BESCOM: ತಾಯಿ, ಪುಟ್ಟ ಕಂದನ ಸಾವಿಗೆ ಕಾರಣ ʼಇಲಿʼ ಅಲ್ಲ; ತಾಂತ್ರಿಕ ಲೋಪವೇ ಕಾರಣ
Bengaluru: ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ತಾಯಿ ಮಗು ಸುಟ್ಟು ಕರಕಲಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬಿಗ್ ವರದಿ ಬೆಳಕಿಗೆ ಬಂದಿದೆ. ತಾಂತ್ರಿಕ ತಜ್ಞರ ಸಮಿತಿ, ಘಟನೆಗೆ ತಾಂತ್ರಿಕ ಲೋಪಗಳೇ ಕಾರಣ ಎಂದು ಉಲ್ಲೇಖಿಸಿದೆ. ಈ ಮೂಲಕ ಬೆಸ್ಕಾಂ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ನವೆಂಬರ್ 19,2023 ರಂದು ತನ್ನ ಪುಟ್ಟ ಮಗುವಿನೊಂದಿಗೆ ತಾಯಿಯೋರ್ವಳು ಬೆಳಗ್ಗೆ ಆರರ ಸಮಯಕ್ಕೆ ವೈಟ್ಫೀಲ್ಡ್ನಲ್ಲಿ ಬಸ್ನಲ್ಲಿ ಇಳಿದು, ಮನೆಗೆಂದು ನಡೆದುಕೊಂಡು ಹೋಗುವಾದ ವಿದ್ಯುತ್ ತಂತಿ ತುಳಿದು ಸೌಂದರ್ಯ (23), ಮತ್ತು ಆಕೆಯ ಕಂಕುಳಲ್ಲಿದ್ದ ಎಂಟು ತಿಂಗಳ ಮಗು ಸುವಿಕ್ಷ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದರು.
ಈ ಹೃದಯವಿದ್ರಾವಕ ಘಟನೆಯನ್ನು ಬೆಸ್ಕಾಂ ಅಧಿಕಾರಿಗಳು ಇಲಿ ಮೇಲೆ ಎತ್ತಿ ಹಾಕಿದ್ದರು. ವೈರ್ಗಳನ್ನು ಇಲಿ ಕಚ್ಚಿದ್ದರಿಂದ ಶಾರ್ಟ್ ಸರ್ಕಿಟ್ ಆಗಿದೆ. ಪರಿಣಾಮ ಎಚ್ಟಿ ಲೈನ್ನ ದುರ್ಬಲ ಪಾಯಿಂಟ್ನಲ್ಲಿ ತಂತಿ ತುಂಡಾಗಿ ಬಿದ್ದಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದರು.
ಆದರೆ ಸ್ವತಃ ಸರಕಾರ ನೇಮಿಸಿದ್ದ ತಾಂತ್ರಿಕ ತಜ್ಞರ ಸಮಿತಿ ನೀಡಿದ ತನಿಖಾ ವರದಿಯಲ್ಲಿ ಇಲಿ ಕಚ್ಚಿದ್ದರ ಕುರಿತು ಪ್ರಸ್ತಾಪ ಇರಲಿಲ್ಲ.
ವಿದ್ಯುತ್ ತಂತಿ ಕಡಿದು ಬಿದ್ದಾಗ ಸಾರ್ವಜನಿಕರು ದೂರವಾಣಿ ಕರೆ ಮಾಡಿ ಎಚ್ಚರಿಸಿದ್ದಾರೆ. ಯಾರೂ ಗಮನ ಹರಿಸಲಿಲ್ಲ. ಸಿಬ್ಬಂದಿ ಎಚ್ಚರವಹಿಸಿ ಸ್ಥಳಕ್ಕೆ ಹೋಗಿದ್ದರೆ ಆ ಪುಟ್ಟ ಕಂದಮ್ಮ, ತಾಯಿಯ ಜೀವ ಉಳಿಸಬಹುದಿತ್ತು.