Jai cinema Title launch: ಸಿನಿಮಾ – ರಾಜಕೀಯ ಒಂದೇ ಥರ, ಆದ್ರೆ ನಿಮ್ಮಲ್ಲಿ ಹೀರೋ- ವಿಲನ್ ಯಾರೆಂದು ಗೊತ್ತಾಗುತ್ತೆ, ನಮ್ಮಲ್ಲಿ ಕೊನೆತನಕ ಗೊತ್ತಾಗಲ್ಲ- ಯು ಟಿ ಖಾದರ್ ಚಟಾಕಿ !

Jai Title launch: ಬಿಗ್ ಬಾಸ್ ಖ್ಯಾತಿಯ ತುಳುನಾಡ ಕುವರ ರೂಪೇಶ್ ಶೆಟ್ಟಿ ಅಭಿನಯದ ಮುಂದಿನ ತುಳು ಚಿತ್ರ ʻಜೈʼ ಸಿನಿಮಾದ ಟೈಟಲ್ ಅನಾವರಣ (Jai Title launch) ಕಾರ್ಯಕ್ರಮ ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನಲ್ಲಿ ನೇರವೇರಿತ್ತು. ಕಾರ್ಯಕ್ರಮಕ್ಕೆ ವಿಧಾನಸಭಾಧ್ಯಕ್ಷರು ಯು ಟಿ ಖಾದರ್, ಸಂಸದ ಬೃಜೇಶ್ ಚೌಟ ಹಾಗೂ ಶಾಸಕ ವೇದವ್ಯಾಸ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭ ಸ್ಪೀಕರ್ ಯುಟಿ ಖಾದರ್ ಅವರು ಮಾತನಾಡಿದ ಸ್ವಾರಸ್ಯಕರ ವಿಡಿಯೋ ಒಂದು ವೈರಲ್ ಆಗುತ್ತಿದೆ. ಸಿನಿಮಾ – ರಾಜಕೀಯ ಒಂದೇ ಥರ, ಆದ್ರೆ ನಿಮ್ಮಲ್ಲಿ ಹೀರೋ- ವಿಲನ್ ಯಾರೆಂದು ಗೊತ್ತಾಗುತ್ತೆ, ನಮ್ಮಲ್ಲಿ ಕೊನೆತನಕ ಗೊತ್ತಾಗಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿ ಎಲ್ಲರನ್ನೂ ನಗಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಪೀಕರ್ ಯು ಟಿ ಖಾದರ್, ತುಳು ಭಾಷೆ, ಸಿನಿಮಾ, ರಂಗಭೂಮಿ ಮುಖಾಂತರ ದೇಶ ವಿದೇಶಗಳಲ್ಲಿ ಪ್ರಚಾರ ಪಡೆಯುತ್ತಿದೆ. ತುಳು ಭಾಷೆ ಬೆಳವಣಿಗೆಗೆ ಇತ್ತೀಚಿನ ಯುವಕರ ಪಾತ್ರ ಬಹಳ ಇದೆ. ಹಾಗೆ ರೂಪೇಶ್ ಶೆಟ್ಟಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ ಎಂದರು. ಇದೇ ವೇಳೆ ಅವರು ಮಾತನಾಡುತ್ತಾ ಸಿನಿಮಾಕ್ಕೂ, ರಾಜಕೀಯಕ್ಕೂ ಹೆಚ್ಚಿನ ವ್ಯತ್ಯಾಸ ಏನು ಇಲ್ಲ. ಸಿನಿಮಾದಲ್ಲೂ ಹೀರೋ, ವಿಲನ್ ಇರ್ತಾರೆ. ಅದೇ ರೀತಿ ನಮ್ಮ ರಾಜಕೀಯದಲ್ಲೂ ಹೀರೋ, ವಿಲನ್, ನಿರ್ದೇಶಕರು, ನಿರ್ಮಾಪಕರು ಇರುತ್ತಾರೆ. ಆದರೆ ಒಂದು ವ್ಯತ್ಯಾಸ ಏನೆಂದರೆ ಸಿನಿಮಾದಲ್ಲಿ ಹೀರೋ, ವಿಲನ್ ಯಾರೆಂದು ಗೊತ್ತಾಗುತ್ತದೆ. ಆದರೆ ನಮ್ಮ ರಾಜಕೀಯದಲ್ಲಿ ಕೊನೆವರೆಗೂ ಹೀರೋ, ವಿಲನ್ ಯಾರೆಂದು ಗೊತ್ತಾಗುವುದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದೇ ವೇಳೆ ವೇದಿಕೆಯಲ್ಲಿದ್ದ ಶಾಸಕ ವೇದವ್ಯಾಸ ಕಾಮತ್, ಸಂಸದ ಬೃಜೇಶ್ ಚೌಟ ಅವರ ಮಾತಿಗೆ ನಕ್ಕು ಮಾತನ್ನು ಸಮರ್ಥಿಸಿಕೊಂಡರು.
ಈ ಮಾತನ್ನು ಕೇಳಿ ಸಭೆಯ ಕಡೆಯಿಂದ ಜೋರು ಚಪ್ಪಾಳೆ, ಶಿಳ್ಳೆ, ಕೂಗಾಟ ಕೇಳಿಬಂತು. ಯು ಟಿ ಖಾದರ್ ಜನ ಮೆಚ್ಚಿದ ರಾಜಕಾರಣಿ. ಅವರು ಎಲ್ಲಾ ಧರ್ಮದವರನ್ನು ಒಂದೇ ತಕ್ಕಡಿಯಲ್ಲಿ ತೂಗುತ್ತಾರೆ. ಸದಾ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುತ್ತಾರೆ. ಯಾವುದೇ ಸಮಾರಂಭಗಳಿಗೆ ಕರೆದರು ಹೋಗಿ ಮನದುಂಬಿ ಹಾರೈಸುತ್ತಾರೆ. ಇಲ್ಲೂ ರೂಪೇಶ್ ಶೆಟ್ಟಿ ಹಾಗೂ ಚಿತ್ರ ತಂಡಕ್ಕೆ ಸಿನಿಮಾ ಗೆಲ್ಲಲಿ ಎಂದು ಹಾರೈಸಿದರು. ಇದೇ ವೇಳೆ ವೇದವ್ಯಾಸ ಕಾಮತ್, ಹಾಗೂ ಚೌಟ ಅವರು ಸಿನಿಮಾ ಯಶಸ್ವಿಯಾಗಲೆಂದು ಹರಸಿದರು.
ʻಜೈʼ ತುಳು ಸಿನಿಮಾ ಆರ್ ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ರೆಡಿಯಾಗುತ್ತಿದೆ. ರೂಪೇಶ್ ಶೆಟ್ಟಿ ನಿರ್ದೇಶನದ ಮೊದಲ ಚಿತ್ರಕ್ಕೆ ಪ್ರಸನ್ನ ಶೆಟ್ಟಿ ಬೈಲೂರು ಕತೆ, ಸಂಭಾಷಣೆ ಬರೆದಿದ್ದಾರೆ. ವಿನುತ್ ಕೆ ಅವರ ಕ್ಯಾಮರಾ, ಲೊಯ್ ವೆಲೆಂಟಿನ್ ಸಲ್ದಾನ ಅವರ ಸಂಗೀತ, ರಾಹುಲ್ ವಸಿಷ್ಠ ಅವರ ಸಂಕಲನ, ನವೀನ್ ಶೆಟ್ಟಿ ಆರ್ಯನ್ಸ್ ಅವರ ನೃತ್ಯ ಈ ಚಿತ್ರಕ್ಕಿದೆ. ಈ ಸಿನಿಮಾವನ್ನು ನಿರ್ಮಾಪಕ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ನಿಉರ್ಮಿಸುತ್ತಿದ್ದಾರೆ. ಸಹ ನಿರ್ಮಾಪಕರಾಗಿ ದೀಕ್ಷಿತ್ ಆಳ್ವ, ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಆಗಿ ನವೀನ್ ಶೆಟ್ಟಿ ಕೈ ಜೋಡಿಸಿದ್ದಾರೆ.
‘ಜೈ ಒಯಿಕ್ಲಾ ಸೈ” ಈ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ದೇವದಾಸ್ ಕಾಪಿಕಾಡ್, ಕುಸಲ್ದರಸೆ ನವೀನ್ ಡಿ ಪಡೀಲ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್ ಮೊದಲಾದವರು ಅಭಿನಯಿಸಲಿದ್ದಾರೆ.