Mangalore: ಥಾಯ್ಲೆಂಡ್ನಲ್ಲಿ ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಪ್ರಶಸ್ತಿ ಗೆದ್ದ ಮಂಗಳೂರಿನ ಯುವಕ
Mangalore: ಥಾಯ್ಲೆಂಡ್ನಲ್ಲಿ ನಡೆದ ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಪ್ರಶಸ್ತಿಯನ್ನು ಮಂಗಳೂರಿನ ಯುವಕ ಜೋಹಾನ್ ಸಲಿಲ್ ಮಥಿಯಾಸ್ ಗೆದ್ದಿದ್ದಾರೆ.
ಮಂಗಳೂರಿನ (Mangalore) ಮಿಲಾಗ್ರೆಸ್ ಕಾಲೇಜಿನಲ್ಲಿ 2ನೇ ವರ್ಷದ ಬಿಸಿಎ-ಎಐ ವಿದ್ಯಾರ್ಥಿಯಾಗಿರುವ ಜೋಹಾನ್ ಸಲಿಲ್ ಮಥಿಯಸ್ ಅವರು ಥಾಯ್ಲೆಂಡ್ನಲ್ಲಿ ನಡೆದ ಪ್ರತಿಷ್ಠಿತ ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಫ್ಯಾಷನ್ ರನ್ವೇ ಸರಣಿಯ ಭಾಗವಾಗಿರುವ ಈ ಈವೆಂಟ್ನಲ್ಲಿ ಭಾರತ, ಇಂಡೋನೇಷ್ಯಾ, ಯುಎಇ, ಓಮನ್, ಓಟ್ಸ್ವಾನಾ, ದಕ್ಷಿಣ ಆಫ್ರಿಕಾ ಮತ್ತು ನೇಪಾಳ ಸೇರಿದಂತೆ ಒಟ್ಟು 12 ದೇಶಗಳ ಟೀನ್ ಯುವಕರು ಭಾಗವಹಿಸಿದ್ದರು.
ದುಬೈನಲ್ಲಿನ ದಿ ಅರ್ಬನ್ ಎಡ್ಜ್ ಆಯೋಜಿಸಿದ ಎಕ್ಲೆಕ್ಟಿಕ್ ಇಂಟರ್ನ್ಯಾಷನಲ್ ಬ್ಯೂಟಿ ಪೆಜೆಂಟ್ನಲ್ಲಿ 1 ನೇ ರನ್ನರ್-ಅಪ್ ಆಗುವ ಮೂಲಕ ಜೋಹಾನ್ ಅವರ ಅಂತರರಾಷ್ಟ್ರೀಯ ಹಂತದ ಪ್ರಯಾಣವು ಈ ವರ್ಷದ ಏಪ್ರಿಲ್ನಲ್ಲಿ ಪ್ರಾರಂಭವಾಯಿತು. ನಂತರ ಅವರು ಕ್ಯಾಲಿಕಟ್ನಲ್ಲಿ ನಡೆದ ದಿ ಫ್ಯಾಶನ್ ರನ್ವೇ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದರು. ಅಲ್ಲಿ ಅವರು ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದು ಹದಿಹರೆಯದ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ಸ್ಥಾನ ಪಡೆದರು.
ಜೋಹಾನ್ ಮತ್ತು ಇತರ ಸ್ಪರ್ಧಿಗಳು ವಿವಿಧ ದೇಶಗಳಿಂದ ಆಗಮಿಸಿದ್ದು, ಆಗಸ್ಟ್ 7 ರಂದು ಥಾಯ್ಲೆಂಡ್ನಲ್ಲಿ ಈವೆಂಟ್ ಪ್ರಾರಂಭವಾಯಿತು. ಈ ಸ್ಪರ್ಧೆಯು ಭಾಗವಹಿಸುವವರ ಪ್ರತಿಭೆ, ಸಂಸ್ಕೃತಿ ಮತ್ತು ಬುದ್ಧಿಶಕ್ತಿಯನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುತ್ತದೆ. ಪರಸ್ಪರ ಭೇಟಿ ಮತ್ತು ಶುಭಾಶಯಗಳ ನಂತರ, ಸ್ಪರ್ಧಿಗಳನ್ನು ಅಂದವಾಗಿ ಅಲಂಕಾರ ಮಾಡಲಾಯಿತು. ನಂತರ ಈ ಯುವ ಪ್ರತಿಭೆಗಳು ಪ್ರತಿಭಾ ಪ್ರದರ್ಶನದಲ್ಲಿ ಭಾಗವಹಿಸಿದರು. ಅಲ್ಲಿ ಮಂಗಳೂರಿನ ಈ ಹುಡುಗ ಜೋಹಾನ್ ತನ್ನ ಕರಾಟೆ ಕೌಶಲ್ಯದಿಂದ ತೀರ್ಪುಗಾರರನ್ನು ಮೆಚ್ಚಿಸಿದ್ದಾನೆ.
ಆಗಸ್ಟ್ 10 ರಂದು ಗ್ರ್ಯಾಂಡ್ ಫಿನಾಲೆ ಬಜಾರ್ ಥಿಯೇಟರ್ನಲ್ಲಿ ನಡೆಯಿತು. ಜೋಹಾನ್ ಮತ್ತು ಇತರ ಸ್ಪರ್ಧಿಗಳು ತಮ್ಮ ಸಾಂಪ್ರದಾಯಿಕ ಉಡುಗೆಯನ್ನು ಪ್ರದರ್ಶಿಸಿ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಭಾಗವಹಿಸಿದರು. ಜೋಹಾನ್ ಅವರ ಒಟ್ಟಾರೆ ಪ್ರದರ್ಶನವು ತೀರ್ಪುಗಾರರನ್ನು ಮೆಚ್ಚಿಸಿದ್ದು ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಆಗಿ ಜೋಹಾನ್ ಆಯ್ಕೆಯಾಗಿದ್ದಾರೆ.
ಈ ಈವೆಂಟ್ಗಾಗಿ ಜೋಹಾನ್ರ ವಾರ್ಡ್ರೋಬ್ ಅನ್ನು ಹೇರಾ ಪಿಂಟೊ ಕೌಚರ್ ಅವರು ಪ್ರತ್ಯೇಕವಾಗಿ ವಿನ್ಯಾಸಗೊಳಿಸಿದ್ದಾರೆ. ಮಗ ಜೋಹಾನ್ ರ ಸಾಧನೆಯು ತಮ್ಮ ಕುಟುಂಬಕ್ಕೆ ಹೆಮ್ಮೆ ತಂದಿದೆ ಎಂದು ತಾಯಿ ಜೂಲಿಯೆಟ್ ಫೆರ್ನಾಂಡಿಸ್, ತಂದೆ ಜಾನ್ಸನ್ ಮಥಿಯಾಸ್ ಮತ್ತು ಸಹೋದರಿ ಜೆನ್ನಿಫರ್ ಮಥಿಯಾಸ್ ಹೇಳಿದ್ದಾರೆ. ಇದು ಅವರ ಮಾಡೆಲಿಂಗ್ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲು ಆಗಿದ್ದು ಜೋಹಾನ್ ಅವರ ಯಶಸ್ಸಿನ ಕಥೆಯು ಫ್ಯಾಷನ್ ಮತ್ತು ಮಾಡೆಲಿಂಗ್ ಉದ್ಯಮದ ಯುವ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದೆ. ಜಾಗತಿಕ ವೇದಿಕೆಯಲ್ಲಿ ಪರಿಶ್ರಮ, ಪ್ರತಿಭೆ ಮತ್ತು ಸಾಂಸ್ಕೃತಿಕ ಪ್ರಾತಿನಿಧ್ಯದ ಮೂಲಕ ಸಣ್ಣ ಪಟ್ಟಣದ ಮಕ್ಕಳು ಕೂಡ ಕಠಿಣ ಸ್ಪರ್ಧೆ ಒಡ್ಡಿ ವಿಜಯಿಯಾಗಬಹುದು ಎನ್ನುವುದಕ್ಕೆ ಜೋಹಾನ್ ಒಂದು ಉದಾಹರಣೆ.