Kodagu: ಕೊಡಗಿನ ಭಾಗಮಂಡಲದಲ್ಲಿ ಅವೈಜ್ಞಾನಿಕ, ಕಳಪೆ ಕಾಮಗಾರಿ : ಪ್ರಕೃತಿ ಸಹಜ ಗುಣ ತಿಳಿದಿದ್ದರೂ ಈ ಕಾಮಗಾರಿ ಮಾಡಿದ ಉದ್ದೇಶವೇನು..?

ಕೊಡಗಿನ ಭಾಗಮಂಡಲ ಪ್ರದೇಶ ಇತ್ತೀಚಿಗೆ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿದೆ. ಇದೀಗ ಭಾಗಮಂಡಲದಲ್ಲಿ ಕಳೆದ ಏಳು ತಿಂಗಳ ಹಿಂದೆ ನಡೆದ ಉದ್ಯಾನವನ ಕಾಮಗಾರಿ ಅವೈಜ್ಞಾನಿಕ ಹಾಗೂ ತೀರಾ ಕಳಪೆ ಮಟ್ಟದಿಂದ ಕೂಡಿದ್ದು, ಹಣ ದುರುಪಯೋಗದ ವಾಸನೆ ಇಲ್ಲಿನ ಸಾರ್ವಜನಿಕರ ಮೂಗಿಗೆ ಬಡಿಯುತ್ತಿದೆ. ಮುಜರಾಯಿ ಇಲಾಖೆಯಿಂದ 2 ಕೋಟಿ ಮಂಜೂರಾಗಿ ಬಿಡುಗಡೆಗೊಂಡಿತ್ತು. ಅದರಲ್ಲಿ ಕೇವಲ ಏಳು ತಿಂಗಳ ಒಳಗೆ ತರಾತುರಿಯಲ್ಲಿ 1,92,80,000 ಕೋಟಿ ರೂ. ಕಾಮಗಾರಿ ನಡೆದು ಕಳೆದ ಒಂದು ತಿಂಗಳ ಹಿಂದೆಯೇ ಸಂಪೂರ್ಣ ಹಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ (KRIDL)ಗೆ ಪಾವತಿಯಾಗಿದೆ. ಇದೀಗ ನಿರ್ವಹಣೆಯನ್ನು ತಲಕಾವೇರಿ ಭಾಗಮಂಡಲ ವ್ಯವಸ್ಥಾಪನ ಸಮಿತಿಗೆ ಹಸ್ತಾಂತರಿಸಿ ಕೈ ತೊಳೆದುಕೊಂಡಿದೆ.

ಕಳೆದ ಜೂನ್ ತಿಂಗಳಿಂದ ಹೊಡೆದ ಮಳೆಗೆ ಎರಡು ಬಾರಿ ಭಾಗಮಂಡಲ ಜಲಾವೃತಗೊಂಡಿತು. ಈ ಸಂದರ್ಭ ಅವೈಜ್ಞಾನಿಕ ಉದ್ಯಾನವನದ ಮೇಲೆ ನೀರು ನಿಂತ ನಂತರ ನೋಡಿದಾಗ ಉದ್ಯಾನವನದ ಕಬ್ಬಿಣದ ಗ್ರಿಲ್ ಗೇಟ್ ಗಳು ನೆಲ ಕಚ್ಚಿವೆ. ನೀರು ನಿಂತು ಅಲ್ಲಿರುವ ಗಿಡಗಳು ಕೊಳೆತಿದೆ. ಅಳವಡಿಸಿದ ಅಲಂಕಾರಿಕ ವಿದ್ಯುತ್ ದೀಪದ ಒಳಗಡೆ ಮಣ್ಣು ಸೇರಿಕೊಂಡಿದೆ, ವಿದ್ಯುತ್ ತಂತಿಗಳು ತುಕ್ಕು ಹಿಡಿಯಲು ಆರಂಭವಾಗಿದೆ. ಮೆಟ್ಟುಲುಗಳ ಕೆಲವು ಟೈಲ್ಸ್ ಎಲ್ಲ ಕಳಚಿಕೊಂಡಿದೆ. ಕೆಸರು ಆವರಿಸಿಕೊಂಡು ಜನರಿಗೆ ನಡೆದಾಡಲು ಕಷ್ಟ ಸಾಧ್ಯವಾಗಿ. ದೇವಾಲಯದ ಸಿಬ್ಬಂದಿಗಳು ಒಂದು ಬದಿ ಟೈಲ್ಸ್ ಮಣ್ಣುಗಳನ್ನು ತೆರವುಗೊಳಿಸಿ ನಡೆದಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.

ನೈಸರ್ಗಿಕವಾಗಿ ನೀರು ಹರಿಯಲು ಈ ಅವೈಜ್ಞಾನಿಕ ಉದ್ಯಾನವನದಿಂದ ತೊಂದರೆ ಉಂಟಾಗಿ ನೀರೆಲ್ಲವೂ ಹಿಂಬದಿಗೆ ಸರಿದು ಮತ್ತಷ್ಟು ಅನಾಹುತಕ್ಕೆ ಎಡೆ ಮಾಡಿ ಕೊಟ್ಟಿತ್ತು. ಕಾಮಗಾರಿ ಆರಂಭವಾದಗಳೇ ಈ ಭಾಗದ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಇವರ ಮಾತಿಗೆ ಸೊಪ್ಪು ಹಾಕಿಲ್ಲ. 1997ರ ಅವಧಿಯಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷರಾಗಿದ್ದ ಮಾತಂಡ ಮೊನ್ನಪ್ಪನವರ ನೇತೃತ್ವದಲ್ಲಿ ರಚನೆಗೊಂಡಿದ್ದ ತಲಕಾವೇರಿ ಅಭಿವೃದ್ಧಿ ಹೋರಾಟ ಸಮಿತಿಯು ಅಂದಿನ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ ಚಂದ್ರಕಲಾ ರವರ ಪ್ರಯತ್ನದಿಂದ ಅಂದಿನ ಮುಖ್ಯಮಂತ್ರಿಗಲಾದ ಎಸ್ ಎಂ ಕೃಷ್ಣ ಅವರು 10.30 ಕೋಟಿ ಇದರ ಅಭಿವೃದ್ಧಿಗಾಗಿ ಹಣ ಬಿಡುಗಡೆಗೊಳಿಸಿ ತಲಕಾವೇರಿ ಭಾಗಮಂಡಲ ಜೀರ್ಣೋದ್ಧಾರಕ್ಕೆ ಅವಕಾಶ ಮಾಡಿಕೊಟ್ಟರು. ನಂತರ ಬಂದ ಮುಖ್ಯಮಂತ್ರಿಗಳೆಲ್ಲ ಅನುದಾನವನ್ನು ಹೆಚ್ಚಿಸಿ ಇಂದು ಸುಸಜ್ಜಿತವಾಗಿ ಭಾಗಮಂಡಲ ತಲಕಾವೇರಿ ಜೀರ್ಣೋದ್ಧಾರವಾಗಿದೆ. ಪರಿಸರ ಸ್ನೇಹಿ ಅಭಿವೃದ್ಧಿ ಅಂದು ನಡೆದಿತ್ತು.

ಅಂದು ಈ ಪ್ರದೇಶದಲ್ಲಿ ಉದ್ಯಾನವನ ನಿರ್ಮಿಸಲು ಅಭಿವೃದ್ಧಿ ಕಾಮಗಾರಿಯ ಮೇಲ್ವಿಚಾರಣೆ ವಹಿಸಿಕೊಂಡಿದ್ದ ರಾಜ್ಯದ ಲೋಕೋಪಯೋಗಿ ಇಲಾಖೆಯ ಅಭ್ಯಂತರರು ಹಾಗೂ ತಲಕಾವೇರಿ ಅರ್ಚಕ ಕುಟುಂಬದ ಸದಸ್ಯರು ಆಗಿದ್ದ ಮನಮೋಹನ್ ರವರು ತ್ರಿವೇಣಿ ಸಂಗಮದ ಬಳಿ ಹೆಚ್ಚಿನ ಅಭಿವೃದ್ಧಿಯನ್ನು ನಿರಾಕರಿಸಿದ್ದರು. ನೈಸರ್ಗಿಕವಾಗಿ ನೀರು ಹರಿಯಲು ಅವಕಾಶ ಮಾಡಬೇಕೆಂದು ಅಭಿವೃದ್ಧಿಯ ಹೆಸರಲ್ಲಿ ನೀರನ್ನು ಅಡ್ಡಗಟ್ಟಿ ಮತ್ತಷ್ಟು ದುರಂತಕ್ಕೆ ಅವಕಾಶ ಮಾಡಿ ಕೊಡಲು ಸಾಧ್ಯವಿಲ್ಲ ಎಂದು ಹೇಳಿ ಹೆಚ್ಚಿನ ಅಭಿವೃದ್ಧಿಯನ್ನು ಅಂದು ತ್ರಿವೇಣಿ ಸಂಗಮದ ಬಳಿ ನಡೆಸಿಲ್ಲ. ಆದರೆ ಇಂದು ಇಲ್ಲಿನ ಸ್ಥಿತಿ ಗತಿಯನ್ನು ಅರಿಯದೆ ಹಿಂದುಮುಂದು ನೋಡದೆ ಎರಡು ಕೋಟಿಯಷ್ಟ್ಟು ಸರ್ಕಾರದ ಹಣವನ್ನು ಅನವಶ್ಯಕವಾಗಿ ಪೋಲು ಮಾಡಿದನ್ನು ತಲಕಾವೇರಿ ಭಾಗಮಂಡಲ ಅಭಿವೃದ್ಧಿ ಹೋರಾಟ ಸಮಿತಿಯ ಪ್ರಮುಖರಲ್ಲಿ ಒಬ್ಬರಾದ ಹಾಗೂ ಸ್ಥಳೀಯರು ಮತ್ತು ಸಮಾಜ ಸೇವಕರಾದ ಕೆ. ಭಾರತ್ ರವರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ಸುತ್ತ ನಿರ್ಮಿಸಿ ಇದೀಗ ನೆಲ ಕಚ್ಚಿರುವ ಗ್ರಿಲ್ ಗೇಟ್ ಗಳು, ನೆಲಹಾಸಿನ ಟೈಲ್ಸ್ ಗಳು ಕಥೆ ಏನು..? ಕಾಮಗಾರಿಯ ಬಗ್ಗೆ ವಾಸ್ತವ ಅರಿಯದೆ ಏನೇನೋ ಅಂದುಕೊಂಡಿದ್ದರು. ಕೆಲವರು ಈ ಅಭಿವೃದ್ಧಿಯನ್ನು ಹಾಡಿ ಹೊಗಳಿದರು. ಆದರೆ ಇಂದು ಈ ಉದ್ಯಾನವನ ಹೇಗಾಗಿದೆ? ಯಾರ ಹೊಟ್ಟೆ ತುಂಬಿಸಲು ಈ ಕಾಮಗಾರಿ ನಡೆದಿದೆ ಎಂಬುದನ್ನು ಹಲವರು ಪ್ರಶ್ನಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಪ್ರತಿ ವರ್ಷವೂ ಕೂಡ ಜಲಾವೃತವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದ್ದರೂ ಈ ಕಾಮಗಾರಿ ನಡೆಸಿದ ಉದ್ದೇಶವೇನು, ಇದರ ಹಿಂದಿನ ಮರ್ಮವೇನು ಎಂಬುದು ಇದೀಗ ಅರಿಯಬೇಕಾಗಿದೆ.

Leave A Reply

Your email address will not be published.