Mangalore: ಮಂಗಳೂರು ಕಾಂಗ್ರೆಸ್ MP ಪಟ್ಟಿಯಲ್ಲಿದ್ದ ಕಿರಣ್ ಬುಡ್ಲೆ ಗುತ್ತು ಹೆಸರು ಹೈಕಮಾಂಡ್ ಅಂತಿಮ ಪಟ್ಚಿಯಲ್ಲಿ ಕೈಬಿಡಲು ಭಾರೀ ಷಡ್ಯಂತ್ರ ! ವಾಮಮಾರ್ಗ ಹಿಡಿದು ಕೈ ಅಡ್ಡ ಹಿಡಿಯಲು ಹೊರಟವರು ಯಾರು ?!
ಮಂಗಳೂರು: ಮಂಗಳೂರಿನಲ್ಲಿ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಇದೀಗ ದೊಡ್ಡ ಮಟ್ಟದ ರಾಜಕೀಯ ಸ್ತಿತ್ಯಂತರಗಳು ಗೋಚರವಾಗುತ್ತಿವೆ. ಈ ಸಲ ಸಾಂಪ್ರದಾಯಿಕ ಗೆಲುವು ಕಾಣುತ್ತಿರುವ ಬಿಜೆಪಿಯ ಭುಜಕ್ಕೆ ಭುಜ ಕೊಟ್ಟು ಟಕ್ಕರ್ ನೀಡಲು ಕಾಂಗ್ರೆಸ್ ಎಲ್ಲಾ ರೀತಿಯಿಂದಲೂ ಸನ್ನದ್ಧವಾಗಿದೆ. ಹಾಲಿ ಬಿಜೆಪಿ ಎಂಪಿ ನಳೀನ್ ಕುಮಾರ್ ಕಟೀಲ್ ಮೇಲೆ ಜನರಿಗೆ ಇರುವ ಕೋಪ ಮತ್ತು ಒಟ್ಟಾರೆ ಬಿಜೆಪಿಯೆಡೆಗೆ ಕರಾವಳಿಯಲ್ಲಿ ಇರುವ ಅಸಮಾಧಾನ ಒಂದೆಡೆಯಾದರೆ, ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಸೃಷ್ಟಿಸಿದ ‘ ಗ್ಯಾರಂಟಿ ಅಲೆ’, ಕರಾವಳಿಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ತಣ್ಣಗಾದ ಕೋಮು ಉದ್ವಿಗ್ನತೆ ಒಟ್ಟಾರೆಯಾಗಿ ಕರಾವಳಿಯ ಪ್ರಜ್ಞಾವಂತ ಜನರಲ್ಲಿ ಕಾಂಗ್ರೆಸ್ ಕಡೆಗೆ ದೊಡ್ಡ ಆಶಾಭಾವನೆ ಮೂಡಿಸುವಂತೆ ಮಾಡಿದೆ. ಈ ಬಾರಿ ಕಾಂಗ್ರೆಸ್ ಒಂದು ಸಣ್ಣ ಪ್ರಯತ್ನ ನಡೆಸಿದರೂ ಸಾಕು, ದೊಡ್ಡ ಮತಗಳ ಅಂತರದಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬಗ್ಗು ಬಡಿಯುವ ಎಲ್ಲಾ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನ ಯಾರೋ ಕೆಲವರ ಹುನ್ನಾರಗಳಿಂದ ಕಾಂಗ್ರೆಸ್ ತನ್ನ ಕಾಲ ಮೇಲೆ ತಾನೇ ಸೈಜು ಕಲ್ಲು ಹಾಕಿಕೊಳ್ಳುತ್ತಿದೆಯಾ ಎನ್ನುವ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: Political News: ಮೋದಿಗೆ ಧನ್ಯವಾದ ಅರ್ಪಿಸಿದ ಪಾಕ್ ಪ್ರಧಾನಿ ಶಹಬಾಜ್ ಷರೀಫ್
ಹೌದು, ಅಭ್ಯರ್ಥಿಗಳ ಆಯ್ಕೆಯಲ್ಲಿ ಮತ್ತೆ ಕಾಂಗ್ರೆಸ್ ಎಡವಲು ಹೊರಟಿದೆಯಾ ಎನ್ನುವ ಬಹು ಮಹತ್ತರ ಬ್ರೇಕಿಂಗ್ ಸುದ್ದಿಯೊಂದು ಇದೀಗ ತಾನೇ ಹೊರ ಬಿದ್ದಿದೆ. ಕರಾವಳಿಯ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಹಲವು ಮಂದಿ ಆಕಾಂಕ್ಷಿಗಳಿದ್ದಾರೆ. ಅವರ ಮಧ್ಯೆ, ಯುವ ನಾಯಕ, ದಕ್ಷಿಣ ಕನ್ನಡದ ಬಹು ಸಂಖ್ಯಾತ ಸಮುದಾಯಕ್ಕೆ ಸೇರಿದ ಕಿರಣ್ ಗೌಡ ಬುಡ್ಲೆಗುತ್ತು ಹೆಸರು ಮುಂಚೂಣಿಯಲ್ಲಿದೆ. ಕಳೆದ 23 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಜೊತೆ ನಂಟು ಬೆಸೆದುಕೊಂಡು ಹಲವಾರು ನಾಯಕತ್ವಗಳನ್ನು, ಹೋರಾಟಗಳನ್ನು ವಹಿಸಿಕೊಂಡು ಬಂದಿರುವ ಕಿರಣ್ ಕಾಂಗ್ರೆಸ್ ಮಂಗಳೂರು ಲೋಕಸಭಾ ಎಂಪಿ ಅಭ್ಯರ್ಥಿಯ ಪಟ್ಟಿಯಲ್ಲಿ ಪದೇ ಪದೇ ಕೇಳಿ ಬರುತ್ತಿರುವ ಹೆಸರು. ಹಲವು ಸಮಾಜಗಳ ಮತ್ತು ಸಂಘಟನೆಗಳ ಜತೆ ನಿಕಟ ಸಂಪರ್ಕ ಇಟ್ಟುಕೊಂಡಿರುವ ಕಿರಣ್ ಗೌಡ ಬುಡ್ಲೆ ಗುತ್ತು ಹುಟ್ಟು ಸಂಘಟಕ, ಸೈಲೆಂಟ್ ಕೆಲಸಗಾರ. ಅವರ ಗೆಲುವು ಈ ಬಾರಿ ಸುಲಭ ಎನ್ನಲಾಗುತ್ತಿತ್ತು. ಅದರಂತೆ ಕಿರಣ್ ಗೌಡ ಬುಡ್ಲೆ ಹೆಸರು ಎಲ್ಲೆಡೆ ಕೇಳಿ ಬರುತ್ತಿತ್ತು. ಸ್ಥಳೀಯ ಮತ್ತು ರಾಜ್ಯದ ಅಭ್ಯರ್ಥಿ ಪಟ್ಟಿಯಲ್ಲಿ ಕಿರಣ್ ಹೆಸರು ಮುಂಚೂಣಿಯಲ್ಲಿತ್ತು. ಆದರೆ ನಿನ್ನೆಯಿಂದ ಬೇರೆಯದೇ ಸುದ್ದಿ ಬರುತ್ತಿದೆ: ಯಾರೋ ಕೆಲವರು ವಾಮ ಮಾರ್ಗದ ಮೂಲಕ ದೆಹಲಿಯ ಮಟ್ಟದಲ್ಲಿ ಕಾಂಗ್ರೆಸ್ ಪಟ್ಟಿಯಿಂದ ಅವರ ಹೆಸರನ್ನು ಕೈ ಬಿಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ನಂಬಲರ್ಹ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಗ್ರಹವಾಗಿದೆ.
ಕಿರಣ್ ಹೆಸರನ್ನು ಕಾಂಗ್ರೆಸ್ ಪಟ್ಟಿಯಿಂದ ಹೊರಗೆ ಇಡುವಂತೆ ಲಾಬಿ ಮಾಡುತ್ತಿರುವವರು ಯಾರು ಎಂಬುದು ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನದ ಹೊಗೆ ಸಾಕಷ್ಟು ದೊಡ್ಡದಾಗಿಯೇ ಹುಟ್ಟಿಕೊಂಡಿದೆ. ಅದಕ್ಕೆ ಬೇರೆ ಕಾರಣಗಳೂ ಇಲ್ಲದಿಲ್ಲ: ಯಾಕೆಂದರೆ ಕಾಂಗ್ರೆಸ್ ನಡೆಸಿದ ಬಹುತೇಕ ಸರ್ವೇಗಳಲ್ಲಿ ಕಿರಣ್ ಗೌಡ ಬುಡ್ಲೆ ಗುತ್ತು ಹೆಸರು ಮುಂಚೂಣಿಯಲ್ಲಿತ್ತು. ಯಾವ ಕಡೆಯಿಂದ ಅಳೆದು ತೂಗಿದರೂ ತಕ್ಕಡಿ ಕಿರಣ್ ಗೌಡ ಬುಡ್ಲೆಗುತ್ತು ಕಡೆಗೇ ಜಗ್ಗಿಕೊಂಡು ನಿಂತಿತ್ತು. ಇದರಿಂದ ತಲೆಕೆಡಿಸಿಕೊಂಡಿರುವ ಕೆಲವು ನಾಯಕರುಗಳು ಕಿರಣ್ ಹೆಸರನ್ನೇ ಪಟ್ಟಿಯಿಂದ ಕೈ ಬಿಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮೂಲಗಳ ಮಾಹಿತಿ ಲಭ್ಯವಾಗಿದೆ. ಈ ರೀತಿ ಹಿತ್ತಿಲ ದಾರಿ ಹಿಡಿದು ಹೊರಟವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಒಂದೆರಡು ದಿನದಲ್ಲಿ ಸ್ಪಷ್ಟ ಮಾಹಿತಿ ದೊರೆಯುವ ಲಕ್ಷಣಗಳಿವೆ.
ಒಟ್ಟಾರೆಯಾಗಿ, ಇಂದಿನ ಬದಲಾದ ರಾಜಕೀಯ ಪರಿಸ್ಥಿತಿಯ ಮತ್ತು ತಂತ್ರಗಾರಿಕೆಯ ಲೆಕ್ಕಾಚಾರದ ದೃಷ್ಟಿಯಿಂದ ನೋಡುವುದಾದರೆ, ಸುಲಭವಾಗಿ ಗೆಲ್ಲಬಹುದಾದ ಸ್ಥಾನವನ್ನು ಕಾಂಗ್ರೆಸ್ ಎಲ್ಲಿ ಕೈ ಚೆಲ್ಲಿ ಬಿಟ್ಟು ಕೊಡಲಿದೆಯೇ ಎನ್ನುವ ಆತಂಕ ಕಾಂಗ್ರೆಸ್ ಕಾರ್ಯಕರ್ತರದ್ದು. ಇತಿಹಾಸದಲ್ಲಿ ಕಾಂಗ್ರೆಸ್ ಇಂತಹ ತಪ್ಪುಗಳನ್ನೇ ಪದೇ ಪದೇ ಮಾಡಿ ಕೈ ಸುಟ್ಟಿಕೊಂಡಿದೆ. ಹೊಸ ನಾಯಕತ್ವಕ್ಕೆ ತೆರೆದುಕೊಳ್ಳದ ಕಾಂಗ್ರೆಸ್ ಜಾಯಮಾನ ಮತ್ತೆ ಮಂಗಳೂರು ಲೋಕಸಭಾ ಚುನಾವಣೆಯಲ್ಲಿ ಅದಕ್ಕೆ ಕಂಟಕ ಆಗುತ್ತಾ ಎನ್ನುವ ಪ್ರಶ್ನೆಯೊಂದಿಗೆ ಆ ವಾಮ ಮಾರ್ಗಿ ಹಳೆಯ ತಲೆಗಳು ಯಾರು ಎನ್ನುವ ಚರ್ಚೆ ಬಿರುಸಾಗಿದೆ. ಸ್ಪಷ್ಟ ಮಾಹಿತಿ ಲಭ್ಯ ಆಗುವ ತನಕ ಕಾದು ನೋಡಬೇಕಿದೆ.