Mumbai: ಮೊಬೈಲ್‌ ಬೆಳಕಿನಲ್ಲಿ ಸಿಸೇರಿಯನ್‌ ಹೆರಿಗೆ ಮಾಡಿದ ವೈದ್ಯರು-ತಾಯಿ, ಮಗು ಸಾವು

Mumbai: ಮುಂಬೈನ ಸರಕಾರಿ ಆಸ್ಪತ್ರೆಯೊಂದರಲ್ಲಿ ವಿದ್ಯುತ್‌ ವ್ಯತ್ಯಯದಿಂದಾಗಿ ವೈದ್ಯರು ಮೊಬೈಲ್‌ ಟಾರ್ಚ್‌ ಬಳಸಿ ಗರ್ಭಿಣಿಗೆ ಹೆರಿಗೆ ಮಾಡಲು ಮುಂದಾದ ಕಾರಣದಿಂದ ತಾಯಿ ಮಗು ಮೃತಪಟ್ಟ ಘಟನೆಯೊಂದು ನಡೆದಿದೆ. ಮುಂಬೈ ಮಹಾನಗರ ಪಾಲಿಕೆ ನಡೆಸುತ್ತಿರುವ ಸುಷ್ಮಾ ಸ್ವರಾಜ್‌ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.

ಇದನ್ನೂ ಓದಿ: Pendrive Case: ಅಶ್ಲೀಲ ವಿಡಿಯೋ ಡ್ರೈವರ್ ಕಾರ್ತಿಕ್ ಗೆ ದೊರಕಿದ್ದು ಹೇಗೆ?

ಮೃತ ಮಹಿಳೆಯ ಪತಿ ಖುಸ್ರುದ್ದೀನ್‌ ಅನ್ಸಾರಿ ಅವರು ಅಂಗವಿಕಲರಾಗಿದ್ದು, ತನ್ನ ಪತ್ನಿ 26 ವರ್ಷದ ಶಾಹಿದುನ್‌ ಅವರನ್ನು ಹೆರಿಗೆಗೆಂದು ಆಸ್ಪತ್ರೆಗೆ ದಾಖಲು ಮಾಡಿದ್ದು, ಈ ಸಂದರ್ಭದಲ್ಲಿ ವೈದ್ಯರು ಸಾಮಾನ್ಯ ಹೆರಿಗೆ ಮಾಡಿಸುವ ಭರವಸೆ ನೀಡಿದ್ದರು. ಆದರೆ ಸೋಮವಾರ ಶಾಹಿದುನ್‌ಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಈ ಸಂದರ್ಭದಲ್ಲಿ ವೈದ್ಯರು ಸಾಮಾನ್ಯ ಹೆರಿಗೆ ಕಷ್ಟ ಎಂದು ಹೇಳಿ ಅಪರೇಷನ್‌ ಮೂಲಕ ಹೆರಿಗೆ ಮಾಡಲು ಮುಂದಾಗಿದ್ದಾರೆ.

ಆದರೆ ಈ ವೇಳೆ ಆಸ್ಪತ್ರೆಯಲ್ಲಿ ವಿದ್ಯುತ್‌ ಇರಲಿಲ್ಲ. ಜನರೇಟರ್‌ ಕೂಡಾ ಕಾರ್ಯನಿರ್ವಹಿಸುತ್ತಿರಲಿಲ್ಲ. ನಂತರ ವೈದ್ಯರು ಮೊಬೈಲ್‌ ಟಾರ್ಚ್‌ ಬೆಳಕಿನ ಮೂಲಕ ಹೆರಿಗೆ ಮಾಡಲು ಮುಂದಾಗಿದ್ದಾರೆ. ಆದರೆ ಈ ವೇಳೆ ತಾಯಿ ಮತ್ತು ಹೊಟ್ಟೆಯಲ್ಲಿದ್ದ ಮಗು ಕೊನೆಯುಸಿರೆಳೆದಿದ್ದಾರೆ.

ಈ ವಿಷಯ ಗೊತ್ತಾಗುತ್ತಿದ್ದಂತೆ ಕುಟುಂಬ ಸದಸ್ಯರು ಆಸ್ಪತ್ರೆಯ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ತುರ್ತು ಸೇವಾ ಘಟಕದಲ್ಲಿ ಆಮ್ಲಜನಕದ ಕೊರತೆ ಇತ್ತು. ಇದರಿಂದ ಪತ್ನಿ ಮೃತ ಹೊಂದಿರುವುದಾಗಿ ಮಹಿಳೆಯ ಪತಿ ಆರೋಪ ಮಾಡಿದ್ದಾರೆ.

ಇತ್ತ ತಾಯಿ ಮಗು ಸಾವು ಆದ ನಂತರ ಅದೇ ಅಪರೇಷನ್‌ ಥಿಯೇಟರ್‌ನಲ್ಲಿ ಮೊಬೈಲ್‌ ಟಾರ್ಚ್‌ನಲ್ಲಿ ಮತ್ತೊಂದು ಹೆರಿಗೆ ಮಾಡಲಾಯಿತು ಎಂದು ಕುಟುಂಬದವರು ಹೇಳಿದ್ದಾರೆ.

ಇದೀಗ ಮಹಾನಗರ ಪಾಲಿಕೆ ತನಿಖೆಗೆ ಮುಂದಾಗಿದ್ದು, ತನಿಖೆಯ ನಂತರ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Leave A Reply

Your email address will not be published.