Sullia News: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬ್ಯಾನರ್ ಹರಿದ ಪ್ರಕರಣವನ್ನು ಬೇಧಿಸಿದ ಪೊಲೀಸರು!!
Sullia News: ಅಯೋಧ್ಯೆ ರಾಮನ ಬ್ಯಾನರ್ ಹರಿದು ಹಾಕಿರುವ ಪ್ರಕರಣವನ್ನು ಪೊಲೀಸರು 24 ಗಂಟೆಯೊಳಗೆ ಬೇಧಿಸಿದ ಕುರಿತು ವರದಿಯಾಗಿದೆ.
ಸುಳ್ಯ ಪೇಟೆಯಲ್ಲಿರುವ ನಲುವತ್ತು ಸಿಸಿ ಕ್ಯಾಮೆರಾ ಫೋಟೋಗಳನ್ನು ಪರಿಶೀಲನೆ ನಡೆಸಿದ ಪೊಲೀಸರು ಇದರ ಹಿಂದಿನ ಕಾರಣವನ್ನು ಪತ್ತೆ ಹಚ್ಚಿದ್ದಾರೆ.
ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಈ ಬ್ಯಾನರ್ ಹಾಕಲಾಗಿತ್ತು. ಜ.5 ರಂದು ರಾತ್ರಿ ಯಾರೋ ಆ ಬ್ಯಾನರ್‌ಗೆ ಹಾನಿ ಉಂಟು ಮಾಡಿದ್ದರು. ಈ ಬ್ಯಾನರ್‌ನ ಮಧ್ಯಭಾಗದಲ್ಲಿ ಶ್ರೀರಾಮನ ಫೋಟೋ ಇತ್ತು. ಅದನ್ನೇ ಹರಿದು ಹಾಕಲಾಗಿತ್ತು. ಇದು ಬಹಳ ಚರ್ಚೆಗೆ ಗ್ರಾಸವಾಗಿತ್ತು.
ಬ್ಯಾನರ್ ಅಳವಡಿಸಿದ ಆಟೋ ರಿಕ್ಷಾ ಸಂಘದ ಅಧ್ಯಕ್ಷರು ಬ್ಯಾನರ್ ಹರಿದ ಬಗ್ಗೆ ಜ.6 ರಂದು ಸುಳ್ಯ ಪೊಲಿಸ್ ಠಾಣೆಗೆ ದೂರು ನೀಡಿದ್ದರು ಎಂದು ವರದಿಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಜ.5 ರಂದು ಮಧ್ಯರಾತ್ರಿ ಮಾನಸಿಕ ಅಸ್ವಸ್ಥನಂತೆ ಕಂಡು ಬರುತ್ತಿರುವ ಅಪರಿಚಿತ ವಯಸ್ಸಾದ ವ್ಯಕ್ತಿಯೋರ್ವ ಆ ಬ್ಯಾನರ್ ಹರಿದು ತನ್ನ ಕೈಯಲ್ಲಿ ಹಿಡಿದುಕೊಂಡು ಸುಳ್ಯ ಪೇಟೆಯಲ್ಲಿ ಸುತ್ತಾಡಿರುವುದು ಕಂಡು ಬಂದಿದೆ ಎಂದು ವರದಿಯಾಗಿದೆ.
ಅಲ್ಲದೇ ಆತ ಆ ಬ್ಯಾನರ್ ತುಂಡನ್ನು ಹಿಡಿದುಕೊಂಡು ರಾಮನ ಜಪ ಮಾಡಿದ್ದನ್ನು ಸಾರ್ವಜನಿಕರು ನೋಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಹಾಗೂ ಹರಿದ ಬ್ಯಾನರ್ ತುಂಡನ್ನು ಪರಿಶೀಲಿಸಲಾಗಿ ಅಯೋಧ್ಯೆಯ ಫೋಟೋಗಾಗಲಿ, ಶ್ರೀರಾಮನ ಫೋಟೋಗಾಗಲಿ ಯಾವುದೇ ರೀತಿ ಹಾನಿ ಆಗಿಲ್ಲ, ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿರುವ ಕುರಿತು ವರದಿಯಾಗಿದೆ.