Govt Job: ಕಿರಾಣಿ ಕಟ್ಟಿ ಕೊಡುತ್ತಿದ್ದ ಹುಡುಗಿಗೆ ಏಕಕಾಲದಲ್ಲಿ ನಾಲ್ಕು ಸರ್ಕಾರಿ ಉದ್ಯೋಗದ ಆಫರ್ !

Govt Job: ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವುದು ಅತ್ಯಂತ ಕಠಿಣ ಕೆಲಸ. ಆದರೆ ತೆಲಂಗಾಣದ ಓರ್ವ ಸಾಮಾನ್ಯ ಮಹಿಳೆ ಏಕಕಾಲದಲ್ಲಿ ಒಂದಲ್ಲ, ಎರಡಲ್ಲ , ಒಟ್ಟು ನಾಲ್ಕು ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. ಓರ್ವ ಅತಿ ಸಾಮಾನ್ಯ, ಕಿರಾಣಿ ಅಂಗಡಿಯನ್ನು ನಡೆಸುತ್ತಿರುವ ಬೋಯಿನಪಲ್ಲಿ ಜ್ಯೋತಿ ಎಂಬ ಮಹಿಳೆ ನಾಲ್ಕು ಸರ್ಕಾರಿ ಉದ್ಯೋಗ ಪಡೆದುಕೊಂಡು ಬಿಟ್ಟಿದ್ದಾಳೆ. ದಿನಸಿ ಕಟ್ಟುವ ಕೈಯಲ್ಲೀಗ ನಾಲ್ಕು ಸರ್ಕಾರಿ ಕೆಲಸದ ಆಫರ್!!!

ಜ್ಯೋತಿ ಆದಿಲಾಬಾದ್ ಜಿಲ್ಲೆಯ ಸೋನಾಲಾ ಗ್ರಾಮದವರು. ಇತ್ತೀಚೆಗಷ್ಟೇ ಬಿಡುಗಡೆಯಾದ ಗುರುಕುಲ ಫಲಿತಾಂಶದಲ್ಲಿ ಆಕೆ ನಾಲ್ಕು ಉದ್ಯೋಗಗಳಿಗೆ ಆಯ್ಕೆಯಾಗಿದ್ದಾಳೆ. ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಜ್ಯೋತಿ ಎಲ್ಲಿಂದಲೂ ಕೋಚಿಂಗ್ ತೆಗೆದುಕೊಂಡಿಲ್ಲ. ಬದಲಿಗೆ, ಅವಳು ಸ್ವಯಂ ಅಧ್ಯಯನದಲ್ಲಿ ತೊಡಗಿ ಈ ಸಾಧನೆ ಮಾಡಿದ್ದಾಳೆ.
ಜ್ಯೋತಿಯ ಜೀವನ ಕಥೆ ಇತರರಿಗೆ ಮಾದರಿಯಾಗುವ ಹಾಗಿದೆ. ಯಾಕೆಂದರೆ ಜ್ಯೋತಿ ಒಂದು ಸಣ್ಣ ಕಿರಾಣಿ ಅಂಗಡಿಯನ್ನು ನಡೆಸುತ್ತಾಳೆ; ಅವಳು ಅಲ್ಲಿ ಹಲವು ರೀತಿಯ ಪೂಜಾ ಸಾಮಗ್ರಿಗಳನ್ನು ಮಾರುತ್ತಾಳೆ. ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಲು ಅಂಗಡಿಯನ್ನು ನಡೆಸುತ್ತಲೇ ಓದಿದವಳು ಆಕೆ.

ಜ್ಯೋತಿ ಜಿಲ್ಲಾ ಪರಿಷತ್ ವ್ಯಾಪ್ತಿಯ ಪ್ರೌಢಶಾಲೆಯಲ್ಲಿ 10ನೇ ತರಗತಿವರೆಗೆ ಓದಿದ್ದಾಳೆ. ನಂತರ ಬಜಾರ್ ಹತ್ನೂರು ಮಂಡಲ ಕೇಂದ್ರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಮಧ್ಯಂತರ ಶಿಕ್ಷಣವನ್ನು ಪೂರ್ಣಗೊಳಿಸಿ, ತದನಂತರ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ತನ್ನ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದಳು. ತೆಲುಗು ಪದವೀಧರೆ ಆಗುತ್ತಿದ್ದಂತೆ ಜ್ಯೋತಿ ಅವರು ತೆಲಂಗಾಣ ವಿಶ್ವವಿದ್ಯಾಲಯದಲ್ಲಿ ಬಿಎಡ್ ಮುಗಿಸಿದರು. ಅಲ್ಲಿಂದ ಶುರುವಾಗಿತ್ತು ಸ್ಪರ್ಧಾತ್ಮಕ ಪರೀಕ್ಷೆಗಳು. ಆಕೆಯ ಕಾಲೇಜು ಶಿಕ್ಷಕರು ಸಲಹೆ ಮಾಡಿದರು. ಆಕೆ ಶ್ರದ್ಧೆಯಿಂದ ಅಧ್ಯಯನ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ಅವಳ ಕಥೆಯು ಮೊದಲಿಗೆ ಅಲ್ಲಿನ ವಿದ್ಯಾಲಯಗಳಲ್ಲಿ ಸಿಆರ್ಟಿ ಹುದ್ದೆಗೆ ಕಳೆದ ವರ್ಷದ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಗಳಿಸಿದಳು.

ಇತ್ತೀಚೆಗೆ ಗುರುಕುಲ ವಿದ್ಯಾಲಯಗಳಲ್ಲಿ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಗೆ ಹಾಜರಾದ ಜ್ಯೋತಿ ಅವರು ಟಿಜಿಟಿ, ಪಿಜಿಟಿ, ಜೂನಿಯರ್ ಲೆಕ್ಚರರ್ ಮತ್ತು ಡಿಗ್ರಿ ಲೆಕ್ಚರರ್ ಈ ನಾಲ್ಕೂ ಹುದ್ದೆಗಳಿಗೆ ಆಯ್ಕೆಯಾದರು. ಏಕಕಾಲದಲ್ಲಿ ನಾಲ್ಕು ನಾಲ್ಕು ಸರ್ಕಾರಿ ಉದ್ಯೋಗಗಳು: ಯಾವುದನ್ನು ಬಿಡಲಿ, ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಗೊಂದಲ ಬರುವಷ್ಟು ಆಯ್ಕೆಗಳು ಈಗ ಆಕೆಯ. ಮುಂದಿವೆ.

ಜ್ಯೋತಿ ಕಿರಾಣಿ ಅಂಗಡಿ ಕೆಲಸ ಮುಗಿಸಿ ರಾತ್ರಿಯನ್ನು ಹಗಲು ಮಾಡಿಕೊಂಡು ಓದುತ್ತಿದ್ದಳು. ಆಕೆಯ ಪೋಷಕರು ತಮ್ಮ ಮಗಳಿಗಾಗಿ ತುಂಬಾ ಕಷ್ಟಪಟ್ಟಿದ್ದರು. ಇದೀಗ ಎಲ್ಲಾ ಕಷ್ಟಗಳಿಗೂ ಫಲ ಸಿಕ್ಕಿದೆ. ಜ್ಯೋತಿಯ ಸಾಧನೆ ಈಗ ಆಂಧ್ರದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ಅವರ ಸಾಧನೆಗೆ ವ್ಯಾಪಕ ಶ್ಲಾಘನೆ ಕೇಳಿಬಂದಿದೆ. ಈಗ ಜ್ಯೋತಿ ನೆರಡಿಗೊಂಡ ಕಸ್ತೂರ್ಭಾ ವಿದ್ಯಾಲಯದಲ್ಲಿ ತೆಲುಗು ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿಯಿದೆ.

Leave A Reply

Your email address will not be published.