H D Kumarswamy: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ವಿಚಾರ – ಅಂದು ಕುಮಾರಸ್ವಾಮಿ ಹೇಳಿದ ‘ಮಹಾನಾಯಕ’ ಡಿಕೆಶಿ ಅಲ್ಲವೇ ಅಲ್ಲ, ಮತ್ಯಾರು ?

Share the Article

H D Kumarswamy: ದೇಶಾದ್ಯಂತ ಸದ್ದು ಮಾಡಿದ್ದ ಪ್ರಜ್ವಲ್ ರೇವಣ್ಣ(Prajwal Revanna) ಪೆನ್ ಡ್ರೈವ್ ವಿಚಾರ ಇದೀಗ ತಣ್ಣಗಾಗಿರಬಹುದು. ಆದರೆ ತನಿಖೆ ನಡೆಯುತ್ತಲೇ ಇದೆ. ಕೆಲವು ತಿಂಗಳ ಹಿಂದೆ ಈ ವಿಚಾರ ಚರ್ಚೆಯಾಗುವಾಗ ಪೆನ್ ಡ್ರೈವ್ ಹಂಚಿದ್ದು ಯಾರು? ಎಂಬುದೇ ಚರ್ಚೆಯಾಗಿತ್ತು. ದೇವೇಗೌಡರ(H D Devegowda) ಕುಟುಂಬಕ್ಕೆ ಮಸಿ ಬಳಿಯಲು ಇದೆಲ್ಲಾ ಮಾಡಲಾಗಿದೆ ಎನ್ನಲಾಗಿತ್ತು.

ರೇವಣ್ಣ ಕುಟುಂಬಕ್ಕೂ ನನಗೂ ಸಂಬಂಧವೇ ಇಲ್ಲ ಎಂದಿದ್ದ ಕುಮಾರಸ್ವಾಮಿ ಮಾಧ್ಯಮಗಳ ಮುಂದೆ ಆ ‘ಮಹಾನಾಯಕ'(Mahanayaka) ಹೀಗೆಲ್ಲಾ ಮಾಡಿದ್ದಾರೆ, ಪೆನ್ ಡ್ರೈವ್ ಹಂಚಿದ್ದೇ ಆ ಮಹಾನಾಯಕ ಎಂದೆಲ್ಲಾ ಹೇಳಿದ್ದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಹೇಳಿದ್ದ ಮಹಾನಾಯಕ ಯಾರು ಎಂಬ ಕುತೂಹಲ ಜನರಲ್ಲಿ ಮೂಡಿ, ಅದರ ಬೆನ್ನು ಹತ್ತಿದಾಗ ಡಿ ಕೆ ಶಿವಕುಮಾರ್(D K Shivkumar) ಅವರೇ ಆ ಮಹಾನಾಯಕ ಎಂದು ಬಗೆಯಲಾಗಿತ್ತು. ಮಾಧ್ಯಮಗಳೂ ಇದನ್ನೇ ಭಿತ್ತರಿಸಿದ್ದವು.

ಯಾಕೆಂದರೆ ಹಾಸನ ಪೆನ್‌ಡ್ರೈವ್‌ ವಿಚಾರಕ್ಕೆ ಸಂಬಧಿಸಿದಂತೆ ಇದರ ಹಿಂದೆ ಇರುವ ಮಹಾನಾಯಕನ ಹೆಸರನ್ನು ಬಯಲುಗೊಳಿಸುವುದಾಗಿ ಕುಮಾರಸ್ವಾಮಿ ಹೇಳುತ್ತಲೇ ಬರುತ್ತಿದ್ದರು. ತಮ್ಮ ವಿಡಿಯೋ ಬಿಡುಗಡೆಯಾಗಿ, ರಾಜೀನಾಮೆ ನೀಡಬೇಕಾದಂತಹ ಪರಿಸ್ಥಿತಿ ಎದುರಾದಾಗ, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಕೂಡಾ ಮಹಾನಾಯಕ ಎನ್ನುವ ಪದವನ್ನು ಬಳಸುತ್ತಿದ್ದರು. ಇದರಿಂದ, ರಮೇಶ್ ಜಾರಕಿಹೊಳಿ ಮತ್ತು ಕುಮಾರಸ್ವಾಮಿ ಉಲ್ಲೇಖಿಸುತ್ತಿರುವ ಮಹಾನಾಯಕ ಎಂದರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಎಂದು ಜನಸಾಮಾನ್ಯರಲ್ಲಿ ಇತ್ತು. ಇದುವರೆಗೂ ಎಲ್ಲರೂ ಹಾಗೇ ಭಾವಿಸಿದ್ದರು. ಆದರೀಗ ಇದು ಸುಳ್ಳು ಎನ್ನಲಾಗಿದೆ. HDK ಹೇಳಿದ್ದ ಮಹಾನಾಯಕ ಬೇರೆ ಎಂದು ಬಣ್ಣಿಸಲಾಗಿದೆ. ಮುಖ್ಯವಾಗಿ ಕುಮಾರಸ್ವಾಮಿ ಅವರೇ ಮಹಾನಾಯಕ ಯಾರೆಂದು ಬಯಲು ಮಾಡಿದಂತೆ ತೋರುತ್ತಿದೆ.

ಹೌದು, ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಆಯೋಜಿಸಲು ಉದ್ದೇಶಿಸಿದ್ದ ಬೆಂಗಳೂರು – ಮೈಸೂರು ಪಾದಯಾತ್ರೆಯಿಂದ ಜೆಡಿಎಸ್ ಹಿಂದಕ್ಕೆ ಸರಿದಿದೆ. ರಾಷ್ಟ್ರ ರಾಜಧಾನಿಯಲ್ಲಿ ಈ ಬಗ್ಗೆ ಸ್ಪಷ್ಟನೆಯನ್ನು ಕೊಡುವ ವೇಳೆ, ನಮ್ಮ ಕುಟುಂಬದ ಮಾನಮರ್ಯಾದೆ ಬೀದಿಗೆ ತಂದವನ ಜೊತೆ ವೇದಿಕೆ ಹಂಚಿಕೊಳ್ಳಬೇಕೇ ಎಂದು ಹಾಸನ ಅಶ್ಲೀಲ ಪೆನ್‌ಡ್ರೈವ್‌ ಅನ್ನು ಊರೆಲ್ಲಾ ಹಂಚಿದ್ದು ಯಾರು ಎನ್ನುವ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಆ ಮೂಲಕ, ಆ ಮಹಾನಾಯಕ ಯಾರು ಎನ್ನುವುದನ್ನು ಜನರ ಮುಂದೆ ಕುಮಾರಸ್ವಾಮಿ ಇಟ್ಟಿದ್ದಾರೆ.

ಆ ಮಹಾನಾಯಕನೇ ಹಾಸನದ ಮಾಜಿ MLA ಪ್ರೀತಂ ಗೌಡ(Preetam Gouda) ಎನ್ನಲಾಗಿದೆ. ಹೌದು, ಹಾಸನದ ಮಾಜಿ ಬಿಜೆಪಿ ಶಾಸಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ವಿರುದ್ದ ಎಚ್‌ಡಿಕೆ ಕಿಡಿಕಾರಿದ್ದಾರೆ. ಈಗ, ಪೆನ್‌ಡ್ರೈವ್‌ ವಿಚಾರದಲ್ಲಿ ಪ್ರೀತಂ ಗೌಡ ಅವರ ಹೆಸರನ್ನು ಕುಮಾರಸ್ವಾಮಿ ಪ್ರಸ್ತಾಪಿಸಿದ್ದರಿಂದ, ಜನರ ಮನಸ್ಸಿನಲ್ಲಿರುವ ಮಹಾನಾಯಕ ಅವರಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ.

ಒಟ್ಟಿನಲ್ಲಿ, ಮೈಸೂರು ಪಾದಯಾತ್ರೆಗೆ ಸಂಬಂಧಿಸಿದಂತೆ ತಮ್ಮ ಸಿಟ್ಟನ್ನು ಕುಮಾರಸ್ವಾಮಿ ಹೊರಹಾಕಿದ್ದಾರೆ. ಆ ಮೂಲಕ, ದೇವೇಗೌಡರ ಕುಟುಂಬಕ್ಕೆ ಭಾರೀ ಕೆಟ್ಟ ಹೆಸರನ್ನು ತಂದ ಹಾಸನ ಅಶ್ಲೀಲ ಪೆನ್‌ಡ್ರೈವ್‌ ವಿಚಾರದಲ್ಲಿ ತಾವು ಹೇಳುತ್ತಿದ್ದ ಮಹಾನಾಯಕ ಎಂದರೆ ಪ್ರೀತಂ ಗೌಡ ಎಂದು ಕುಮಾರಸ್ವಾಮಿ ಪರೋಕ್ಷವಾಗಿ ಹೇಳಿದಂತಿದೆ. ಅಲ್ಲದೆ ಪಾದಯಾತ್ರೆಯಲ್ಲಿ ಪ್ರೀತಂ ಗೌಡ(Preetam Gouda) ಭಾಗಿಯಾಗಬಾರದು. ಪ್ರೀತಂ ಗೌಡ ಪಾದಯಾತ್ರೆಯಲ್ಲಿ ಇರದಿದ್ದರೆ ಮಾತ್ರ ಜೆಡಿಎಸ್ ಭಾಗಿಯಾಗಲಿದೆ ಎಂದು ಹೇಳಿರುವುದು ಇದೇ ಕಾರಣಕ್ಕೆ ಎನ್ನಲಾಗಿದೆ.

Leave A Reply

Your email address will not be published.