Channapattana : BJP ಟಿಕೆಟ್ ಸಿಗದಿದ್ದರೆ ಪ್ರತ್ಯೇಕವಾಗಿ ಸ್ಪರ್ಧಿಸುವೆ- ಸಿ ಪಿ ಯೋಗೇಶ್ವರ್ ಘೋಷಣೆ !!
Channapattana : ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಟಿಕೆಟ್ ನನಗೆ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಉಪಚುನಾವಣೆಯ (Assembly By Election) ಕಾವು ಜೋರಾಗಿದೆ. ಆದರೆ ಅಭ್ಯರ್ಥಿಗಳ ಆಯ್ಕೆ ಇನ್ನೂ ಕುತೂಹಲವಾಗಿಯೇ ಉಳಿದಿದೆ. ಅದರಲ್ಲೂ ಪ್ರತಿಷ್ಠೆಯ ಕ್ಷೇತ್ರವಾದ ಚನ್ನಪಟ್ಟಣ(Channapattana)ದ ಕಡೆಯೇ ಜನರ ಚಿತ್ತ ನೆಟ್ಟಿದೆ. ಇದನ್ನು ಜಿದ್ದಾಗಿ ಪರಿಗಣಿಸಿರುವ ಕಾಂಗ್ರೆಸ್ ಹಾಗೂ ಮೈತ್ರಿ ದೋಸ್ತಿಗಳು ಗೆಲ್ಲಲೇ ಬೇಕೆಂದು ಪಣತೊಟ್ಟಿವೆ. ಹೀಗಾಗಿ ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿವೆ. ಈ ನಡುವೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದು, ಟಿಕೆಟ್ ಆಕಾಂಕ್ಷಿ ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್ ಪಕ್ಷೇತರವಾಗಿ ಸ್ಪರ್ಧಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ.
ಹೌದು, ಮೈತ್ರಿ ನಾಯಕರಿಗೆ ಸೆಡ್ಡು ಹೊಡೆಯಲು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (CP Yogeshwar) ಮುಂದಾಗಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ತನಗೇ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿರೋ ಸಿಪಿವೈ, ಟಿಕೆಟ್ ನೀಡದಿದ್ದರೆ ಪಕ್ಷೇತರವಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಅಭಿಮಾನಿಗಳ ಪ್ರತ್ಯೇಕ ಸಭೆ ನಡೆಸಲು ಮುಂದಾಗಿದ್ದ ಯೋಗೇಶ್ವರ್ ಗೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿತ್ತು. ಈ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುವ ಮುನ್ನ ಅವರು ಈ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಉಪಚುನಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಪಕ್ಷೇತರನಾಗಿ ಮತ್ತೆ ಗೆದ್ದು ಎನ್‌ಡಿಎ ಭಾಗವಾಗುತ್ತೇನೆ. ಏನೇನು ರಾಜಕೀಯ ತಿರುವು ಪಡೆಯುತ್ತದೆ ಕಾದುನೋಡಬೇಕು ಎಂದು ತಿಳಿಸಿದ್ದಾರೆ.
ನನ್ನ ತಾಲೂಕಿನ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಕ್ಷೇತ್ರದ ಸಮಾನ ಮನಸ್ಕ ವೇದಿಕೆಯಿಂದಲೂ ಸ್ಪರ್ಧೆಗೆ ಒತ್ತಾಯ ಇದೆ. ನಾನು ಕಾಂಗ್ರೆಸ್‌ಗೆ ಹೋಗುವ ಬಗ್ಗೆ ಆಲೋಚನೆ ಮಾಡಿಲ್ಲ. ಯಾರೂ ನನ್ನನ್ನು ಮಾತನಾಡಿಸಲಿಲ್ಲ. ಡಿಕೆಶಿ ಅವರು ಏನೇನೋ ಮಾತನಾಡುತ್ತಾರೆ. ಅದು ಅವರ ರಾಜಕೀಯ ತಂತ್ರಗಾರಿಕೆ. ಅವರಿಗೆ ಯಾವಾಗ ಏನು ಮಾತಾಡಬೇಕು ಅಂತ ಗೊತ್ತಿದೆ ಎಂದು ಹೇಳಿದರು.