Bangla: ಬಾಂಗ್ಲಾ ಹಿಂಸಾಚಾರದ ಹಿಂದೆ ಚೀನಾ-ಪಾಕ್ ಕೈವಾಡ ?! ಇಲ್ಲಿದೆ ಹಲವು ಕಾರಣಗಳು
Bangla: ಬಾಂಗ್ಲಾದೇಶ ಹಿಂಸಾಚಾರ ಬುಗಿಲೆದ್ಧಿದೆ. ಅಲ್ಲಿನ ಪ್ರತಿಭಟನೆ ದೇಶದ ಪ್ರಧಾನಿಯನ್ನೇ ರಾಜಿನಾಮೆ ಕೊಟ್ಟು ಪಲಾಯನ ಮಾಡಿಸಿದೆ. ಇದರ ನಡುವೆ ಬಾಂಗ್ಲಾದಲ್ಲಿ ನಡೆದ ಹಿಂಸಾಚಾರದ ಹಿಂದೆ ಉಗ್ರರ ಕೈವಾಡ ಇದೆ ಎಂದು ಮಾಜಿ ಪ್ರಧಾನಿ ಹಸೀನಾ ಶೇಖ್(Sheikh Hasina) ಪುತ್ರ ಸಾಜಿಬ್ ವಾಜಿದ್(Sajib Vajid) ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದಾರೆ. ಈ ಬೆನ್ನಲ್ಲೇ ಹಿಂಸಾಚಾರದ ಹಿಂದೆ ಪಾಕ್(Pakistan) ಮತ್ತು ಚೀನಾ(China) ಕೈವಾಡ ಕೂಡ ಇದೆ ಎನ್ನಲಾಗಿದೆ.
ಹೌದು, ಬಾಂಗ್ಲಾ ಹಿಂಸಾಚಾರದ ಹಿಂದೆ ಪಾಕಿಸ್ತಾನದ ಗುಪ್ತಚರ ಏಜೆನ್ಸಿ ಐಎಸ್ ಐ ಕುತಂತ್ರವಿರಬಹುದೇ? ಅಂದಹಾಗೆ ಭಾರತ ಮತ್ತು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ನಡುವೆ ಉತ್ತಮ ಸಂಬಂಧವಿರುವುದು ಎಲ್ಲರಿಗೂ ತಿಳಿದೇ ಇದೆ. ಹೀಗಾಗಿ ತನ್ನ ಬೇಳೆ ಬೇಯಿಸಿಕೊಳ್ಳಲು ಚೀನಾ ಕೂಡ ಈ ಕುತಂತ್ರದಲ್ಲಿ ಭಾಗಿಯಾಗಿರಬಹುದಾ? ಇಂಥದ್ದೊಂದು ಪ್ರಶ್ನೆ ಉದ್ಭವವಾಗಿದ್ದು, ಪಾಕ್ ಮತ್ತು ಚೀನಾ ಕೈವಾಡವನ್ನು ಸಹ ತಳ್ಳಿಹಾಕುವಂತಿಲ್ಲ.
ಭಾರತದ ನೆರೆಯ ರಾಷ್ಟ್ರಗಳನ್ನು ಅಸ್ಥಿರಗೊಳಿಸಲು ಪಾಕಿಸ್ತಾನ ಮತ್ತು ಚೀನಾ ಬಹಳ ವರ್ಷಗಳಿಂದ ಕುತಂತ್ರಗಳನ್ನು ಎಣೆಯುತ್ತಲೇ ಇವೆ. ಇದೀಗ ಬಾಂಗ್ಲಾ ವಿಚಾರದಲ್ಲಿ ಶತ್ರುರಾಷ್ಟ್ರಗಳ ಷಡ್ಯಂತ್ರವನ್ನು ನಿರ್ಲಕ್ಷಿಸುವಂತಿಲ್ಲ. ಈ ಬಗ್ಗೆ ಅನುಮಾನ ಬಲವಾಗಿದೆ. ನಿಮಗೆ ಗೊತ್ತಿರಬಹುದು ಈ ಹಿಂದೆ ಶ್ರೀಲಂಕಾದ ಹೀನಾಯ ಆರ್ಥಿಕ ಪರಿಸ್ಥಿತಿಗೆ ಚೀನಾ ನೇರವಾಗಿ ಕಾರಣವಾಗಿತ್ತು. ಇಂದು ಬಾಂಗ್ಲಾಗೆ ಬಂದಿರುವ ಸ್ಥಿತಿ ಬಹಳ ಹಿಂದೆಯೇ ಲಂಕಾಗೂ ಬಂದಿತ್ತು. ಚೀನಾ ಕೊಟ್ಟ ಸಾಲವೇ ಹಣದುಬ್ಬರ ಮತ್ತು ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಯಿತು. ಇನ್ನು ನೆರೆಯ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯಲು ತಾಲಿಬಾನ್ ಉಗ್ರರಿಗೆ ಪಾಕಿಸ್ತಾನ ಬಹಿರಂಗವಾಗಿಯೇ ನೆರವು ನೀಡಿತು. ಇನ್ನು ಚೀನಾ ಕಾರಣದಿಂದಾಗಿ ನೇಪಾಳದಲ್ಲಿ ಆಗಾಗ ಅಧಿಕಾರ ಬದಲಾವಣೆ ಆಗುತ್ತಲೇ ಇರುತ್ತದೆ.
ಪಾಕಿಸ್ತಾನ ಮತ್ತು ಚೀನಾ ಮೇಲೆ ಅನುಮಾನ ಏಕೆ?
ಬಾಂಗ್ಲಾದೇಶವು 1971ರಲ್ಲಿ ಸ್ವಾತಂತ್ರ್ಯವನ್ನು ಪಡೆದಾಗಿನಿಂದ ಪಾಕಿಸ್ತಾನವು ನಿರಂತರವಾಗಿ ಬಾಂಗ್ಲಾವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ಇತ್ತೀಚಿನ ದಂಗೆಯಲ್ಲಿ ಐಎಸ್‌ಐ ಕೂಡ ಒಂದು ಪಾತ್ರವನ್ನು ವಹಿಸಿದೆ ಎನ್ನಲಾಗಿದೆ. ಈ ಪ್ರತಿಭಟನೆಯ ಹಿಂದೆ ಉಗ್ರರ ಕೈವಾಡದ ಜತೆಗೆ ಕೆಲ ಎನ್‌ಜಿಒಗಳು ಸಹ ಪಾತ್ರವೂ ಇದೆ. ಐಎಸ್‌ಐನಿಂದ ಈ ಪ್ರತಿಭಟನೆಗೆ ಹಣದ ನೆರವು ಸಿಕ್ಕಿದೆ ಎಂಬ ಮಾಹಿತಿ ಇದೆ.
ಇನ್ನು ಚೀನಾ ವಿಚಾರಕ್ಕೆ ಬರುವುದಾದರೆ, ಭಾರತದೊಂದಿಗೆ ಶೇಖ್ ಹಸೀನಾ ಅವರ ಬಲವಾದ ಬಾಂಧವ್ಯದಿಂದಾಗಿ ಈ ಹಿಂದೆ ತನ್ನ ಹೂಡಿಕೆಯ ಪ್ರಯತ್ನಗಳಲ್ಲಿ ವಿಫಲವಾದ ಚೀನಾ, ಈಗ ದಂಗೆಯ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರಬಹುದು ಎಂಬ ಗುಮಾನಿ ಎಬ್ಬಿದೆ. ಪ್ರಸ್ತುತ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನವನ್ನು ಚೀನಾ ಖಂಡಿತ ಮಾಡಲಿದೆ ಎಂಬುದು ಅನೇಕರ ಅಭಿಪ್ರಾಯವಾಗಿದೆ.