Mangalore Missing Case: ನಾಪತ್ತೆಯಾಗಿದ್ದ ಚೈತ್ರಾ ಹೆಬ್ಬಾರ್‌ ವಿದೇಶದಲ್ಲಿ?!

Share the Article

Dakshina Kananda (Ullala): ದ.ಕ.ದಲ್ಲಿ ಇತ್ತೀಚೆಗೆ ಲವ್‌ ಜಿಹಾದ್‌ ನಡೆದಿದೆ ಎಂದು ಸಂಚಲನ ಸೃಷ್ಟಿಸಿದ್ದ ನಾಪತ್ತೆ ಪ್ರಕರಣದ ಕುರಿತು ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ. ಮಂಗಳೂರಿನ ಉಳ್ಳಾಲದ ಮಾಡೂರಿನ ಪಿಜಿಯಿಂದ ನಾಪತ್ತೆಯಾಗಿದ್ದ ಪಿಎಚ್‌ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್‌ ಇದೀಗ ಗಲ್ಫ್‌ ರಾಷ್ಟ್ರದ ಕತಾರ್‌ನಲ್ಲಿದ್ದಾರೆ ಎನ್ನಲಾಗುತ್ತಿದೆ. ಈಕೆಯ ಪ್ರಿಯಕರ ಶಾರೂಕ್‌ನನ್ನು ಉಳ್ಳಾಲ ಪೊಲೀಸರು ಹಿಮಾಚಲ ಪ್ರದೇಶದಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ನಂತರ ಬಿಟ್ಟು ಕಳಿಸಿರುವುದಾಗಿ ವರದಿಯಾಗಿದೆ.

ಚೈತ್ರಾ ಹೆಬ್ಬಾರ್‌ ತನ್ನ ಪ್ರಿಯಕರ ಬಂಟ್ವಾಳ ತಾಲೂಕಿನ ನೇರಳಕಟ್ಟೆ ನಿವಾಸಿ ಶಾರೂಕ್‌ ಶೇಖ್‌ ನೆರವಿನ ಮೂಲಕ ವಿದೇಶಕ್ಕೆ ವಿಸಿಟಿಂಗ್‌ ವೀಸಾದಲ್ಲಿ ವಿದೇಶಕ್ಕೆ ತೆರಳಿರುವ ಕುರಿತು ವರದಿಯಾಗಿದೆ. ಫೆ.17 ರಂದು ಚೈತ್ರಾ ಹೆಬ್ಬಾರ್‌ ತಾನು ನೆಲೆಸಿದ್ದ ಕೋಟೆಕಾರು ಮಾಡೂರಿನ ಪಿಜಿಯಿಂದ ತನ್ನ ಸ್ಕೂಟರ್‌ ಸಮೇತ ನಾಪತ್ತೆಯಾಗಿದ್ದು, ಫೆ.18 ಕ್ಕೆ ಶಾರೂಕ್‌ ಶೇಖ್‌ ಕೂಡಾ ನಾಪತ್ತೆಯಾಗಿದ್ದ. ನಂತರದ ಬೆಳವಣಿಗೆಯಲ್ಲಿ ಚೈತ್ರಾಳ ಸ್ಕೂಟರ್‌ ಸುರತ್ಕಲ್‌ನಲ್ಲಿ ಪತ್ತೆಯಾಗಿತ್ತು.

ಅನಂತರ ಪೊಲೀಸರ ತೀವ್ರ ತನಿಖೆಯ ಮೂಲಕ ಚೈತ್ರಾ ಬೆಂಗಳೂರಿಂದ ಗೋವಾ-ಮುಂಬೈ ಮಾರ್ಗವಾಗಿ ಹಿಮಾಚಲ ಪ್ರದೇಶದ ಮನಾಲಿಗೆ ತೆರಳಿರುವುದಾಗಿ ವರದಿಯಾಗಿದೆ. ಈಕೆ ತನ್ನ ಅಕೌಂಟ್‌ನಿಂದ 40000 ರೂ.ಗಳನ್ನು ವಿತ್‌ ಡ್ರಾ ಮಾಡಿ ಹಿಮಾಚಲ ಪ್ರದೇಶದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಕತಾರ್‌ಗೆ ಹೋಗಿರುವುದಾಗಿ ವರದಿಯಾಗಿದೆ.

ಪೊಲೀಸರು ಗುರುವಾರ ಹಿಮಾಚಲ ಪ್ರದೇಶದಲ್ಲಿ ಚೈತ್ರಾಳ ಪ್ರಿಯಕರನನ್ನು ಪತ್ತೆ ಮಾಡಿ ಉಳ್ಳಾಲ ಠಾಣೆಗೆ ಕರೆದುಕೊಂಡು ಬಂದಿದ್ದು, ವಿಚಾರಣೆ ನಡೆಸಿದ್ದು, ಈ ಸಂದರ್ಭ ಶಾರೂಕ್‌ ತಾನು ಚೈತ್ರಾ ಪ್ರೀತಿ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದು, ನಂತರ ಪ್ರಾಯ ಪ್ರಬುದ್ಧರು ಎನ್ನುವ ಕಾರಣಕ್ಕೆ ಆತನನ್ನು ಬಿಟ್ಟು ಕಳುಹಿಸಿರುವುದಾಗಿ ವರದಿಯಾಗಿದೆ.

ಚೈತ್ರಾ ಕತಾರ್‌ಗೆ ಹೋಗಿದ್ದರೂ, ಶಾರೂಕ್‌ ಹೋಗಿರಲಿಲ್ಲ. ಏಕೆಂದರೆ ಆತ ಈ ಹಿಂದೆ ವಿದೇಶದಲ್ಲಿದ್ದು, ಜೈಲುಪಾಲಾಗಿದ್ದ. ಈ ಕಾರಣದಿಂದ ಆತನಿಗೆ ಕತಾರ್‌ಗೆ ಹೋಗಲು ಆಗಲಿಲ್ಲ ಎಂದು ಮಾಹಿತಿ ಇದೆ.

ಚೈತ್ರಾ ಕತಾರ್‌ನ ಹೆಣ್ಮಕ್ಕಳ ಪಿಜಿಯೊಂದರಲ್ಲಿ ನೆಲೆಸಿದ್ದು, ಅಲ್ಲಿನ ಇಂಡಿಯನ್‌ ಎಂಬೇಸಿಯಿಂದ ಚೈತ್ರಾ ಉಳ್ಳಾಲ ಪೊಲೀಸರಿಗೆ ಇ-ಮೇಲ್‌ ಮತ್ತು ವಾಟ್ಸಪ್‌ ಮೂಲಕ ಸಂದೇಶ ಕಳುಹಿಸಿದ್ದು, ನಾನು ಪ್ರಬುದ್ಧಳಾಗಿದ್ದು, ನನ್ನ ಇಷ್ಟಪ್ರಕಾರ ಇಲ್ಲಿಗೆ ಬಂದಿದ್ದು, ನನಗೆ ಪ್ರೀತಿ ಮಾಡುವ ಹಕ್ಕಿಲ್ಲವೇ ಎಂದು ಪ್ರಶ್ನೆ ಮಾಡಿರುವುದಾಗಿ ಪೊಲೀಸ್‌ ಮೂಲಗಳಿಂದ ತಿಳಿದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Leave A Reply