Tattoo: ಟ್ಯಾಟೂ ಹಾಕಿಸಿಕೊಂಡ ಸ್ವಲ್ಪ ಹೊತ್ತಲ್ಲೇ ವ್ಯಕ್ತಿ ಸಾವು! ಯಾಕೆ ಗೊತ್ತಾ?
ಟ್ಯಾಟೂ (Tattoo), ಹಚ್ಚೆ ಈಗ ಎಲ್ಲೆಡೆ ಟ್ರೆಂಡ್. ಅಂಗಡಿಗಳಿಂದ ಹಿಡಿದು ಜಾತ್ರೆ, ಹಬ್ಬದಂತಹ ಸಮಾರಂಭಗಳಲ್ಲೂ ಶೆಡ್ ಹಾಕಿಕೊಂಡು ಕಲಾವಿದರು ಹಚ್ಚೆ ಹಾಕೋದನ್ನು ನೋಡಬಹುದು. ಹೀಗೆ ಶೆಡ್‌ನಲ್ಲಿ ಸ್ಥಾಪಿಸಲಾದ, ಪರವಾನಗಿ ಪಡೆಯದ ಕಲಾವಿದನಿಂದ ಟ್ಯಾಟೂ ಹಾಕಿಸಿಕೊಂಡ 32 ವರ್ಷದ ಇಂಗ್ಲೆಂಡ್‌ನ ಬೆನ್ ಲ್ಯಾರಿ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಟ್ಯಾಟೂ ಹಾಕಿಸಿಕೊಂಡ ಸ್ವಲ್ಪ ಹೊತ್ತಲ್ಲೇ ಗಂಭೀರವಾದ ಸೆಪ್ಸಿಸ್‌ಗೆ (Sepsis) ತುತ್ತಾಗಿ ಲ್ಯಾರಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರು ತನಿಖೆ ನಡೆಸಿದ್ದು, ಹಚ್ಚೆ ಹಾಕಿದವರನ್ನು ಬಂಧಿಸಿದ್ದಾರೆ.
ಏನಿದು ಸೆಪ್ಸಿಸ್?
ಸೆಪ್ಸಿಸ್ ಒಂದು ಸಂಭಾವ್ಯ ಮಾರಣಾಂತಿಕ ಸ್ಥಿತಿಯಾಗಿದ್ದು ಅದು ಸೋಂಕಿಗೆ ದೇಹದ ಪ್ರತಿಕ್ರಿಯೆಯು ತನ್ನದೇ ಆದ ಅಂಗಾಂಶಗಳು ಮತ್ತು ಅಂಗಗಳಿಗೆ ಗಾಯವನ್ನು ಉಂಟುಮಾಡಿದಾಗ ಉದ್ಭವಿಸುತ್ತದೆ. ದೇಹದ ಅಂಗಗಳು ಮತ್ತು ಅಂಗಾಂಶಗಳನ್ನು ತೀವ್ರವಾಗಿ ಹಾನಿಗೊಳಿಸುವ ಮೂಲಕ ಪ್ರಾಣಕ್ಕೆ ಸಂಚಕಾರವಾಗಿದೆ.
ಸೆಪ್ಸಿಸ್‌ನ ಲಕ್ಷಣಗಳು
ಸೆಪ್ಸಿಸ್ ದೇಹದಾದ್ಯಂತ ಉರಿಯೂತ ಮತ್ತು ಹೆಪ್ಪುಗಟ್ಟುವಿಕೆಯನ್ನು ಉಂಟುಮಾಡುತ್ತದೆ. ದೇಹದ ವಿವಿಧ ಅಂಗಗಳಿಗೆ ರಕ್ತದ ಹರಿವನ್ನು ಇದು ಕಡಿಮೆ ಮಾಡುತ್ತದೆ. ಇನ್ನೂ ಸೆಪ್ಸಿಸ್ನ ಸಾಮಾನ್ಯ ಲಕ್ಷಣಗಳು ಹೀಗಿವೆ.
ಸೆಪ್ಸಿಸ್‌ಗೆ ಕಾರಣವೇನು?
ಬ್ಯಾಕ್ಟೀರಿಯಾದ ಸೋಂಕುಗಳು ಈ ಸೋಂಕಿನ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಇದು ಅಂತಿಮವಾಗಿ ಅಂಗಗಳ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗುತ್ತದೆ. ಅದರೊಂದಿಗೆ, ಅನೇಕ ಶಿಲೀಂಧ್ರಗಳು, ಪರಾವಲಂಬಿಗಳು ಮತ್ತು ವೈರಲ್ ಸೋಂಕುಗಳು ಸಹ ಸೆಪ್ಸಿಸ್‌ನ ಸಂಭಾವ್ಯ ಕಾರಣಗಳಾಗಿವೆ.
ಸೆಪ್ಸಿಸ್ ಅನ್ನು ಹೇಗೆ ತಡೆಯಬಹುದು?
ಸೆಪ್ಸಿಸ್ ಅನ್ನು ತಡೆಗಟ್ಟಲು ನೀವು ತೆಗೆದುಕೊಳ್ಳಬಹುದಾದ ಕ್ರಮಗಳು ಉತ್ತಮ ನೈರ್ಮಲ್ಯವನ್ನು ಅಭ್ಯಾಸ ಮಾಡುವುದು, ಕಡಿತ ಮತ್ತು ಇತರ ಗಾಯಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ವಾಸಿಯಾಗುವವರೆಗೆ ಅವುಗಳನ್ನು ಮುಚ್ಚುವುದು, ಶಿಫಾರಸು ಮಾಡಿದ ಲಸಿಕೆಗಳ ಬಗ್ಗೆ ನವೀಕೃತವಾಗಿರುವುದು ಮತ್ತು ಶಂಕಿತ ಸೋಂಕು ಕಂಡುಬಂದರೆ ವೈದ್ಯಕೀಯ ಆರೈಕೆ ಪಡೆಯಬೇಕು.
ಟ್ಯಾಟೂ ಹಾಕಿಸಿಕೊಳ್ಳುವಾಗ ಇರಲಿ ಎಚ್ಚರ
ಡರ್ಮಿಸ್ ಎಂದು ಕರೆಯಲ್ಪಡುವ ಚರ್ಮದ ಪದರಕ್ಕೆ ಸೂಜಿ ಚುಚ್ಚುವ ಮೂಲಕ ಟ್ಯಾಟೂ ಹಾಕಲಾಗುತ್ತದೆ. ಸೂಜಿಯ ಸಹಾಯದಿಂದ ಶಾಯಿಯನ್ನು ಸೇರಿಸಿದಾಗ ಚರ್ಮದ ವರ್ಣದ್ರವ್ಯ ಬದಲಾಗುತ್ತದೆ ಮತ್ತು ಟ್ಯಾಟೂ ಮೂಡಿಬರುತ್ತದೆ.
ಟ್ಯಾಟೂಗಳ ಜನಪ್ರಿಯತೆ ಹೆಚ್ಚಾದಂತೆ ತೀವ್ರವಾದ ಆರೋಗ್ಯದ ಅಪಾಯವೂ ಹೆಚ್ಚಾಗಿದೆ. ಆದ್ದರಿಂದ, ದೇಹದ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವಾಗ ಅಡ್ಡಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ.
ಟ್ಯಾಟೂ ನಿಯಮಗಳು ಮತ್ತು ಅವಶ್ಯಕತೆಗಳನ್ನು ಅನುಸರಿಸುವ ಪರವಾನಗಿ ಪಡೆದವರಿದಂದ ಟ್ಯಾಟೂ ಹಾಕಿಸಿಕೊಳ್ಳಿ.
ಅಂಗಡಿ ಅಥವಾ ಪಾರ್ಲರ್ ಸ್ವಚ್ಛವಾಗಿದೆ ಮತ್ತು ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಅನುಸರಿಸುತ್ತದೆ ಎಂದು ಖಚಿತಪಡಿಸಿಕೊಳ್ಳಿ.
ಟ್ಯಾಟೂ ಹಾಕುವ ಕಲಾವಿದರು ಕೈಗವಸುಗಳನ್ನು ಬಳಸಿದ್ದಾರೆಯೇ? ಕೈಗಳನ್ನು ತೊಳೆದಿದ್ದಾರೆಯೇ ಇದನ್ನೆಲ್ಲಾ ಚೆಕ್ ಮಾಡಿಕೊಳ್ಳಿ.
ಹೊಸ ಸೂಜಿಗಳನ್ನು ತೆಗೆದುಕೊಂಡಿದ್ದಾರೆಯೇ ಎಂಬುದರ ಬಗ್ಗೆ ನಿಗಾ ಇರಲಿ.
ಹಚ್ಚೆ ಹಾಕಿಸಿಕೊಳ್ಳುವ ನಿಮ್ಮ ಚರ್ಮದ ಭಾಗವನ್ನು ಯಾವಾಗಲೂ ಸೋಂಕುನಿವಾರಕದಿಂದ ಶುಚಿ ಮಾಡಿ.