Smruthi Singh: ‘8 ವರ್ಷ ಪ್ರೀತಿಸಿದ್ರೂ 2 ತಿಂಗಳು ಮಾತ್ರ ಜೊತೆಗಿದ್ವಿ’ – ಇಲ್ಲಿದೆ ವೀರಮರಣವನ್ನಪ್ಪಿದ ಯೋಧ ಅಂಶುಮಾನ್- ಸ್ಮೃತಿ ಸಿಂಗ್ ಮನ ಮಿಡಿಯುವ ಲವ್ ಸ್ಟೋರಿ !!

 

Smruthi Singh: ಕಳೆದ ವರ್ಷದ ಜುಲೈನಲ್ಲಿ ಸಿಯಾಚಿನ್‌ನಲ್ಲಿ ಹುತಾತ್ಮನಾದ ಕ್ಯಾಪ್ಟನ್‌ ಅನ್ಶುಮಾನ್‌ ಸಿಂಗ್‌ (Captain Anshuman Singh) ಅವರಿಗೆ ಮರಣೋತ್ತರವಾಗಿ ದೇಶದ ಎರಡನೇ ಗ್ಯಾಲಂಟ್ರಿ ಪ್ರಶಸ್ತಿಯಾದ ಕೀರ್ತಿ ಚಕ್ರ ಪ್ರಶಸ್ತಿ (Kirti Chakra Award) ಘೋಷಿಸಲಾಗಿದ್ದು, ಪತಿಯ ಪರವಾಗಿ ಅವರ ಪತ್ನಿ ಸ್ಮೃತಿ ಸಿಂಗ್‌ (Smriti Singh) ಅವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈ ಬಳಿಕ ಅವರು ಮನಮಿಡಿಯುವಂತೆ ತಮ್ಮ ಲವ್ ಸ್ಟೋರಿಯನ್ನು ಹಂಚಿಕೊಂಡಿದ್ದು, ಎಲ್ಲರ ಕಣ್ಣಲ್ಲಿ ನೀರು ಜಿನುಗುವಂತೆ ಮಾಡಿದ್ದಾರೆ.

 

ಹೌದು, ನಿನ್ನೆ ದೆಹಲಿಯಲ್ಲಿ ನಡೆದ ಕೀರ್ತಿ ಚಕ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಯಾಚಿನ್ ದುರಂತದಲ್ಲಿ ಮರಣ ಹೊಂದಿದ ಯೋಧ ಅಂಶುಮಾನ್ ಸಿಂಗ್ ಅವರ ಪತ್ನಿ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಮುದ್ದು ಮುಖದ, ಚಿಕ್ಕ ವಯಸ್ಸಿನ ಯುವತಿ ರಾಷ್ಟ್ರಪತಿಗಳ ಮುಂದೆ ಬಂದು ನಿಲ್ಲುತ್ತಿದ್ದಂತೆ ಎಲ್ಲರ ಕಣ್ಣಲ್ಲೂ ಅಚ್ಚರಿ ಕಾಣುತ್ತಿತ್ತು. ಆದರೆ ಇವರ ಪರಿಸ್ಥಿತಿ ಕಂಡು ಇಡೀ ದೇಶವೇ ಮಮ್ಮಲ ಮರುಗಿತು. ಇದಾದ ಬಳಿಕ ಇದೀಗ ಅಂಶುಮಾನ್ ಮತ್ತು ತನ್ನ ಲವ್ ಸ್ಟೋರಿ ಬಗ್ಗೆ ಸ್ಮೃತಿ ಸಿಂಗ್ ಮಾತನಾಡಿರುವ ವಿಡಿಯೋ ಕೂಡ ವೈರಲ್ ಆಗಿದೆ.

 

ಸ್ಮೃತಿ ಸಿಂಗ್‌ ಮಾತುಗಳು:

“ನಾವಿಬ್ಬರು ಪ್ರೀತಿಸುತ್ತಿದ್ದೆವು. 2023ರ ಫೆಬ್ರವರಿಯಲ್ಲಿ ನಮ್ಮ ಮದುವೆಯಾಗಿತ್ತು. ಇದಾದ ಬಳಿಕ ಅನ್ಶುಮಾನ್‌ ಸಿಂಗ್‌ ಸೇನೆಯ ಕರ್ತವ್ಯಕ್ಕಾಗಿ ಗಡಿಗೆ ತೆರಳಿದ್ದರು. ನಾನು ಮತ್ತು ಅನ್ಶುಮಾನ್‌ ಸಿಂಗ್‌ 2023ರ ಜುಲೈ 18ರಂದು ದೂರವಾಣಿ ಮೂಲಕ ಮಾತನಾಡಿದ್ದೆವು. ಅಂದರೆ ನನ್ನ ಗಂಡ ಅಂಶುಮಾನ್ ಜೊತೆ ಅವರು ಸಾಯುವ ಹಿಂದಿನ ದಿನ ಮನೆ, ಮಗುವಿನ ಬಗ್ಗೆ ಗಂಟೆಗಟ್ಟಲೆ ಮಾತನಾಡಿದ್ದೆವು. ಮರುದಿನ ಬೆಳಗ್ಗೆ ಅವರು ಸಾವನ್ನಪ್ಪಿರುವ ಸುದ್ದಿ ಬಂದಿತು. ಅದೆಲ್ಲ ಆಗಿ 1 ವರ್ಷವಾದರೂ ಆ ಸುದ್ದಿ ಸುಳ್ಳೇನೋ ಎಂದೇ ನನಗೆ ಅನಿಸುತ್ತಿತ್ತು. ಅಂಶುಮಾನ್ ಯಾವಾಗಲೂ ದೇಶಕ್ಕೋಸ್ಕರವೇ ಬದುಕಿದ್ದವರು. ಅವರು ನಿಜವಾಗಲೂ ಹೀರೋ. ತಮ್ಮ ಜೀವವನ್ನು ಲೆಕ್ಕಿಸದೆ ಇನ್ನೂ ಮೂರು ಕುಟುಂಬಗಳನ್ನು ಉಳಿಸಿದ ಅವರು ಏನೇನೋ ಕಷ್ಟಗಳನ್ನು ಸಹಿಸಿಕೊಂಡಿದ್ದಾರೆ. ಅಂಥದ್ದರಲ್ಲಿ ನಾವು ಅವರ ಅಗಲಿಕೆಯ ಕಷ್ಟವನ್ನು ಸಹಿಸಿಕೊಳ್ಳುವುದು ದೊಡ್ಡದೇನಲ್ಲ ಎಂದು ಸ್ಮೃತಿ ಸಿಂಗ್ ಹೇಳಿದ್ದಾರೆ.

 

ನನ್ನದು ಮತ್ತು ಅಂಶುಮಾನ್​ ಅವರದ್ದು ಲವ್ ಎಟ್ ಫಸ್ಟ್ ಸೈಟ್. ನಾವಿಬ್ಬರೂ ಕಾಲೇಜಿನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದೆವು. 1 ತಿಂಗಳು ಒಂದೇ ಕಾಲೇಜಿನಲ್ಲಿ ಓದಿದ್ದೆವು. ಆನಂತರ ಅವರಿಗೆ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ (AFMC) ಸೀಟ್ ಸಿಕ್ಕಿತು. ಹೀಗಾಗಿ, ಇಬ್ಬರೂ ದೂರದ ಊರುಗಳಲ್ಲಿ ಓದಿದೆವು. ನಮ್ಮ ಡಿಸ್ಟನ್ಸ್ ರಿಲೇಷನ್​ಶಿಪ್. ಕೊನೆಗೆ ಸೇನೆಯಲ್ಲಿ ವೈದ್ಯರಾಗಿ ಅವರಿಗೆ ಕೆಲಸ ಸಿಕ್ಕಿತು. ನಾನು ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡೆ. 8 ವರ್ಷಗಳ ಕಾಲ ದೂರದಲ್ಲಿದ್ದುಕೊಂಡೇ ಪ್ರೀತಿ ಮಾಡಿದೆವು. ಕಳೆದ ವರ್ಷ ಫೆಬ್ರವರಿಯಲ್ಲಿ ಇಬ್ಬರೂ ಮದುವೆಯಾದೆವು. ಆದರೆ, ಅದಾದ ಎರಡೇ ತಿಂಗಳಲ್ಲಿ ಅವರು ಸಿಯಾಚಿನ್​ಗೆ ಶಿಫ್ಟ್​ ಆಗಬೇಕಾಯಿತು. ಆಗ ಹೋದವರು ಮತ್ತೆ ವಾಪಾಸ್ ಬರಲೇ ಇಲ್ಲ.” ಎಂದು ಸ್ಮೃತಿ ಹೇಳಿದ್ದಾರೆ.

https://www.instagram.com/reel/C9EhEYYxbTT/?igsh=Y2d3ODJtbno4czdk

ಕಳೆದ ವರ್ಷ ಏನಾಗಿತ್ತು?

2023ರ ಜುಲೈ 19ರಂದು ಸಿಯಾಚಿನ್‌ನಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಬೆಳಗಿನ ಜಾವ ಭಾರತೀಯ ಸೇನೆಯ ಶಸ್ತ್ರಾಸ್ತ್ರಗಳನ್ನು ಇರಿಸುವ ನೆಲೆಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು. ಫೈಬರ್‌ ಗ್ಲಾಸ್‌ನ ಕೋಣೆಯಲ್ಲಿ ಸಿಲುಕಿದ್ದ ಹಲವು ಸೈನಿಕರನ್ನು ಕ್ಯಾಪ್ಟನ್‌ ಅನ್ಶುಮಾನ್ ಸಿಂಗ್‌ ಅವರು ರಕ್ಷಣೆ ಮಾಡಿದ್ದರು. ಆದರೆ, ರಕ್ಷಣೆ ಮಾಡಿದ ಬಳಿಕ ಅವರೇ ಅಗ್ನಿಯ ಕೆನ್ನಾಲಗೆಗೆ ಸಿಲುಕಿ ಹುತಾತ್ಮರಾಗಿದ್ದರು.

Leave A Reply

Your email address will not be published.