Raksha Bandhana: ಅಣ್ಣಾ-ತಂಗಿ ಬಾಂಧವ್ಯ ಗಟ್ಟಿಗಳಿಸೋ ರಕ್ಷಾ ಬಂಧನ ಶುರುವಾಗಿದ್ದು ಹೇಗೆ? ಇದಕ್ಕಿದೆ ಮಹಾಭಾರತ, ಪುರಾಣದ ಹಿನ್ನೆಲೆ

Raksha Bandhana: ಭಾರತೀಯ ಸಂಸ್ಕೃತಿಯಲ್ಲಿ ಪ್ರತೀ ಬಾಂಧವ್ಯಕ್ಕೂ ಒಂದೊಂದು ಹಬ್ಬದ ನಂಟಿದೆ. ಶ್ರಾವಣ ಮಾಸ ಬಂತೆಂದರೆ ಸಾಕು, ನಾಡಿನಲ್ಲಿ ಹಬ್ಬಗಳದ್ದೇ ಸಂಭ್ರಮ, ಸಡಗರ, ಪರಸ್ಪರರಲ್ಲಿ ಸುಖ, ಸಂತೋಷ, ನೆಮ್ಮದಿ, ಭಾವೈಕ್ಯತೆಯನ್ನು ಬೆಸೆಯುವ ಹಬ್ಬಗಳು, ಭಾರತೀಯ ಸಂಸ್ಕೃತಿಯ ಕುರುಹುಗಳಾಗಿವೆ. ವರ್ಷವಿಡೀ ನಾನಾ ರೀತಿಯ ಒತ್ತಡಗಳಿಂದ ನೊಂದು ಬೆಂದು ಹೋದ ಮನಸ್ಸುಗಳಿಗೆ ಈ ಹಬ್ಬಗಳು ತುಸು ನೆಮ್ಮದಿಯ ತಾಣಗಳಾಗಿವೆ. ಅದರಂತೆ ಭಾರತದಲ್ಲಿ, ಸೋದರ-ಸೋದರಿಯರ ಸಂಬಂಧ, ಪ್ರೀತಿಯ ಪ್ರತೀಕವಾದ ಹಬ್ಬ ರಕ್ಷಾ ಬಂಧನ(Raksha Bandhana). ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲ್ಪಡುವ ಈ ಹಬ್ಬವನ್ನು ಯಜುರ್ ಉಪಾಕರ್ಮ, ನೂಲು ಹುಣ್ಣಿಮೆ ಹಾಗೂ ರಕ್ಷಾಬಂಧನ ಎಂದೆಲ್ಲಾ ಕರೆಯುತ್ತಾರೆ. ಪ್ರತೀ ವರ್ಷ ಶ್ರಾವಣ ಹುಣ್ಣಿಮೆಯಂದು ಆಚರಿಸಲ್ಪಡುವ ಈ ಹಬ್ಬವು ಸಾಕಷ್ಟು ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಹೊಂದಿದೆ. ಅದಲ್ಲದೇ ಸಮಾಜದಲ್ಲಿ ಹೆಣ್ಣುಮಕ್ಕಳ ರಕ್ಷಣೆಯನ್ನು ಪ್ರತಿಬಿಂಬಿಸುವ ರಾಖೀ ಹಬ್ಬದ ಹಿನ್ನೆಲೆ, ಮಹತ್ವ ಏನು?

ಸೋದರಿಗೆ ರಕ್ಷಣೆಯ ಭರವಸೆ
ಸೋದರತ್ವ ಸಾರುವ ರಕ್ಷಾ ಬಂಧನ ಶತಮಾನಗಳ ಇತಿಹಾಸ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿದೆ. ರಕ್ಷಾ ಬಂಧನ ಎಂಬುದು ಸಂಸ್ಕೃತದ ಪದವಾಗಿದ್ದು, ಇದರ ಅರ್ಥ ರಕ್ಷಣೆಯ ಬಂಧ ಎಂದು. ರಕ್ಷಾ ಬಂಧನದಂದು ಸೋದರಿಯರು ತಮ್ಮ ಸೋದರನ ಏಳಿಗೆಗಾಗಿ, ದೀರ್ಘಾಯುಷ್ಯಕ್ಕಾಗಿ ವ್ರತ ಆಚರಿಸಿ ಸೋದರನ ಮಣಿಕಟ್ಟಿಗೆ ರಕ್ಷಾ ದಾರ ಅಥವಾ ರಾಖೀಯನ್ನು ಕಟ್ಟುತ್ತಾರೆ. ಈ ಮೂಲಕ ಸಹೋದರನಿಂದ ರಕ್ಷಣೆಯ ಭರ ವಸೆ ಯನ್ನು ಪಡೆಯುತ್ತಾರೆ. ಇದು ಸಹೋ­ದರಿಯನ್ನು ರಕ್ಷಿಸುವ ಜವಾಬ್ದಾರಿ ನೀಡುತ್ತ­ದಲ್ಲದೇ ಸೋದರ- ಸೋದ­ರಿ ­ಯರ ನಡುವಿನ ಬಂಧವನ್ನು ಬಲ ಪಡಿಸುತ್ತದೆ.

ಮಹಾಭಾರತದ ಹಿನ್ನಲೆ:
ಹಿಂದೂ ಸಂಸ್ಕೃತಿಯಲ್ಲಿ ಹಿನ್ನಲೆಯಿಲ್ಲದೇ ಯಾವುದೇ ಆಚರಣೆಗಳು ನಡೆಯುವುದಿಲ್ಲ. ಹಾಗೆಯೇ, ರಕ್ಷಾಬಂಧನವೂ ಕೂಡ. ರಕ್ಷಾಬಂಧನಕ್ಕೆ ಮಹಾಭಾರತದ ಈ ಘಟನೆ ಪುಷ್ಟಿ ನೀಡುತ್ತದೆ. ಶ್ರೀಕೃಷ್ಣ ಸುದರ್ಶನ ಚಕ್ರ ಹಿಡಿದ ಸಂದರ್ಭದಲ್ಲಿ, ಕೃಷ್ಣನ ಕೈಗೆ ಚಕ್ರ ತಾಗಿ ರಕ್ತಸ್ರಾವವಾಗುತ್ತದೆ. ಆಗ ಕೃಷ್ಣನ ಬಳಿಯೇ ಇದ್ದ ಸಹೋದರಿ ದ್ರೌಪದಿ ತಾನುಟ್ಟ ಸೀರೆಯ ತುದಿಯನ್ನು ಹರಿದು ಕೃಷ್ಣನ ಕೈಗೆ ಕಟ್ಟಿದಳು. ಸಹೋದರಿ ದೌಪದಿಯ ಕಾಳಜಿಯಿಂದ ಸಂತಸಗೊಂಡ ಕೃಷ್ಣ, ದ್ರೌಪದಿಯನ್ನು ಎಲ್ಲಾ ಕಷ್ಟಗಳಿಂದ ರಕ್ಷಿಸುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ಮುಂದೊಂದು ದಿನ ದುಶ್ಯಾಸನ ಸಭೆಯಲ್ಲಿ ವಸ್ತ್ರಾಪಹರಣ ಮಾಡಿದಾಗಸಾಕ್ಷಾತ್ ಭಗವಂತನೇ ಬಂದು ಬ್ರೌಪದಿಗೆ ಅಕ್ಷಯ ವಸ್ತ್ರರವನ್ನು ನೀಡಿ ಕಾಪಾಡುವುದನ್ನೂ ನಾವು ನೋಡಿದ್ದೇವೆ. ಅಂದು ದೌಪದಿಯನ್ನು ಕಾಪಾಡಿದ್ದು ಕೃಷ್ಣನ ಕೈಗೆ ಕಟ್ಟಿದ ಆ ಸಣ್ಣ ‘ನೂಲಿನ’ ಎಳೆಯೇ! ಎನ್ನುವುದು ಇಲ್ಲಿ ಉಲ್ಲೇಖನೀಯ.

ಪೌರಾಣಿಕ ಹಿನ್ನಲೆ ಹಿಂದೆ ದೇವ-ದಾನವರಿಗೆ ಯುದ್ಧವಾಯಿತು. ಯುದ್ಧದಲ್ಲಿ ಸೋತ ದೇವತೆಗಳನ್ನು ದಾನವರು ಸ್ವರ್ಗದಿಂದ ಹೊರ ದೂಡಿದರು. ದಿನನಿತ್ಯದ ಯಜ್ಞಯಾಗಾದಿಗಳು ನಿಂತು ಹೋದವು. ಚಿಂತಿತನಾದ ಇಂದ್ರ ಬೃಹಸ್ಪತಿಗಳಲ್ಲಿ ಬೇಡಿಕೊಂಡ. ಬೃಹಸ್ಪತಿಗಳು, ಮತ್ತೆ ಜಯವಾಗಲು, ಶ್ರಾವಣಪೂರ್ಣಿಮೆಯ ದಿನ ರಕ್ಷಾವಿಧಿಯನ್ನು ಮಾಡಲು ಸೂಚಿಸಿದರು. ಗುರುಗಳ ಆಜ್ಞೆಯ ಮೇರೆಗೆ ಇಂದ್ರಾಣಿ ಶಚೀದೇವಿ ಬೃಹಸ್ಪತಿಗಳಿಂದ ಇಂದ್ರನಿಗೆ ಶ್ರಾವಣಪೂರ್ಣಿಮೆಯ ದಿನ ಸ್ವಸ್ತಿವಾಚನ ಮಾಡಿಸಿ, ಅವರಿಂದ ರಕ್ಷಾಸೂತ್ರ ಪಡೆದು, ಇಂದ್ರನ ಬಲಗೈಗೆ ರಕ್ಷಾಸೂತ್ರವನ್ನು ಕಟ್ಟಿದಳು. ಆಗ ಇಂದ್ರ ದಾನವರನ್ನು ಸೋಲಿಸಿ, ಸ್ವರ್ಗವನ್ನು ವಶಪಡಿಕೊಂಡ ಎಂದು ಭವಿಷ್ಯತ್ ಪುರಾಣದಲ್ಲಿ ಉಲ್ಲೇಖವಿದೆ. ಹಾಗೂ ಇಂದೇ ಭಗವಂತನಾದ ವಾಮನ ಬಲಿರಾಜನಿಗೆ ರಕ್ಷೆಯನ್ನು ಕಟ್ಟಿ, ದಕ್ಷಿಣೆ ಬೇಡಿದ್ದನೆಂದು ಪುರಾಣಗಳಲ್ಲಿ ಉಲ್ಲೇಖವಿದೆ.

ಮತ್ತೊಂದು ಕಥೆ:
ಬಲಿ ಚಕ್ರವರ್ತಿಯು ವಿಷ್ಣು ದೇವರನ್ನು ತನ್ನ ಅರಮನೆಗೆ ಆಹ್ವಾನಿಸುತ್ತಾನೆ. ಬಲಿಯ ಅರಮನೆಯಲ್ಲಿ ಉಳಿಯಲು ವಿಷ್ಣು ದೇವರು ಬಯಸುತ್ತಾರೆ. ಆದರೆ ಲಕ್ಷ್ಮೀ ದೇವಿಗೆ ಇದು ಇಷ್ಟವಾಗುವುದಿಲ್ಲ. ಆಕೆ ವಿಷ್ಣು ದೇವರನ್ನು ಹಿಂಬಾಲಿಸಿಕೊಂಡು ಬಂದು ಬಲಿ ಚಕ್ರವರ್ತಿ ಮುಂದೆ ಬಂದು ನಿಲ್ಲುತ್ತಾಳೆ. ಬಲಿ ಚಕ್ರವರ್ತಿಯ ಭಕ್ತಿಯಿಂದ ಪ್ರಸನ್ನಳಾದ ಲಕ್ಷ್ಮೀ ದೇವಿಯು ಆತನನ್ನು ತನ್ನ ಸಹೋದರನೆಂದು ಸ್ವೀಕರಿಸಿ ರಾಖಿ ಕಟ್ಟುತ್ತಾಳೆ. ತನ್ನ ರಾಜ್ಯದಿಂದ ಏನು ಬೇಕಾದರೂ ಕೇಳಬಹುದೆಂದು ಬಲಿ ಚಕ್ರವರ್ತಿಯು ಲಕ್ಷ್ಮೀ ದೇವಿಗೆ ಹೇಳುತ್ತಾನೆ.

ಮತ್ತೊಮ್ಮೆ ರಾಕ್ಷಸರಿಗೂ, ದೇವತೆಗಳಿಗೂ ಭೀಕರ ಯುದ್ಧವಾಯಿತು. ಯುದ್ಧದಲ್ಲಿ ಅಸುರರೇ ಮೇಲುಗೈ ಪಡೆದು ಗೆಲ್ಲುವ ಸ್ಥಿತಿ ಉಂಟಾಯಿತು. ಇದರಿಂದ ಚಿಂತಾಕ್ರಾಂತನಾದ ಇಂದ್ರ ತನ್ನ ಆಸ್ಥಾನಕ್ಕೆ ಗುರು ಬೃಹಸ್ಪತಿಯನ್ನು ಕರೆಸಿ ಸಲಹೆಯನ್ನು ಕೇಳುತ್ತಾನೆ. ವೇಳೆ ಇಂದ್ರನ ಮಡದಿ ಇಂದ್ರಾಣಿ ಕೂಡ ಅಲ್ಲೇ ಇರುತ್ತಾಳೆ. ಬೃಹಸ್ಪತಿ ಮಾತನಾಡುವುದಕ್ಕೂ ಮೊದಲೇ ಇಂದ್ರಾಣಿ ಎದ್ದುನಿಂತು, ದೇವತೆಗಳನ್ನು ಗೆಲ್ಲಿಸುವ ತಂತ್ರ ನನಗೆ ಗೊತ್ತು. ನಾವೇ ಯುದ್ಧದಲ್ಲಿ ಗೆಲ್ಲುತ್ತೇವೆ ಎಂದು ಭರವಸೆ ನೀಡಿದಳು. ಇದಾದ ಮರುದಿನ ಇಂದ್ರಾಣಿ ಮಂತ್ರ ಪುರಸ್ಸರವಾಗಿ ತಯಾರಿಸಿದ ಒಂದು ರಕ್ಷೆಯನ್ನು ತನ್ನ ಪತಿಯ ಕೈಗೆ ಕಟ್ಟಿದಳು. ರಕ್ಷೆಯನ್ನು ಕಟ್ಟಿಸಿಕೊಂಡು ಇಂದ್ರ ಯುದ್ಧರಂಗಕ್ಕೆ ಕಾಲಿಟ್ಟಿದ್ದೇ ತಡ ಅಸುರರು ಚದುರಿ ಪರಾರಿಯಾದರು. ದೇವತೆಗಳ ಮುಂದೆ ಅಸುರರು ತಲೆ ಬಾಗಿದರು. ಇದರಿಂದ ದೇವತೆಗಳು ಯುದ್ಧವನ್ನು ಗೆದ್ದರು. ಇದೇ ರೀತಿ ಇನ್ನೂ ಅನೇಕ ದಂತಕಥೆಗಳಿವೆ.

ಮೂರು ಗಂಟಿನ ಮಹತ್ವ:
ರಕ್ಷಾ ಬಂಧನ ಸಂದರ್ಭ ರಾಖಿಯಲ್ಲಿ ಮೂರು ಗಂಟುಗಳನ್ನು ಕಟ್ಟುವುದು, ಇದರ ಹಿಂದಿನ ಕಾರಣ ತುಂಬಾ ವಿಶೇಷವಾಗಿದೆ. ಮೂರು ಗಂಟುಗಳು ಈ ಮೂರು ವಿಷಯಗಳನ್ನು ಸಂಕೇತಿಸುತ್ತವೆ. ಸಹೋದರನಿಗೆ ಸಹೋದರಿ ಕಟ್ಟುವ ರಾಖಿಯಲ್ಲಿ ಯಾವಾಗಲೂ 3 ಗಂಟುಗಳನ್ನು ಕಟ್ಟುವುದು ರೂಢಿ. ಇದರ ಹಿಂದಿನ ಕಾರಣ ತುಂಬಾ ವಿಶೇಷ. ಈ ಮೂರು ಗಂಟುಗಳು ತ್ರಿಮೂರ್ತಿಗಳಿಗೆ ಅಂದರೆ ಬ್ರಹ್ಮ, ವಿಷ್ಣು ಮತ್ತು ಮಹೇಶರಿಗೆ ನೇರವಾಗಿ ಸಂಬಂಧಿಸಿವೆ ಎಂದು ನಂಬಲಾಗಿದೆ. ಇದು ಸಂತೋಷ ಮತ್ತು ಅದೃಷ್ಟವನ್ನು ಸಹ ಪ್ರತಿನಿಧಿಸುತ್ತದೆ. ಮೊದಲ ಗಂಟು ಸಹೋದರನ ದೀರ್ಘಾಯುಷ್ಯಕ್ಕಾಗಿ, ಎರಡನೇ ಗಂಟು ಸಹೋದರಿಯ ದೀರ್ಘಾಯುಷ್ಯಕ್ಕಾಗಿ ಮತ್ತು ಮೂರನೇ ಗಂಟು ಸಹೋದರ-ಸಹೋದರಿ ಸಂಬಂಧವನ್ನು ಗಟ್ಟಿಗೊಳಿಸಲು ಮತ್ತು ಸಿಹಿಗೊಳಿಸಲು ಎಂದು ನಂಬಲಾಗುತ್ತದೆ.

ಆಚರಣೆ ಹೇಗೆ?
ಮೊದಲಿಗೆ ಸಹೋದರಿ, ಸಹೋದರನ ಹಣೆಗೆ ತಿಲಕವನ್ನು ಇಟ್ಟು, ನೆತ್ತಿಯ ಮೇಲೆ ಅಕ್ಕಿ ಅಥವಾ ಅಕ್ಷತೆಯನ್ನು ಹಾಕಬೇಕು. ಬಳಿಕ ಅಣ್ಣನಿಗೆ ಆರತಿ ಬೆಳಗಬೇಕು. ಕೊನೆಯಲ್ಲಿ ಸಹೋದರನಿಗೆ ರಾಖಿಯನ್ನು ಕಟ್ಟಿ ಸಿಹಿಯನ್ನು ತಿನ್ನಿಸಬೇಕು. ತಂಗಿ ರಾಖಿ ಕಟ್ಟಿದ ನಂತರ ಅಣ್ಣ ಪ್ರೀತಿಯ ಸಹೋದರಿಗೆ ಉಡುಗೊರೆ ಕೊಡುತ್ತಾನೆ. ಸಹೋದರಿಯು ತನ್ನ ಸಹೋದರನ ಕೈಗೆ ರಾಖಿ ಕಟ್ಟುವ ಮೂಲಕ ಅವನ ರಕ್ಷಣೆಯನ್ನು ಕೋರುತ್ತಾಳೆ. ಇದು ಸಹೋದರನಿಗೆ ತನ್ನ ಸಹೋದರಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ನೀಡುತ್ತದೆ. ಜೊತೆಗೆ ಸಹೋದರ ಮತ್ತು ಸಹೋದರಿಯರ ನಡುವಿನ ಬಂಧವನ್ನು ಬಲಪಡಿಸುತ್ತದೆ.

ಸಾಮಾಜಿಕ ಆಚರಣೆ
ಪ್ರತಿ ವರ್ಷ ರಕ್ಷಾ ಬಂಧನವನ್ನು ಆರ್‌ಎಸ್‌ಎಸ್‌ ಸೇರಿದಂತೆ ಹಲವು ಸಾಮಾಜಿಕ ಸಂಘಟನೆಗಳು ಬ್ರಾತೃತ್ವದ ಪ್ರತೀಕವಾಗಿ ಆಚರಿ ­ಸುತ್ತವೆ, ದೇಶದ ರಕ್ಷಣೆ ಮಾಡುವ ಯೋಧರಿಗೆ ಸಾಂಕೇ ತಿಕ­ ವಾಗಿ ರಾಖಿ ಕಟ್ಟಲಾಗುತ್ತದೆ. ಆರ್‌ಎಸ್‌ಎಸ್‌ ಸ್ವಯಂ ಸೇವ ಕರು ಪ್ರತೀ ವರ್ಷ ಸರಕಾರಿ ಶಾಲೆಗಳಿಗೆ ತೆರಳಿ ಅಲ್ಲಿನ ಮಕ್ಕಳಿಗೆ ಪರಸ್ಪರ ಕಟ್ಟಲು ರಾಖೀ ನೀಡಿ ಸಿಹಿ ಹಂಚುತ್ತಾರೆ. ಒಟ್ಟಿನಲ್ಲಿ ಧರ್ಮದ ಪರಿಧಿಯನ್ನು ಮೀರಿ ಎಲ್ಲರೂ ಸೋದರತ್ವದ ಭಾವನೆ ಯಿಂದ ಆಚರಿಸುವ ರಕ್ಷಾ ಬಂಧನದ ಈ ಸುಸಂದರ್ಭ ದಲ್ಲಿ ಎಲ್ಲ ಸೋದರರಿಗೂ ದೀರ್ಘಾಯುಷ್ಯ ಸಿಗಲಿ, ಎಲ್ಲ ಸೋದರಿಯರಿಗೂ ರಕ್ಷಣೆ ಸಿಗಲಿ ಎಂದು ಆಶಿಸೋಣ.

2 Comments
  1. tlovertonet says

    There is noticeably a bundle to identify about this. I consider you made various nice points in features also.

  2. Kitaro Token Solana says

    Good web site! I truly love how it is simple on my eyes and the data are well written. I’m wondering how I could be notified whenever a new post has been made. I’ve subscribed to your feed which must do the trick! Have a nice day!

Leave A Reply

Your email address will not be published.