Mysore KSRTC New Bus Station: ಮೈಸೂರಿನ KSRTC ಬಸ್ ನಿಲ್ದಾಣ ಸ್ಥಳಾಂತರ !! ಯಾವ ಜಾಗಕ್ಕೆ, ಯಾವಾಗ?

Mysore KSRTC New Bus Station: ಮೈಸೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಪ್ರತೀ ದಿನ 1400ಕ್ಕೂ ಅಧಿಕ ಬಸ್‌ಗಳು ಸಂಚಾರ ನಡೆಸುತ್ತವೆ. ನಗರ ಬೆಳೆದಂತೆ ಹೆಚ್ಚಿದ ಜನಸಂಖ್ಯೆಗೆ ಅನುಗುಣವಾಗಿ ಕೆಎಸ್‌ಆರ್‌ಟಿಸಿ ತನ್ನ ಸೇವೆ ವಿಸ್ತರಿಸಬೇಕಿದೆ. ಸದ್ಯ ಹೆಚ್ಚಾಗಿರುವ ಬಸ್‌ಗಳ ಸಂಖ್ಯೆಯಿಂದಾಗಿ ನಿಲ್ದಾಣದಲ್ಲಿ ವಾಹನ ದಟ್ಟಣೆ ಸೃಷ್ಟಿಯಾಗಿದೆ. ಶುಕ್ರವಾರ, ಶನಿವಾರ, ಭಾನುವಾರ, ಹಬ್ಬ ಸೇರಿದಂತೆ ಇನ್ನಿತರ ರಜೆ ಸಂದರ್ಭಗಳಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ. ಜನರನ್ನು ಹತ್ತಿಸಿಕೊಳ್ಳಲು ಸ್ವಲ್ಪ ಹೊತ್ತು ಬಸ್‌ ನಿಲ್ಲಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಬಸ್‌ ನಿಲ್ದಾಣ ಸ್ಥಳಾಂತರ (Mysore KSRTC New Bus Station) ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಹೌದು, ಮೈಸೂರು ಕೇಂದ್ರೀಯ ಬಸ್‌ ನಿಲ್ದಾಣವನ್ನು ಕೆಎಸ್‌ಆರ್‌ಟಿಸಿಗೆ ಸೇರಿದ ಬನ್ನಿಮಂಟಪ ಡಿಪೋ ಖಾಲಿ ಜಾಗಕ್ಕೆ ಸ್ಥಳಾಂತರ ಮಾಡಬೇಕು ಎನ್ನುವ ಬೇಡಿಕೆ ಹೆಚ್ಚಿದೆ. ಪ್ರಸ್ತಾವನೆಯನ್ನು ಸರಕಾರದ ಗಮನಕ್ಕೆ ತರಲು ಕೆಎಸ್‌ಆರ್‌ಟಿಸಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮುಖ್ಯವಾಗಿ ಕೊಳ್ಳೇಗಾಲ, ಮಳವಳ್ಳಿ, ತುಮಕೂರು ಭಾಗಕ್ಕೆ ತೆರಳುವ ಬಸ್‌ ನಿಲ್ಲಿಸಲು ಫ್ಲಾಟ್‌ ಫಾರಂಗಳೇ ಇಲ್ಲದೇ ಗೋಡೆಯ ಪಕ್ಕದಲ್ಲಿರುವ ಜಾಗದಲ್ಲಿಯೇ ಬಸ್‌ಗಳನ್ನು ನಿಲ್ಲಿಸಿಕೊಂಡು ಜನರನ್ನು ಹತ್ತಿಸಿಕೊಳ್ಳಬೇಕು. ಇಲ್ಲಿ ಬಸ್‌ಗೆ ಕಾಯುವ ಜನರು ಕುಳಿತುಕೊಳ್ಳಲು ಜಾಗವಿಲ್ಲ. ಚಾಮರಾಜ ನಗರ ಹಾಗೂ ಅಕ್ಕ ಪಕ್ಕದ ಕೆಲ ಪ್ಲಾಟ್‌ ಫಾರಂಗಳಲ್ಲಿ ಕೇವಲ ಎರಡು ಇಲ್ಲವೇ ಮೂರು ಬಸ್‌ ಮಾತ್ರ ನಿಲ್ಲಿಸಬಹುದು. 4ನೇ ಬಸ್‌ ಬಂದರೆ ಅದು ನಿಲ್ದಾಣದ ಪ್ರವೇಶ ದ್ವಾರದ ಬಳಿಯ ರಸ್ತೆಯಲ್ಲಿಯೇ ನಿಲ್ಲಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಈ ಎಲ್ಲ ಕಾರಣಕ್ಕೆ ಹಾಲಿ ಇರುವ ಗ್ರಾಮಾಂತರ ಬಸ್‌ ನಿಲ್ದಾಣವನ್ನು ಬನ್ನಿಮಂಟಪ ಬಳಿಯ ಕೆಎಸ್‌ಆರ್‌ಟಿಸಿಗೆ ಸೇರಿದ 56 ಎಕರೆ ಜಾಗಕ್ಕೆ ವರ್ಗಾವಣೆ ಮಾಡಬೇಕೆಂಬ ಒತ್ತಾಯ ನಾಗರಿಕರಿಂದ ಕೇಳಿಬಂದಿದೆ.

ಇನ್ನು ಬನ್ನಿ ಮಂಟಪ ಬಳಿಯ ಕೆಎಸ್‌ಆರ್‌ಟಿಸಿ ಜಾಗದಲ್ಲಿಸದ್ಯ ಇರುವ ನಾಲ್ಕು ಡಿಪೊ, ವರ್ಕ್‌ಶಾಪ್‌ ಹಿಂದಕ್ಕೆ ಸ್ಥಳಾಂತರಿಸಿ ರಸ್ತೆ ಬಳಿಯ ಮುಂಭಾಗದ ಜಾಗವನ್ನು ನಿಲ್ದಾಣದ ಬಳಕೆಗೆ ಉಪಯೋಗಿಸಬೇಕು. ನಗರ ಹಾಗೂ ಕೇಂದ್ರೀಯ ಬಸ್‌ ನಿಲ್ದಾಣಗಧಿಳನ್ನು ಒಂದೇ ಕಡೆ ಮಾಡಬೇಕು ಎಂಬುದು ಸಾರ್ವಜನಿಕರ ಬೇಡಿಕೆ ಆಗಿದೆ.

ಈಗಾಗಲೇ ನಗರಕ್ಕೂ ಪರ್ಯಾಯ ನಿಲ್ದಾಣ
ನಗರ ಬಸ್‌ ನಿಲ್ದಾಣಕ್ಕಾಗಿ ಸದ್ಯ ಬಳಕೆ ಮಾಡುತ್ತಿರುವ ಖಾಸಗಿ ಜಾಗಕ್ಕೆ ವರ್ಷಕ್ಕೆ ಅಂದಾಜು 60,000 ರೂ. ಪಾವತಿಸಲಾಗುತ್ತಿದೆ. ನಗರ ಪ್ರದೇಶಕ್ಕೆ ಸಾರಿಗೆ ಸೇವೆ ಒದಗಿಸಲು ಈ ಜಾಗವೂ ಸಾಕಾಗುತ್ತಿಲ್ಲ. ಒಂದು ವೇಳೆ ಕೇಂದ್ರೀಯ ಬಸ್‌ ನಿಲ್ದಾಣ ಬನ್ನಿಮಂಟಪ ಡಿಪೊ ಜಾಗಕ್ಕೆ ವರ್ಗಾಯಿಸಿದರೆ ಆ ಜಾಗದಲ್ಲಿ ನಗರ ಬಸ್‌ ನಿಲ್ದಾಣವನ್ನು ಆರಂಭಿಸಬೇಕು ಎಂಬ ಸಲಹೆಯೂ ಕೇಳಿಬಂದಿದೆ.

ಸದ್ಯ ಜನರ ಅಭಿಪ್ರಾಯ ಆಲಿಸಿ ಅದನ್ನು ಸರಕಾರದ ಗಮನಕ್ಕೆ ತರುವುದು ನಮ್ಮ ಕರ್ತವ್ಯ. ಇದೊಂದು ಉಪಯುಕ್ತ ಸಲಹೆಯೂ ಆಗಿರುವುದರಿಂದ ಕೂಡಲೇ ಈ ವಿಷಯಕ್ಕೆ ಸಂಬಂಧಿಸಿದ ಯೋಜನೆಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸುತ್ತೇವೆ ಎಂದು
ಶ್ರೀನಿವಾಸ್‌, ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಅವರು ತಿಳಿಸಿದ್ದಾರೆ.

Leave A Reply

Your email address will not be published.