H D Kumarswamy: ಕಾಫಿ ಡೇ ಸಿದ್ಧಾರ್ಥ್ ಹೆಗ್ಡೆ ಸಾವಿಗೆ ಡಿ ಕೆ ಶಿವಕುಮಾರ್ ಕಾರಣ ? ಕುಮಾರಸ್ವಾಮಿ ಸ್ಪೋಟಕ ಹೇಳಿಕೆ
H D Kumarswamy: ಕೆಫೆ ಕಾಫಿ ಡೇ ಮಾಲೀಕ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಹೆಗಡೆ(Siddharth Hegde) ಅವರ ಸಾವಿಗೆ ಡಿಕೆ ಶಿವಕುಮಾರ್(D K Shivkumar) ಅವರೇ ಕಾರಣ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಸ್ಪೋಟಕ ಆರೋಪ ಮಾಡಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ- ಜೆಡಿಎಸ್(BJP-JDS) ಹೋರಾಟ ತೀವ್ರಗೊಂಡಿದೆ. ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ(H D Kumarswamy) ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಆರೋಪ ಪ್ರತ್ಯಾರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಈ ಕಾರಣದಿಂದ ಕೆಲವು ಸ್ಫೋಟಕ ಸತ್ಯಗಳು ಬಯಲಾಗುತ್ತಿವೆ. ಅಂತೆಯೇ ಶನಿವಾರ ಮೈಸೂರಿನಲ್ಲಿ ನಡೆದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು ‘ಸಿದ್ದಾರ್ಥ ಆತ್ಮಹತ್ಯೆ ಗೆ ಕಾರಣ ಆಗಿದ್ದು ಯಾರು ಶಿವಕುಮಾರ್ ಅವರೇ..? ಅವರ ಆತ್ಮಹತ್ಯೆಗೆ ಕಾರಣ ಯಾರು ಅನ್ನೋದನ್ನ ಜನಗಳ ಮುಂದೆ ಇಡ್ತೀರಾ ಶಿವಕುಮಾರ್ ಅವರೇ..’ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
‘ನನ್ನ ಮಗನ ರಾಜಕೀಯ ಜೀವನಕ್ಕಾಗಿ ಅಣ್ಣನ ಮಗನನನ್ನ ಜೈಲಿಗೆ ಕಳಿಸಿದ್ದೇನೆ ಎಂದು ನೀವು ನನ್ನ ಮೇಲೆ ಆರೋಪ ಮಾಡಿದ್ದೀರಿ. ಆದರೆ, ಯಾವ ಎಸ್‌ಎಂ ಕೃಷ್ಣ, ಕೊತ್ವಾಲನ ಜೊತೆ ಜೀವನ ಮಾಡಿಕೊಂಡಿದ್ದ ನಿಮಗೆ ರಾಜಕೀಯ ಜೀವನ ಕೊಟ್ಟಿದ್ದರೋ, ರಾಜಕೀಯದಲ್ಲಿ ಬೆಳೆಸಿದ್ದೀರೋ ಅವರ ಮನೆಯನ್ನೇ ಹಾಳು ಮಾಡಿದ್ದೀರಿ’ ಎಂದು ಈ ಹೊಸದಾದ ಗಂಭೀರವಾದ ಆರೋಪ ಮಾಡಿದ್ದಾರೆ.
ಕುಮಾರಸ್ವಾಮಿಗೆ ಡಿಕೆಶಿ ಟಾಂಗ್:
ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ ಅವರು ‘ಅಯ್ಯೋ .. ಕುಮಾರಸ್ವಾಮಿಯನ್ನ ಹುಚ್ಚಾಸ್ಪತ್ರೆಗೆ ಸೇರಿಸೋಣ. ಅವರ ತಂದೆ ಮೇಲೆ 1985 ರಲ್ಲಿ ವಿಧಾನಸಭೆ ಚುನಾವಣೆಯನ್ನ ನಾನು ಗೆದ್ದಿದ್ದೇನೆ. ಬಂಗಾರಪ್ಪ ಸಂಪುಟದಲ್ಲಿ ಮಂತ್ರಿ ಆಗಿದ್ದೇನೆ. ನನ್ನ ಎಸ್ ಎಂ ಕೃಷ್ಣ ಸಂಬಂಧ ಹೇಗಿದೆ ಅಂತಾ ಅವರಿಗೆ ಏನ್ ಗೊತ್ತಿದೆ. ಪಾಪಾ ಮೆಂಟಲ್ ಆಗಿದ್ದಾನೆ ಅಂತ ಕಾಣಿಸುತ್ತೆ, ಹಿತೈಷಿಗಳಿಗೋ, ಪಾರ್ಟಿ ಕಾರ್ಯಕರ್ತರಿಗೋ ಅವರನ್ನು ಮೆಂಟಲ್ ಆಸ್ಪತ್ರೆ ಸೇರಿಸಿ ಅಂತ ಹೇಳೋಣ’ ಎಂದು ಹೇಳಿದ್ದಾರೆ.