Suicide: ವಿದ್ಯಾರ್ಥಿಗಳೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ?

ಹಾಸ್ಟೆಲ್ ವಿದ್ಯಾರ್ಥಿಯೊಬ್ಬ ಜೀವನದಲ್ಲಿ ನನಗೆ ಜಿಗುಪ್ಸೆ ಬಂದಿದೆ ಎಂದು ಇತ್ತೀಚೆಗೆ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದದ್ದು ವಿಷಾದನೀಯ ಸಂಗತಿಯಾಗಿದೆ. ಇಪ್ಪತ್ತರ ಹರೆಯದ ಹುಡುಗನಿಗೆ ಬದುಕಿನ ಬಗೆಗೆ ಅಸಹನೆ ಮೂಡುವುದೆಂದರೆ, ಇಂದಿನ ಯುವ ಪೀಳಿಗೆಯ ಮನಸ್ಥಿತಿಗಳು ಹೇಗಿವೆ? ಅವರು ಮಾನಸಿಕವಾಗಿ ಎಷ್ಟು ಸದೃಢರಾಗಿದ್ದಾರೆ ಎಂಬುದು ಯೋಚಿಸಬೇಕಾದ ವಿಷಯ.

 

ಎನ್.ಸಿ.ಆರ್.ಬಿ ಯ ವರದಿಯ ಪ್ರಕಾರ 2023ರಲ್ಲಿ ಸರಿಸುಮಾರು 13,000 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಅಂಕಿ ಅಂಶಗಳು ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿ ಸಾಗುತ್ತಿರುವುದನ್ನು ಗಮನಿಸಬಹುದಾಗಿದೆ. 2020 ರ ವಿಶ್ವಸಂಸ್ಥೆಯ ವರದಿಯ ಆಧಾರದಲ್ಲಿ ಪ್ರತಿವರ್ಷ ಪ್ರಪಂಚದಾದ್ಯಂತ 7 ಲಕ್ಷಕ್ಕೂ ಅಧಿಕ ಮಂದಿ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. ಭಾರತ ಒಂದರಲ್ಲಿ 2 ಲಕ್ಷ ಮಂದಿ ಇರುವುದು ಗಮನಾರ್ಹವಾದದ್ದು. ಮನಶಾಸ್ತ್ರಜ್ಞರು ಹೇಳುವಂತೆ ಇಂದಿನ ಯುವ ಪೀಳಿಗೆಯ ಶೇ. 50 ಕ್ಕಿಂತಲೂ ಹೆಚ್ಚಿನವರ ಆತ್ಮಹತ್ಯೆಗೆ ಕಾರಣ ಖಿನ್ನತೆಯಾಗಿದೆ. ಅತಿಯಾದ ಇಂಟರ್ನೆಟ್ ಬಳಕೆ, ಮಾದಕ ವಸ್ತುಗಳ ಸೇವನೆ ಹಾಗೂ ಜಾಗತೀಕರಣಕ್ಕೆ ಹೊಂದಿಕೊಳ್ಳುವ ಬರದಲ್ಲಿ ಮಾನಸಿಕವಾಗಿ ಕುಗ್ಗುತ್ತಿದ್ದಾರೆ.

ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ. ಸಮಸ್ಯೆಯೇ ಇಲ್ಲದ ಮನುಷ್ಯನಿರಲು ಅಸಾಧ್ಯ. ಭೂಮಿ ಮೇಲೆ ಹುಟ್ಟಿದ ಪ್ರತಿ ಜೀವಿಯು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಲೇ ಇರುತ್ತದೆ. ಸಮಸ್ಯೆಗಳು ಎದುರಾದಾಗ ಅವುಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು. ಆದರೆ ಕ್ಷುಲ್ಲಕ ಕಾರಣಗಳಿಗೆ ಇಂದು ಬಹಳ ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವುದು ನಿಜಕ್ಕೂ ಸಮಾಜಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡುತ್ತಿದೆ.

ಮನೋವೈದ್ಯರು ಹೇಳುವಂತೆ , ಆತ್ಮಹತ್ಯೆಯ ಯೋಚನೆಯಲ್ಲಿರುವ ವಿದ್ಯಾರ್ಥಿಗಳು ಅನೇಕ ಸುಳಿವುಗಳನ್ನು ನೀಡುತ್ತಾರೆ. ಅವರು ಮೌನಕ್ಕೆ ಸರಿದು ಯಾರೊಂದಿಗೂ ಬೆರೆಯದಿರುವುದು, ತರಗತಿಗಳಿಂದ ದೂರ ಉಳಿಯುವುದು, ಬದುಕಿನ ಬಗ್ಗೆ ನಿರರ್ಥಕಥೆಯನ್ನು ವ್ಯಕ್ತಪಡಿಸುವುದು, ಸಾವಿನ ಬಗ್ಗೆ ಮಾತನಾಡುವುದು, ವೇಷಭೂಷಣ, ಆಹಾರ, ಶುಚಿತ್ವದ ಬಗ್ಗೆ ತೀವ್ರ ನಿರಾಸಕ್ತಿಯಂತಹ ಮುನ್ಸೂಚನೆಗಳನ್ನು ನೀಡುತ್ತಾರೆ. ಈ ಮುನ್ಸೂಚನೆಗಳನ್ನು ಸೂಚಿಸುವ ಸಾಮರ್ಥ್ಯವನ್ನು ಗೆಳೆಯರು, ಪೋಷಕರು, ಶಿಕ್ಷಕರು, ಟ್ಯೂಷನ್ ಕೇಂದ್ರಗಳು, ಹಾಸ್ಟೆಲ್ ವಸತಿಗೃಹಗಳ ಸಿಬ್ಬಂದಿಗಳು ಬೆಳೆಸಿಕೊಳ್ಳಬೇಕಾಗುತ್ತದೆ. ಹಾಗೇ ಗುರುತಿಸಿದ ಮಕ್ಕಳಿಗೆ ಮನೋವೈದ್ಯಕೀಯ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸುವುದು ಒಳ್ಳೆಯದು. ಆಗ ಮಾತ್ರ ಆತ್ಮಹತ್ಯೆ ಎಂಬ ದೊಡ್ಡ ಪಿಡುಗಿಗೆ ಪರಿಹಾರ ಒದಗಿಸಲು ಸಾಧ್ಯವೆಂದು ಪರಿಣಿತರು ಅಭಿಪ್ರಾಯಸುತ್ತಾರೆ.

ವಿದ್ಯಾರ್ಥಿಗಳ ಆತ್ಮಹತ್ಯೆಗೆ ಸಂಬಂಧಿಸಿದಂತೆ ಕಳೆದ 2022 ರಲ್ಲಿ ಕೇಂದ್ರ ಸರ್ಕಾರವು ಮೂರು ಸದಸ್ಯರ ಸಮಿತಿಯನ್ನು ನೇಮಿಸಿ ವರದಿಯನ್ನು ಸಿದ್ಧಪಡಿಸಲು ತಿಳಿಸಿತ್ತು. ಅದೇ ವರ್ಷ ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ತಡೆಯುವ ಸಲಹೆಗಳನ್ನೊಳಗೊಂಡ ಸಮಗ್ರವಾದ ವರದಿಯೊಂದು ಸಿದ್ಧವಾಯಿತು. ವಿಷಾದನೀಯ ಸಂಗತಿ ಎಂದರೆ ಈವರೆಗೆ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿಲ್ಲ. ಈ ವರದಿಯನ್ನು ಅದಷ್ಟು ಬೇಗ ಗಮನಿಸಿ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.

ಈ ಬೆಳವಣಿಗೆಯನ್ನು ಗಮನಿಸಿದರೆ ಇಂದಿನ ಶಿಕ್ಷಣ ಪದ್ಧತಿಯು ಮಕ್ಕಳಿಗೆ ಏನನ್ನು ಕಳಿಸುತ್ತಿದೆ ಎಂಬ ಪ್ರಶ್ನೆ ಮೂಡುತ್ತದೆ. ಇಂದಿನ ಶಿಕ್ಷಣವು ವಿದ್ಯಾರ್ಥಿಗಳಿಗೆ ಮೌಲ್ಯಗಳನ್ನು ಬಿತ್ತುವಲ್ಲಿ ವಿಫಲವಾಗುತ್ತಿದೆ ಎಂಬುದು ಶೋಷನೀಯವಾದದ್ದು. ಕನ್ನಡ, ಇಂಗ್ಲಿಷ್, ಸಮಾಜ, ವಿಜ್ಞಾನ ವಿಷಯಗಳಂತೆ ಮನೋವಿಜ್ಞಾನಕ್ಕೆ ಸಂಬಂಧಿಸಿದಂತೆ, ಆತ್ಮವಿಶ್ವಾಸಕ್ಕೆ ಸಂಬಂಧಿಸಿದಂತೆ ಒಂದು ಹೊಸ ಅಧ್ಯಯನ ವಿಷಯವನ್ನು ಇಡಬೇಕಿದೆ. ಇದರಿಂದಾದರೂ ವಿದ್ಯಾರ್ಥಿಗಳು ಮಾನಸಿಕವಾಗಿ ಸದೃಢರಾಗಬಹುದು.

ಇಂದಿನ ವಿದ್ಯಾರ್ಥಿಗಳಲ್ಲಿ ಸಮಗ್ರ ಓದುವಿಕೆಯ ಕೊರತೆಯು ಎದ್ದು ಕಾಣುತ್ತಿದೆ. ಪಠ್ಯಪುಸ್ತಕಗಳಿಗೆ ಸೀಮಿತವಾಗಿ ಲೋಕಜ್ಞಾನವನ್ನು ಅರಿಯುವಲ್ಲಿ ವಿಫಲವಾಗುತ್ತಿದ್ದಾರೆ. ಬದುಕಲು ಬೇಕಾದ ವಿದ್ಯೆಯನ್ನು ಕಲಿತವನು ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬಲ್ಲ ಸಾಮರ್ಥ್ಯವನ್ನು ಪಡೆದಿರುತ್ತಾರೆ. ಆದರೆ ಇಂದಿನ ಶಿಕ್ಷಣವೆಂಬ ವ್ಯಾಪಾರದಲ್ಲಿ ಬದುಕಿನ ಪಾಠ ದೊರೆಯುವುದು ಅತಿ ವಿರಳವಾಗಿದೆ.

ಪ್ರತಿ ವರ್ಷ ವಿಶ್ವದಾದ್ಯಂತ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಆಚರಿಸುತ್ತೇವೆ. ಇದರ ಉದ್ದೇಶ ಸರಳ. ಖಿನ್ನತೆ ಬಗ್ಗೆ ಅರಿವು ಮೂಡಿಸುವುದು, ಆತ್ಮವಿಶ್ವಾಸವನ್ನು ತುಂಬುವುದು, ವಿವೇಚನೆ, ತಾಳ್ಮೆ, ಜ್ಞಾನ, ಸಾಮರ್ಥ್ಯಗಳನ್ನು ತುಂಬುವುದಾಗಿದೆ. ಎಷ್ಟೇ ಜಾಗೃತಿ ಮೂಡಿಸಿದರು ಆತ್ಮಹತ್ಯೆಯ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿರುವುದು ಕೆಟ್ಟ ಬೆಳವಣಿಗೆಯಾಗಿದೆ. ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೆ ಪರಿಹಾರವಲ್ಲ ಎಂಬುದನ್ನು ಇಂದಿನ ಯುವ ಪೀಳಿಗೆಯ ಮನಗಾಣಬೇಕಿದೆ.

Leave A Reply

Your email address will not be published.