Jailbreak: ಜೈಲಿನಿಂದ ತಪ್ಪಿಸಿಕೊಳ್ಳಲು ದಂಗೆ ಎದ್ದ ಖೈದಿಗಳು! 129 ಕೈದಿಗಳು ಸಾವು, 59 ಜನರಿಗೆ ಗಾಯ

Jailbreak: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ರಾಜಧಾನಿ ಕಿನ್ಶಾಸಾದಲ್ಲಿರುವ ಕೇಂದ್ರ ಮಕಾಲಾ ಜೈಲಿನಿಂದ ಪಲಾಯನ (Jailbreak) ಮಾಡುವ ಪ್ರಯತ್ನದಲ್ಲಿ 129 ಜನರು ಸಾವನ್ನಪ್ಪಿದ್ದು ಮತ್ತು ಸುಮಾರು 59 ಜನರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಆಂತರಿಕ ಸಚಿವ ಶಬಾನಿ ಲುಕೋ ಅವರು ನೀಡಿರುವ ಮಾಹಿತಿಯಂತೆ ಕಿನ್ಶಾಸಾದಲ್ಲಿರುವ ಕೇಂದ್ರ ಮಕಾಲಾ ಜೈಲಿನಿಂದ ಖೈದಿಗಳು ಎಲ್ಲರೂ ಸೇರಿ ಓಡಿ ಹೋಗಲು ಪ್ರಯತ್ನ ಮಾಡಿದ್ದರು. ಕೂಡಲೇ ಜೈಲು ಸಿಬ್ಬಂದಿ ಎಚ್ಚೆತ್ತು ಪರಿಸ್ಥಿತಿ ನಿಭಾಯಿಸಲು ಹೋದಾಗ ಅಷ್ಟು ಸಾವು ನೋವುಗಳು ನಡೆದಿದೆ.
ಈ ಘಟನೆಯಲ್ಲಿ ಜೈಲಿನ ಕಟ್ಟಡಕ್ಕೂ ಹಾನಿಯಾಗಿದೆ ಎಂದು ಸಚಿವ ಶಬಾನಿ ಲುಕೋ ತಿಳಿಸಿದ್ದಾರೆ. ಇದೇ ವೇಳೆ ಅಡುಗೆ ಕೋಣೆಯಿಂದ ಬೆಂಕಿ ಆವರಿಸಿ ಹಲವು ಕೈದಿಗಳು ಸಾವನ್ನಪ್ಪಿದ್ದಾರೆ. ಮಾಹಿತಿ ಪ್ರಕಾರ, ಕೆಲವರು ನೂಕು ನುಗ್ಗಲು ಹಾಗೂ ಉಸಿರುಗಟ್ಟುವಿಕೆಯಿಂದಾಗಿ ಸಾವನ್ನಪ್ಪಿದ್ದಾರೆ. ಆದರೆ ಯಾವುದೇ ಕೈದಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ ಮತ್ತು ತಪ್ಪಿಸಿಕೊಳ್ಳಲು ಪ್ರಯತ್ನಿಸಿದವರು ಸಾವನ್ನಪ್ಪಿದ್ದಾರೆ ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.