ ಕುಂದಾ ಮೊರಾರ್ಜಿ ವಸತಿ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರು ಈ ಆರೋಪವನ್ನು ಮಾಡಿದ್ದಾರೆ. ಇಲ್ಲಿ ಶಿಕ್ಷಕರು ನಮ್ಮನ್ನು ಅಸಹ್ಯವಾಗಿ ನೋಡುತ್ತಾರೆ. ಅಂಗಾಗ ಮುಟ್ಟುತ್ತಾರೆ. ವಿರೋಧ ಮಾಡಿದರೆ ಹಾಲ್‌ಟಿಕೆಟ್ ಕೊಡೋಲ್ಲ ಎಂದು ಹೆದರಿಸ್ತಾರೆ. ಈ ನರಕದಿಂದ ನಮ್ಮನ್ನು ಪಾರು ಮಾಡ್ತಿ ಎಂದು ಅಂಗಲಾಚಿದ್ದಾರೆ.
ಈ ವರದಿಯನ್ನು ಮಾಧ್ಯಮವೊಂದು ಬಿತ್ತರ ಮಾಡಿದ ಕೂಡಲೇ ಸಚಿವರು ಸೋಮವಾರ ಶಾಲೆಗೆ ಭೇಟಿ ನೀಡಿದ್ದಾರೆ. ವಸತಿ ಶಾಲೆಯ ಪ್ರಿನ್ಸಿಪಾಲ್, ವಾರ್ಡನ್, ಹಿಂದಿ, ಕನ್ನಡ, ಇಂಗ್ಲೀಷ್ ಭಾಷಾ ಶಿಕ್ಷಕರ ದೌರ್ಜನ್ಯದ ಕುರಿತು ಮಾಧ್ಯಮದೆದುರು ವಿದ್ಯಾರ್ಥಿನಿಯರು ಹೇಳಿದ್ದಾರೆ. ಸರಿಯಾಗಿ ಊಟ ನೀಡಲ್ಲ. ಶುದ್ಧ ಕುಡಿಯುವ ನೀರು ಕೊಡಲ್ಲ. ಅಶುದ್ಧ ನೀರು ಕುಡಿದು ಚರ್ಮರೋಗ ಉಂಟಾಗಿದೆ. ಔಷಧಿ ಕೇಳಿದರೆ ಡೇಟ್ ಮುಗಿದ ಔಷಧಿ ನೀಡುತ್ತಾರೆ ಎಂದು ಮಾಧ್ಯಮದೆದುರು ವಿದ್ಯಾರ್ಥಿನಿಯರು ಹೇಳಿದ್ದಾರೆ.
ಸಚಿವರು ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಎಲ್ಲಾ ವಿದ್ಯಾರ್ಥಿಗಳನ್ನು ಖುದ್ದಾಗಿ ಭೇಟಿ ನೀಡಿದ್ದೇನೆ. ವೈಯಕ್ತಿಕವಾಗಿ ವಿಚಾರಿಸಿದ್ದು, ಊಟ, ವಸತಿ, ಶಿಕ್ಷಣದ ಕುರಿತು ಸಕಾರಾತ್ಮಕ ಉತ್ತರ ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಭೇಟಿ ನೀಡಲು ತಿಳಿಸುತ್ತೇನೆ. ಅವ್ಯವಸ್ಥೆ ಏನಾದರೂ ಕಂಡು ಬಂದರೆ ಕ್ರಮ ಕೈಗೊಳ್ಳಲು ತಿಳಿಸುತ್ತೇನೆ ಎಂದು ಹೇಳಿದರು.