Multiple farming: ವಿವಿಧ ಬೇಸಾಯ ಪದ್ಧತಿಗಳಿಂದ ಕೀಟ ನಿರ್ವಹಣೆ ಸಾಧ್ಯ
Multiple farming: ಕೀಟಗಳ ನಿರ್ವಹಣೆಯಲ್ಲಿ ಬೇಸಾಯ ಪದ್ಧತಿಗಳಿಗೆ ಅತೀ ಹೆಚ್ಚಿನ ಪ್ರಾಮುಖ್ಯತೆ ಇರುವುದು. ಏಕೆಂದರೆ ಈ ಪದ್ಧತಿಗಳು ಅತಿ ಕಡಿಮೆ ವೆಚ್ಚದಲ್ಲಿ ವಾತಾವರಣವನ್ನು ಮಾಲಿನ್ಯಗೊಳಿಸದೇ, ಸಮರ್ಪಕ ರೀತಿಯಲ್ಲಿ ಕೀಟ ಹತೋಟಿ ಮಾಡುತ್ತವೆ. ವಿವಿಧ ಬೇಸಾಯ ಪದ್ಧತಿಗಳ ಮೂಲಕ ಕೀಟಗಳ ಹತೋಟಿ ಮಾಡುವ ಪದ್ಧತಿಗಳ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
ಸಸಿಗಳ ಅಂತರ : ಶಿಫಾರಸ್ಸು ಮಾಡಿದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೀಜವನ್ನು ಉಪಯೋಗಿಸುವುದರಿಂದ ಶೇಂಗಾದಲ್ಲಿ ಕುಡಿ ಸಾಯುವ ರೋಗ, ತೊಗರಿಯಲ್ಲಿ ಕಾಯಿಕೊರಕ, ಸೋಯಾ ಅವರೆಯಲ್ಲಿ ಕಾಯಿ ಹಾಗೂ ಎಲೆ ತಿನ್ನುವ ಕೀಟದ ಭಾದೆ ಜಾಸ್ತಿಯಾಗುವುದು.
ಬಲೆ ಬೆಳೆ ಬೆಳೆಯುವುದು : ಹತ್ತಿ, ಮೆಣಸಿನಕಾಯಿ, ಟೊಮ್ಯಾಟೋ ಬೆಳೆಗಳಲ್ಲಿ ಚೆಂಡು ಹೂವಿನ ಗಿಡಗಳನ್ನು ಹತ್ತು ಮೀಟರ್ ಅಂತರದಲ್ಲಿ ಹಾಕಿ, ಇವುಗಳಿಗೆ ಬರುವ ಕಾಯಿಕೊರಕ ಮತ್ತು ಕಾಂಡ ಕೊರೆಯುವ ಮೂತಿಹುಳು ಬಾಧೆಯನ್ನು ನಿಯಂತ್ರಿಸಬಹುದಾಗಿದೆ.
ಅಂತರ ಬೆಳೆ ಬೆಳೆಯುವುದು : ಈ ಪದ್ಧತಿಯಲ್ಲಿ ಕೀಟ ಹಾಗೂ ರೋಗಗಳಿಂದ ಅಥವಾ ಹವಾಮಾನ ವೈಪರೀತ್ಯದಿಂದ ಒಂದು ಬೆಳೆ ನಾವಾದರೇ ಇನ್ನೊಂದು ಬೆಳೆ ಬರುವುದಲ್ಲದೆ, ಬೆಳೆಗಳಲ್ಲಿ ಶತ್ರು ಕೀಟಗಳ ನೈಸರ್ಗಿಕ ಶತ್ರುಗಳನ್ನು ಹೆಚ್ಚಿಗೆ ಮಾಡಬಹುದು.
ಗಡಿ ಬೆಳೆ : ಹೊಲದ ಸುತ್ತಲೂ ಅಂದರೆ ಮುಖ್ಯ ಬೆಳೆಗಳಾದ ಮೆಣಸಿನಕಾಯಿ, ಉಳ್ಳಾಗಡ್ಡಿ, ಹತ್ತಿ ಸುತ್ತಲೂ ಮೆಕ್ಕೆಜೋಳ/ ಜೋಳ ಗಡಿ ಬೆಳೆಗಳನ್ನಾಗಿ 3-6 ಸಾಲು ಬೆಳೆಯುವುದರಿಂದ, ಗಾಳಿಯ ಮುಖಾಂತರ ಪಸರಿಸುವ ಗ್ರೀಪ್ಸ್ ನುಸಿ, ಮೈಟ್‌ನುಸಿ ಅಲ್ಲದೇ ಇತರೆ ಕೀಟಗಳನ್ನು ಮುಖ್ಯ ಬೆಳೆಗೆ ಬರದಂತೆ ತಡೆಯಬಹುದು.
ರೋಗ ನಿರೋಧಕ ತಳಿಗಳು: ಸಾಮಾನ್ಯವಾಗಿ ಸ್ಥಳೀಯವಾಗಿ ಲಭ್ಯವಿರುವ ತಳಿಗಳಿಗೆ ಕೀಟ ಹಾಗೂ ರೋಗ ಅಷ್ಟೊಂದು ಬರುವುದಿಲ್ಲ. ಅಂತಹ ತಳಿಗಳನ್ನು ಗುರುತಿಸಿ ಬೆಳೆಯುವುದು ಅತೀ ಅವಶ್ಯಕವಾಗಿದೆ.