Wayanad: ವಯನಾಡು ದುರಂತ! ಭಯದಲ್ಲಿ ಕಾಡಿಗೆ ಓಡಿ ಹೋದ ಕುಟುಂಬಕ್ಕೆ ರಾತ್ರಿ ಇಡೀ ಆಶ್ರಯ ನೀಡಿ ಕಾಪಾಡಿದ ಕಾಡಾನೆ!
Wayanad: ಪ್ರಕೃತಿ ಮುನಿಸಿಗೆ ಬಲಿಯಾದ ವಯನಾಡು ಜನರ ರೋಧನೆ ಹೇಳತೀರದು. ಹಾಗೆಯೇ ವಯನಾಡು (Wayanad) ಭೂಕುಸಿತದ ವೇಳೆ ಜೀವ ಉಳಿಸಿಕೊಳ್ಳಲು ಪರಾರಿಯಾಗುತ್ತಿದ್ದ ಇಡೀ ಕುಟುಂಬವನ್ನು ಆನೆಯೊಂದು ಕಾಪಾಡಿದ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ.
ಹೌದು, ಚೂರಲ್‌ಮಲೆಯಲ್ಲಿ ಸುಜಾತಾ ಎಂಬುವವರ ಮನೆ ಪೂರ್ಣ ನಾಶ ಆಗಿದ್ದು, ಪರಿಣಾಮ ಮನೆಯೊಳಗಿದ್ದ ಅಳಿಯ, ಮಗಳು ಮತ್ತು ಇಬ್ಬರು ಮೊಮ್ಮಕ್ಕಳು ಗಾಯಗೊಂಡಿದ್ದರು. ಇನ್ನು ಇಲ್ಲೇ ಇದ್ದರೆ ಪ್ರಾಣಾಪಾಯ ಗ್ಯಾರಂಟಿ ಎಂದು ಸುಜಾತಾ ಇಡೀ ಕುಟುಂಬ ಸದಸ್ಯರನ್ನು ಸೇರಿಸಿಕೊಂಡು ಟೀ ಎಸ್ಟೇಟ್‌ನ ಎತ್ತರದ ಪ್ರದೇಶದತ್ತ ಓಡಿಹೋಗಿದ್ದರು.
ಆದರೆ ಸ್ವಲ್ಪ ದೂರ ಸಾಗುವಷ್ಟರಲ್ಲೇ ಎದುರಿಗೆ ಮೂರು ಕಾಡಾನೆಗಳ ಗುಂಪು ಕಂಡಿತ್ತು. ಭಯಗೊಂಡ ಸುಜಾತಾ ಕುಟುಂಬ ಆನೆಗಳ ಮುಂದೆ ಕೈಮುಗಿದು, ಈಗಷ್ಟೇ ಒಂದು ದುರಂತದಿಂದ ಪಾರಾಗಿ ಬಂದಿದ್ದೇನೆ. ದಯವಿಟ್ಟು ನಮ್ಮ ಕುಟುಂಬವನ್ನು ಬಿಟ್ಟುಬಿಡು. ಬೆಳಗಿನ ಜಾವದವರೆಗೆ ನಮಗೆ ಇಲ್ಲೇ ಇರಲು ಬಿಡಿ ಎಂದು ಅಂಗಲಾಚಿದ್ದಾರೆ.
ಮೂಕ ಜೀವಿಯಾದ ಆನೆಗೆ ಇವರ ದುಃಖದ ಭಾವನೆ ಅರ್ಥವಾಯಿತೋ ಏನೋ. ಅವರ ಮೇಲೆ ಆಕ್ರಮಣ ಮಾಡದೇ ಸುಮ್ಮನಾಗಿದೆ. ಬಳಿಕ ಕುಟುಂಬದ ಎಲ್ಲಾ ಸದಸ್ಯರು ಮೂರು ಆನೆಗಳಿಂದ ಕೆಲವೇ ದೂರದಲ್ಲಿ ಮರದಡಿ ನಿಂತು ಬೆಳಗಿನ ಜಾವದವರೆಗೆ ಕಾಲ ಕಳೆದಿದ್ದಾರೆ. ಅಷ್ಟು ಮಾತ್ರವಲ್ಲ ಆನೆಗಳುಕೂಡಾ ಬೆಳಗಿನ ಜಾವದರೆಗೆ ಅಲ್ಲೇ ನಿಂತು ಕುಟುಂಬಕ್ಕೆ ರಕ್ಷಣೆ ನೀಡಿವೆ.
ಬಳಿಕ ಯಾರೋ ಅಪರಿಚಿತರು ನಮ್ಮನ್ನು ನಿರಾಶ್ರಿತರ ಶಿಬಿರಕ್ಕೆ ಕರೆದೊಯ್ದರು. ಅಲ್ಲಿ ಮತ್ತೆ ಕುಟುಂಬಸ್ಥರು ಸಿಕ್ಕಿದರು ಎಂದು ಮಾಹಿತಿ ನೀಡಿದ್ದಾರೆ ಹೀಗೆ ಆನೆಗಳು ತಮಗೆ ಪ್ರಾಣಭಿಕ್ಷೆ ನೀಡಿದ ಘಟನೆಯನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.