Exam: ತಂಗಿ ಪರೀಕ್ಷೆಯಲ್ಲಿ ಕಾಪಿ ಮಾಡಲೆಂದು ಅಣ್ಣ ಮಾಡಿದ ಖತರ್ನಾಕ್ ಐಡಿಯಾ! ಐಡಿಯಾ ಫೇಲ್ ಆದದ್ದು ಹೇಗೆ?
Maharashtra: ಪರೀಕ್ಷೆಯಲ್ಲಿ ಕಾಪಿ ಮಾಡಲು ಎಂತೆಂತ ಚಾಣಾಕ್ಷತನಗಳನ್ನು ಬಳಸುವ ಜನರಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತು. ಈಗ ಇಂತಹುದೇ ಒಂದು ಘಟನೆ ನಡೆದಿದೆ. ಆದರೆ ಇಲ್ಲಿ ಪರೀಕ್ಷೆ ಬರೆದವರು ಸಿಕ್ಕಿಬಿದ್ದಿಲ್ಲ, ಬದಲಿಗೆ ಸಿಕ್ಕಿಬಿದ್ದದ್ದು ಯಾರು? ಇಲ್ಲೊಂದು ಕುತೂಹಲಕಾರಿ ವಿಷಯ ಇದೆ. ಬನ್ನಿ ತಿಳಿಯೋಣ.
ವ್ಯಕ್ತಿಯೊಬ್ಬ ಪೊಲೀಸ್ ಸಮವಸ್ತ್ರ ಧರಿಸಿ ಪರೀಕ್ಷಾ ಕೇಂದ್ರದಲ್ಲಿ ಭದ್ರತಾ ಕಾರ್ಯವನ್ನು ನಿರ್ವಹಿಸಿದ್ದಾನೆ. ಇದರಲ್ಲೇನು? ಅಂತೀರಾ? ಇಲ್ಲೇ ಇರುವುದು ಟ್ವಿಸ್ಟ್. ಅಸಲಿಗೆ ಈತ ಪೊಲೀಸಲ್ಲ, ನಕಲಿ ಪೊಲೀಸ್. ಈತ ತನ್ನ ಸಹೋದರಿಗೆ 12 ನೇ ತರಗತಿ ಪರೀಕ್ಷೆಯಲ್ಲಿ ನಕಲು ಮಾಡುವ ಉದ್ದೇಶದಿಂದ ಪೊಲೀಸ್ ವೇಷ ಧರಿಸಿ ಭದ್ರತಾ ಕಾರ್ಯ ಮಾಡುವ ಹಾಗೆ ನಟಿಸಿ ಸಿಕ್ಕಿಬಿದ್ದಿದ್ದಾನೆ.
ಈ ಅಪರೂಪದ ಘಟನೆ ನಡೆದಿರುವುದು ಮಹಾರಾಷ್ಟ್ರದ ಅಂಕೋಲಾ ಜಿಲ್ಲೆಯಲ್ಲಿ. ಪೊಲೀಸರ ಕೈಗೆ ಸಿಕ್ಕಿಬಿದ್ದ ವ್ಯಕ್ತಿಯ ಹೆಸರೇ ಅನುಪಮ್ ಮದನ್ ಖಂಡಾರೆ (24).
ಪಾತೂರು ಪಟ್ಟಣದ ಶಹಬಾಬು ಉರ್ದು ಪ್ರೌಢಶಾಲೆಯಲ್ಲಿ 12ನೇ ತರಗತಿಯ ಮೊದಲ ಪರೀಕ್ಷೆಯ ಸಮಯದಲ್ಲಿ ಈ ಘಟನೆ ನಡೆದಿದೆ. ಪಾಂಗ್ರಾ ಬಂಡಿಯಿಂದ ಬಂದ ಖಂಡಾರೆ, ತನ್ನ ತಂಗಿಗೆ ಪರೀಕ್ಷೆಯಲ್ಲಿ ಕಾಪಿ ಮಾಡುವ ನೆರವಿನಲ್ಲಿ ನಿಜವಾದ ಪೊಲೀಸ್ ಧಿರಿಸಿನಲ್ಲಿ ಶಾಲೆಗೆ ಬಂದಿದ್ದಾನೆ. ಪರೀಕ್ಷಾ ಕೇಂದ್ರದ ಭದ್ರತೆಗೆ ನಿಂತು ಅಲ್ಲಿಂದ ಉತ್ತರ ಪತ್ರಿಕೆಯನ್ನು ತೆಗೆದುಕೊಂಡು ಹೋಗುವ ಯೋಜನೆಯನ್ನು ಆರೋಪಿ ಹಾಕಿಕೊಂಡಿದ್ದ.
ಆದರೆ ಪರೀಕ್ಷಾ ಕೇಂದ್ರಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ಕಿಶೋರ್ ಶೆಲ್ಕೆ ಮತ್ತು ಅವರ ತಂಡ ಬಂದಿದ್ದು, ನಿಜವಾದ ಪೊಲೀಸ್ ಬಂದಾಗ ಅನುಪಮ್ ಸೆಲ್ಯೂಟ್ ನೀಡಿದ್ದಾನೆ. ಆದರೆ ಸೆಲ್ಯೂಟ್ ನೀಡಿದ ವಿಧಾನದಿಂದಲೇ ಆತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಅನುಪಮ್ ಮಾಡಿದ ಸೆಲ್ಯೂಟ್ ಪ್ರೊಟೋಕಾಲ್‌ಗೆ ಅನುಗುಣವಾಗಿ ಇರಲಿಲ್ಲ. ಸಮವಸ್ತ್ರದ ಮೇಲೆ ಇದ್ದ ನಾಮಫಲಕ ಕೂಡಾ ತಪ್ಪಾಗಿತ್ತು. ಈ ಕಾರಣದಿಂದ ಅಧಿಕಾರಿಗಳಿಗೆ ಅನುಮಾನ ಬಂದು ಕೂಲಂಕುಷ ತನಿಖೆ ಮಾಡಿದಾಗ ಆತನ ಜೇಬಿನಲ್ಲಿ ಇಂಗ್ಲೀಷ್ ಪರೀಕ್ಷಾ ಪತ್ರಿಕೆಯ ಪ್ರತಿಯನ್ನು ಪತ್ತೆ ಹಚ್ಚಿದ್ದಾರೆ. ಕೂಡಲೇ ವಂಚನೆಯ ಕೃತ್ಯ ಗೊತ್ತಾಗಿದೆ.
ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದು, ಈತನ ವಿರುದ್ಧ 1982 ರ ಕಾಯ್ದೆಯ ಸೆಕ್ಷನ್ 417,419,170,171 ಮತ್ತು ಸೆಕ್ಷನ್ 7 ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.