Belagavi News Moral Policing: ಪ್ರೇಮಿಗಳೆಂದು ಅಕ್ಕ, ತಮ್ಮನನ್ನು ಹಿಡಿದು ಥಳಿಸಿದ ಗುಂಪು! ಮುಂದೇನಾಯ್ತು?

Moral Police: ಅನ್ಯ ಕೋಮಿಯ ಯುವಕರ ಗುಂಪೊಂದು ಪ್ರೇಮಿಗಳೆಂದು ಭಾವಿಸಿ ಸಹೋದರ ಸಹೋದರಿಯ ಮೇಲೆ ನೈತಿಕ ಪೊಲೀಸಗಿರಿ (Moral Police) ನಡೆಸಿರುವ ಘಟನೆಯೊಂದು ವರದಿಯಾಗಿದೆ. ಈ ಘಟನೆ ಬೆಳಗಾವಿಯ ಕೋಟೆ ಕರೆ ಆವರಣದಲ್ಲಿ ನಡೆದಿದೆ.

 

24 ವರ್ಷದ ಯುವತಿಯೋರ್ವಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದು, 21 ವರ್ಷದ ಯುವಕ ಹಣೆಗೆ ತಿಲಕ ಇಟ್ಟುಕೊಂಡಿದ್ದ. ಇದರಿಂದ ಅನುಮಾನಗೊಂಡ ಅನ್ಯಕೋಮಿನ 16 ಜನ ಯುವಕರ ಗುಂಪು ಹಿಂದೂ ಯುವಕ, ಮುಸ್ಲಿಂ ಯುವತಿ ಪ್ರೆಮಿಗಳೆಂದು ಭಾವಿಸಿ ಥಳಿಸಿದ್ದಾರೆ. ನಂತರ ಹತ್ತಿರದ ಕೊಠಡಿಯಲ್ಲಿ ಎರಡು ಮೂರು ಗಂಟೆಗಳ ಕಾಲ ಕೂಡಿ ಹಾಕಿ ಚಿತ್ರ ಹಿಂಸೆ ನೀಡಿದ್ದಾರೆ.

ಯುವತಿ ಮೊಬೈಲ್‌ನಿಂದ ಕುಟುಂಬದವರಿಗೆ ಕರೆ ಮಾಡಿದಾಗ,  ಅವರು, ಅವರಿಬ್ಬರು ಸಹೋದರ ಸಹೋದರಿ ಎಂದು ಹೇಳಿದರೂ ನಂಬದೆ, ಕೂಡಲೇ ಯುವತಿ ಮೊಬೈಲನ್ನು ಸ್ವಿಚ್‌ ಆಫ್‌ ಮಾಡಿ ಮತ್ತೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತಾವು ಸಹೋದರ, ಸಹೋದರಿ ಎಂದು ಹೇಳಿದರೂ ಕೇಳಲಿಲ್ಲ ಎಂದು ಇವರಿಬ್ಬರು ಆರೋಪ ಮಾಡಿದ್ದಾರೆ.

ಕೂಡಲೇ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಪೊಲೀಸರು ಮೊಬೈಲ್‌ ಲೊಕೇಶನ್‌ ಆಧರಿಸಿ ಘಟನಾ ಸ್ಥಳಕ್ಕೆ ಬಂದು ಇಬ್ಬರನ್ನೂ ರಕ್ಷಣೆ ಮಾಡಿದ್ದಾರೆ. ಯುವಕ, ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 16 ಜನರಲ್ಲಿ ಓರ್ವ ಆರೋಪಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆ ಬೆಳಗಾವಿ ಮಾರ್ಕೆಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಯುವತಿಯ ತಂದೆ ಮುಸ್ಲಿಂ ಆಗಿದ್ದು, ತಾಯಿ ಹಿಂದೂ ಆಗಿದ್ದಾರೆ. ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದು, ಯುವತಿ ತನ್ನ ಚಿಕ್ಕಮ್ಮನ ಮಗ ಜೊತೆ ಯುವನಿಧಿ ಅರ್ಜಿ ಸಲ್ಲಿಸಲು ಬಂದಾಗ ಈ ಘಟನೆ ನಡೆದಿತ್ತು.

Leave A Reply

Your email address will not be published.