Ganesha Chaturthi: ಬಲಮುರಿ ಗಣೇಶ ಅಥವಾ ಎಡಮುರಿ ಗಣೇಶನಲ್ಲಿ ಯಾವುದು ಶ್ರೇಷ್ಠ ?!

Ganesha Chaturthi: ಇಡೀ ದೇಶ ಗೌರಿ-ಗಣೇಶ ಹಬ್ಬವನ್ನು(Ganesha Chaturthi ) ಆಚರಿಸಲು ಕಾತರವಾಗಿದೆ. ಗಣೇಶನನ್ನು ಕೂರಿಸಿ, ಪ್ರತಿಷ್ಠಾಪಿಸಿ ವಾರ, ತಿಂಗಳುಗಟ್ಟೆ ಸಂಭ್ರಮಿಸಲು ಇನ್ನು ದಿನವಷ್ಟೇ ಬಾಕಿ ಇದೆ. ಒಟ್ಟಿನಲ್ಲಿ ಹಿಂದೂ ಬಾಂಧವರಿಗೆ ಇದು ವೈಭವದಿಂದ, ಸಂಭ್ರಮದಿಂದ, ಭಯ-ಭಕ್ತಿಗಳಿಂದ ಸಂಭ್ರಮಿಸೋ ಅತೀ ದೊಡ್ಡ ಹಬ್ಬ.

ಇನ್ನು ಗಣೇಶನನ್ನು ಹಬ್ಬದ ಸಂದರ್ಭದಲ್ಲಿ ಮಾತ್ರ ನೆನೆಯುವುದಲ್ಲ. ಹಿಂದೂ ಧರ್ಮದಲ್ಲಿ, ಗಣೇಶನನ್ನು ಮೊದಲ ಪೂಜಿಪ ದೇವನೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ವಿಗ್ರಹವನ್ನು ಮನೆಯಲ್ಲಿ ಇಡುವುದರಿಂದ ಅಥವಾ ಪ್ರತಿಷ್ಠಾಪನೆ ಮಾಡುವುದರಿಂದ, ವಿಗ್ರಹದ ಅಥವಾ ಫೋಟೋದ ಸರಿಯಾದ ದಿಕ್ಕನ್ನು ಆರಿಸುವುದು ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇಂದು ನಾವು ಎಡಮುರಿ ಮತ್ತು ಬಲಮುರಿ ಗಣೇಶನ ಮೂರ್ತಿಗಳಲ್ಲಿ ಯಾವುದು ಶ್ರೇಷ್ಠ? ಇವುಗಳ ನಡುವಿನ ವ್ಯತ್ಯಾಸ ಏನು? ಎಂದು ತಿಳಿಯೋಣ.

ಬಲಮುರಿ ಗಣಪ:
ಬಲಮುರಿ ಗಣಪ ಎಂದರೆ ಆತ ದಕ್ಷಿಣಾಭಿಮುಖಿ ಎನ್ನಲಾಗಿದೆ. ಅಂದರೆ ದಕ್ಷಿಣ ದಿಕ್ಕಿಗೆ ಇರುವುದು ಯಮಲೋಕ. ದಕ್ಷಿಣ ದಿಕ್ಕು ಯಮಲೋಕದ ಕಡೆಗೆ ಕರೆದೊಯ್ಯುವುದಾಗಿದೆ ಮತ್ತು ಬಲಬದಿಯಲ್ಲಿ ಸೂರ್ಯನಾಡಿಯಿದೆ. ಯಾರು ಯಮಲೋಕದ ದಿಕ್ಕನ್ನು ಎದುರಿಸಬಲ್ಲರೋ ಅವರು ಶಕ್ತಿಶಾಲಿಯಾಗಿರುತ್ತಾರೆ ಎಂದು ನಂಬಲಾಗಿದೆ. ಬಲಗಡೆಗೆ ಸೊಂಡಿಲಿರುವ ಗಣಪತಿಯನ್ನು ‘ಜಾಗೃತ’ ಗಣಪತಿ ಎಂದು ಹೇಳುತ್ತಾರೆ. ಹೀಗಾಗಿಯೇ ದಕ್ಷಿಣಾಭಿಮುಖಿ ಗಣಪನ ಪೂಜೆ ಮಾಡುವುದಿಲ್ಲ. ಇಂತಹ ಮೂರ್ತಿಯ ಪೂಜೆಯನ್ನು, ಕರ್ಮಕಾಂಡದಲ್ಲಿನ ಎಲ್ಲ ಪೂಜಾವಿಧಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮಾಡಬೇಕಾಗುತ್ತದೆ. ಹೀಗಾಗಿ ಕೆಲವೇ ಕೆಲವೂ ಮೂರ್ತಿಗಳು ಬಲಮುರಿ ಗಣಪ ಆಗಿರುತ್ತವೆ. ಮಿಕ್ಕಿದ್ದೆಲ್ಲವು ಎಡಮುರಿ ಗಣಪನಾಗಿರುತ್ತೆ. ಬಲಮುರಿ ಗಣಪತಿಯನ್ನು ಪ್ರತಿನಿತ್ಯ ಪೂಜಿಸಲು ಒಪ್ಪಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಬಲಮುರಿ ಗಣಪತಿಯು ಉಷ್ಣಕಾರಕನಾಗಿದ್ದು, ಪೂಜೆ ಅಥವಾ ಇನ್ನಿತರ ವಿಷಯಗಳಲ್ಲಿ ಹೆಚ್ಚಿನ ಲೋಪವಾದಲ್ಲಿ ಇದು ಅನಾಹುತಕ್ಕೆ ದಾರಿಯಾಗಬಹುದು ಎಂದು ಹೇಳಲಾಗಿದೆ.

ಎಡಮುರಿ ಗಣೇಶನ :
ಎಡಮುರಿ ಗಣೇಶನು ಎಡಕ್ಕೆ ಬಾಗಿದ ಸೊಂಡಿಲು, ಮೋದಕ, ಮಾಲೆ, ಕಮಲ, ವೀಳ್ಯದೆಲೆ, ದುರ್ವಾ, ರತ್ನಗಳು ಇತ್ಯಾದಿಗಳನ್ನು ಧರಿಸುತ್ತಾನೆ. ಇಂದು ಬಹುತೇಕ ದೇವಾಲಯ, ಸಾರ್ವಜನಿಕ ಗಣೇಶೋತ್ಸವ ಸೇರಿ ಹಲವು ಕಡೆಗಳಲ್ಲಿ ನೋಡುವುದು ಈ ಎಡಮುರಿ ಗಣಪನನ್ನು. ಎಡಮುರಿ ಗಣಪನನ್ನು ವಾಮಮುಖಿ ಎಂದು ಕರೆಯಲಾಗುತ್ತದೆ. ವಾಮ ಎಂದರೆ ಉತ್ತರ ದಿಕ್ಕು, ಬಲಬದಿಗೆ ಸೂರ್ಯನಾಡಿ ಇದ್ದರೆ ಈ ಎಡಬದಿಗೆ ಚಂದ್ರನಾಡಿ ಇರುತ್ತದೆ. ಇದು ಆಧ್ಯಾತ್ಮಿಕವಾಗಿ ಶಾಂತಿ, ನೆಮ್ಮದಿ ತರುವಂತಹ ದಿಕ್ಕಿನ ಸೂಚಕವಾಗಿದೆ. ಹೀಗಾಗಿ ಯಾವುದೇ ಸಮಸ್ಯೆಗಳಿಲ್ಲ, ಯಾವುದೇ ಆಚರಗಳಿಲ್ಲದೆ ಎಡಮುರಿ ಗಣಪನನ್ನು ಯಾರು ಬೇಕಾದರೂ ಪೂಜಿಸಬಹುದು. ಎಡಮುರಿ ಗಣೇಶನ ಪೂಜೆ ವಿಧಾನ ನೋಡುವದಾದರೆ ಸಾಮಾನ್ಯ ಪೂಜೆ ವಿಧಾನ, ಇದರಲ್ಲಿ ಷೋಡಶೋಪಚಾರ ಪೂಜೆ, ಗಣಪತಿ ಆರತಿ, ಸ್ತುತಿ ಮತ್ತು ಮಂತ್ರಗಳ ಪಠಣ ಸೇರಿವೆ.

ಗಣಪತಿ ಪೂಜೆಯಲ್ಲಿ ಈ ವಿಚಾರಗಳು ನಿಮ್ಮ ಗಮನದಲ್ಲಿರಲಿ:
ಮನೆಯಲ್ಲಿ ಗಣಪತಿ ವಿಗ್ರಹವನ್ನು ಸ್ಥಾಪಿಸುವಾಗ, ಸೊಂಡಿಲಿನ ದಿಕ್ಕಿನ ಆಯ್ಕೆಯು ನಿಮ್ಮ ಆಸೆ, ಅವಶ್ಯಕತೆ ಮತ್ತು ನಂಬಿಕೆಯನ್ನು ಅವಲಂಬಿಸಿರುತ್ತದೆ. ನಿಮಗೆ ಸಂತೋಷ, ಶಾಂತಿ ಮತ್ತು ಸಮೃದ್ಧಿ ಬೇಕಾದರೆ ಎಡಮುರಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸುವುದು ಮಂಗಳಕರವಾಗಿರುತ್ತದೆ. ನೀವು ಶಕ್ತಿ, ಧೈರ್ಯ ಮತ್ತು ವಿಜಯವನ್ನು ಬಯಸಿದರೆ, ಬಲಮುರಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸುವುದು ಮಂಗಳಕರವಾಗಿರುತ್ತದೆ. ನೀವು ಎಲ್ಲಾ ರೀತಿಯ ಸಾಧನೆಗಳು ಮತ್ತು ಸಂತೋಷದ ಜೀವನವನ್ನು ಬಯಸಿದರೆ, ಸಿದ್ಧಿವಿನಾಯಕ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸುವುದು ಮಂಗಳಕರವಾಗಿರುತ್ತದೆ. ವಿಗ್ರಹದ ಗಾತ್ರವು ಮನೆಯ ಗಾತ್ರಕ್ಕೆ ಅನುಗುಣವಾಗಿರಬೇಕು. ಮೂರ್ತಿಯ ಮುಖದಲ್ಲಿ ನಗು ಇರಬೇಕು. ಮೂರ್ತಿಯನ್ನು ಎತ್ತರದ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕು. ಈ ವಿಗ್ರಹವನ್ನು ನೀವು ನಿತ್ಯ ಪೂಜಿಸಬೇಕು.

Leave A Reply

Your email address will not be published.