D K Shivakumar: ನವರಂಗಿ ನಕಲಿ ಸ್ವಾಮಿ ವಿರುದ್ಧ ರಾಜ್ಯಪಾಲರ ಕ್ರಮ ಏಕಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಗುಡುಗು

Share the Article

D K Shivakumar: “ಜನತಾದಳದ ಅಗ್ರಗಣ್ಯ ನಾಯಕ, ನವರಂಗಿ ನಕಲಿ ಸ್ವಾಮಿ, ಬರೀ ಬುರುಡೆ ಬಿಡುವ ಕುಮಾರಸ್ವಾಮಿ ವಿರುದ್ದ ಇಲ್ಲದ ಕ್ರಮ ನಮ್ಮ ವಿರುದ್ದವೇಕೆ ರಾಜ್ಯಪಾಲರೇ? ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ (D K Shivakumar) ಪ್ರಶ್ನಿಸಿದ್ದಾರೆ. ಮುಂದಿನ 10 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಅಧಿಕಾರದಲ್ಲಿರುತ್ತೆ. ನಿಮ್ಮ ಏನೇ  ಹುನ್ನಾರ ಮಾಡಿದ್ರೂ ನಮ್ಮ ಸರ್ಕಾರ ಜಗ್ಗುವುದಿಲ್ಲ, ಬಗ್ಗುವುದಿಲ್ಲ, ಹೆದರುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಗುಡುಗಿದರು. ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಶನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಖಂಡಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಲ್ಳಲಾಗಿತ್ತು. ಈ ವೇಳೆ ಭಾಷಣದ ಉದ್ದಕ್ಕೂ ಪ್ರತಿಪಕ್ಷಗಳ ಹುನ್ನಾರದ ವಿರುದ್ಧ್‌ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಯಾಗಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡಿದ್ರು. ವಿರೋಧ ಪಕ್ಷದವರು ಹತ್ತು ಜನ್ಮ ಎತ್ತಿ ಬಂದ್ರೂ ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸಲು ಆಗಲ್ಲ. ಮುಖ್ಯಮಂತ್ರಿಗಳು ರಾಜಿನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಅವರ ಪರವಾಗಿ ಡಿ.ಕೆ.ಶಿವಕುಮಾರ್  ಮಾತ್ರ ಅಲ್ಲ, ಇಡೀ ಇಂಡಿಯಾ ಒಕ್ಕೂಟ ಮತ್ತು ರಾಜ್ಯದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಕಟ್ಟ ಕಡೆಯ ಮತದಾರರು ಬೆನ್ನಲುಬಾಗಿ ನಿಲ್ಲಲಿದ್ದಾರೆ.

*ರಾಜ್ಯಪಾಲರೇ ಬಿಜೆಪಿಯವರು ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ*

“ಸರ್ಕಾರ ನೀಡಿರುವ ಸಲಹೆಗಳನ್ನೂ ಓದದ ರಾಜ್ಯಪಾಲರು ಟಿ.ಜೆ.ಅಬ್ರಹಾಂ ಎನ್ನುವ ವ್ಯಕ್ತಿ ಬೆಳಗ್ಗೆ ಅರ್ಜಿ ಕೊಟ್ಟರೆ, ಸಾಯಂಕಾಲದ ವೇಳೆಗೆ ಒಂದೇ ದಿನದಲ್ಲಿ ಮುಖ್ಯಮಂತ್ರಿಗಳಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಬಿಜೆಪಿಯವರು ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ರಾಜ್ಯಪಾಲರೇ ನಿಮ್ಮದು ಸಾಂವಿಧಾನಿಕ ಹುದ್ದೆ, ನಿಮ್ಮ ಮೇಲೆ ಈಗಲೂ ಗೌರವವಿದೆ. ನಿಮಗೆ ಸಾಕಷ್ಟು ಸಮಯವಿದ್ದು ವಿಚಾರಣೆಗೆ ನೀಡಿರುವ ಅನುಮತಿ ವಾಪಸ್ ಪಡೆಯಿರಿ” ಎಂದು ಆಗ್ರಹಿಸಿದರು.

*ರಾಜ್ಯಪಾಲರ ಹುದ್ದೆ ಸೃಷ್ಟಿ ಮಾಡಿದ್ದೇ ಕಾಂಗ್ರೆಸ್*

“ರಾಜ್ಯಪಾಲರು ಸಿಎಂ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ವಿರುದ್ದ ನ್ಯಾಯಲಯದಲ್ಲಿ ನಮ್ಮ ಪರ ನ್ಯಾಯ ಸಿಗುತ್ತದೆ ಅನ್ನುವ ನಂಬಿಕೆ ಇದೆ. ಹಿಂಬಾಗಿಲ ಮೂಲಕ ಬಿಜೆಪಿ, ಜೆಡಿಎಸ್ ರಾಜ್ಯಪಾಲರನ್ನು ಬಳಕೆ ಮಾಡಿಕೊಳ್ಳುತ್ತಿವೆ. ಸಂವಿಧಾನದ ಮುಖಾಂತರ ರಾಜ್ಯಪಾಲರ ಹುದ್ದೆ ಸೃಷ್ಟಿ ಮಾಡಿದ್ದೇ ಕಾಂಗ್ರೆಸ್ ಸರ್ಕಾರ. ನಮ್ಮ ಪಕ್ಷ ಕೊಟ್ಟಿರೋ ಸಂವಿಧಾನದ ಹಕ್ಕನ್ನು ಈಗ ಬಿಜೆಪಿ ದುರುಪಯೋಗ ಮಾಡಿಕೊಂಡು ಸಿಎಂ ವಿರುದ್ಧ ವಿಚಾರಣೆಗೆ ಅವಕಾಶ ನೀಡಿರೋದು ನಿಜಕ್ಕೂ ಹಾಸ್ಯಾಸ್ಪದ” ಎಂದರು.

*ರಾಜ್ಯಪಾಲರೇ ಒಳಸಂಚು ಏಕೆ?*

“ಜನ ಬಹುಮತ ನೀಡಿದ ಪಕ್ಷಕ್ಕೆ ರಾಜ್ಯಪಾಲರು ಸರ್ಕಾರ ರಚನೆ ಮಾಡಲು ಪ್ರಮಾಣ ವಚನ ಭೋದನೆ ಮಾಡಿದ್ದಾರೆ. ಈಗ ಯಾಕೆ ಒಳಸಂಚು ಮಾಡುತ್ತಿದ್ದಾರೆ. ನಿಮಗೆ ಸಂವಿಧಾನವನ್ನು ಕಾಪಾಡೋ ಜವಾಬ್ದಾರಿ ಇರೋದು. ಆದರೆ ನೀವು ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಿ.  ರಾಜ್ಯಪಾಲರ ಸ್ಥಾನಕ್ಕೆ ಕಳಂಕ ತರಬಾರದು ಎಂದು ಸಲಹೆ ನೀಡುತ್ತಿದ್ದೇವೆ” ಎಂದು ಹೇಳಿದರು.

*ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲು ಸಾಧ್ಯವಿಲ್ಲ*

“ಬಿಜೆಪಿಯ ಹುನ್ನಾರಗಳನ್ನು ಜನರಿಗೆ ತಿಳಿಸುವ ಕೆಲಸವನ್ನು  ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ. ಈ ಹಿಂದೆ ಬಿಜೆಪಿ 17 ಜನರನ್ನು ಕರೆದುಕೊಂಡು ಹೋಗಿ ಆಪರೇಷನ್ ಕಮಲ ಮಾಡಿ ಜನತಾದಳ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿತ್ತು. ಈ ಬಾರಿಯೂ ಪ್ರಯತ್ನ ಪಟ್ರೂ. ಆದರೆ ಅದು ಆಗಲಿಲ್ಲ. ಮುಂದೆಯೂ ನಡೆಯೋದಿಲ್ಲ. ಕಾಂಗ್ರೆಸ್ ಪಕ್ಷದ ಒಬ್ಬನೇ ಒಬ್ಬ ಶಾಸಕನನ್ನು ನಿಮಿಗೆ ಖರೀದಿ ಮಾಡೋದು ಅಸಾಧ್ಯ” ಎಂದು ಸವಾಲು ಹಾಕಿದರು.

“ಮುಡಾ ಅಕ್ರಮದಲ್ಲಿ ಸಿದ್ದರಾಮಯ್ಯ ಅವರು ಎಲ್ಲೂ ಪ್ರಭಾವ ಬೀರಿಲ್ಲ. ಸಿದ್ದರಾಮಯ್ಯ ಅವರ ಪತ್ನಿಗೆ ಅವರ ಸಹೋದರ  ಅರಿಶಿನ, ಕುಂಕುಮಕ್ಕೆ ಎಂದು ಜಮೀನು ದಾನ ಕೊಟ್ಟಿದ್ರು. ಇದನ್ನು ಮುಡಾ ಆಕ್ರಮಿಸಿಕೊಂಡಿದ್ದಕ್ಕೆ  ಪರಿಹಾರ ಕೊಡಿ ಎಂದು ಮನವಿ ಮಾಡಿದ್ರು. ಸಿಎಂ ಅವರ ಪತ್ನಿ ಇದೇ ಸೈಟ್ ಬೇಕು ಎಂದು ಎಲ್ಲೂ ಮನವಿ ಮಾಡಿಲ್ಲ. ಹಾಗೆ ಸಿಎಂ ಅವರು ಎಲ್ಲೂ ಪ್ರಭಾವ ಬೀರೋ ಕೆಲಸ ಮಾಡಿಲ್ಲ. ಇವರು ಈ ನಿವೇಶನ ಪಡೆಯುವಾಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಆಗ ಅವರಿಗೆ ತಿಳಿಯದ್ದು ಈಗ ಹೇಗೆ ತಿಳಿಯಿತು. ಈಗ ಅವರೇ ಆರೋಪ ಮಾಡುತ್ತಿದ್ದಾರೆ. ಇದು ಯಾವ ನ್ಯಾಯ?” ಎಂದು ಪ್ರಶ್ನಿಸಿದರು.

Leave A Reply