Kambala buffaloes: ಕಂಬಳ ಓಟಕ್ಕೆ ಮೊದಲು ಕೋಣಗಳು ಸ್ವಲ್ಪ ದಿನ ಬ್ಯಾಚುಲರ್ಸ್ ಆಗಿರಬೇಕಾ ? ಇದು ಕೋಣಗಳ ಪರ್ಸನಲ್ ಮ್ಯಾಟರ್ !

Bengaluru kambala news dakshina Kannada news intresting news about Kambala buffaloes

Kambala buffaloes: ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳ ಬೆಂಗಳೂರಿನಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಈ ಸಲ ಲಕ್ಷಾಂತರ ಮಂದಿ ಕರಾವಳಿಯ ಇದೀಗ 150 ಜೊತೆ, ಅಂದ್ರೆ 300 ಕೋಣಗಳು ತಮ್ಮ ಓಟದ ಕಲೆಯನ್ನು ಪ್ರದರ್ಶನಕ್ಕೆ ಇಳಿಸಲು ತಯಾರಾಗಿ ನಿಂತಿವೆ. ಈ ಸಂದರ್ಭ, ಕಂಬಳ ಮತ್ತು ಕೋಣಗಳ(Kambala buffaloes) ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ನಿಮ್ಮ ಜತೆ ಹಂಚಿಕೊಳ್ಳುತ್ತಿದ್ದೇವೆ. ಬನ್ನಿ, ಒಂದು ಆಸಕ್ತಿದಾಯಕ ವೀಕ್ಷಣೆ ನಿಮ್ಮದಾಗಲಿ.

ಕೋಣಗಳು ದೈಹಿಕವಾಗಿ ಸಾಕಷ್ಟು ಬಲಶಾಲಿಯಾದ ಪ್ರಾಣಿಗಳು ಅಂತ ಎಲ್ರಿಗೂ ಗೊತ್ತು. ಬಡಪೆಟ್ಟಿಗೆ ಯಾವುದಕ್ಕೂ ಜಗ್ಗದ ಬಲಿಷ್ಠ ದೇಹಿಗಳು ಅವು. ಅಂತೆಯೇ ಸೆಕ್ಷುಯಲಿ ಕೂಡ ಕೋಣಗಳು ಅಪರಿಮಿತ ತಾಕತ್ತನ್ನು ಹೊಂದಿರುತ್ತವೆ. ಚೆನ್ನಾಗಿ ಬಾಡಿ ಬೆಳೆಸಿ, ಓಡಿ- ಓಡಾಡಿ ಮೈ ದಣಿಸಿಕೊಂಡ ಕೋಣಗಳು ಎಮ್ಮೆಗಳಿಗಾಗಿ ಬಾಯಿ-ಕಿವಿ ಬಿಟ್ಟು ಕಾಯುತ್ತಿರುತ್ತವೆ. ಸಂಗಾತಿಯ ಕಡೆಗೆ ಸದಾ ಕಣ್ಣು-ಹೊರಳೆ ತೆರೆದಿಟ್ಟುಕೊಂಡು ಕಾಯುತ್ತಿರುತ್ತೆ. ಸಾಮಾನ್ಯವಾಗಿ ಕಟ್ಟಿ ಹಾಕಿದ ಕೋಣಗಳು ಹೆಚ್ಚಿನ ಸಮಯದಲ್ಲಿ ಬ್ಯಾಚುಲರ್ ಗಳೇ. ಆದರೆ ಒಮ್ಮೊಮ್ಮೆ ಕೋಣದ ಧಣಿಗಳಿಗೆ ಒಳ್ಳೆಯ ಮೂಡು ಬಂದು, ” ಇಂದಂಬೆ, ನೆನ್ ಆ ಎರ್ಮೆದೊಟ್ಟುಗ್ ಬುಡ್ಲ೦ಬೆ ” ಅಂತ ಸಹಾಯಕರಿಗೆ ಆಜ್ಞಾಪಿಸಿದರೋ, ಸಹಾಯಕರು ತಕ್ಷಣ ಕೋಣಗಳನ್ನು ಎಮ್ಮೆಗಳ ಜತೆ ಬಿಟ್ಟು ಕಿರುನಗೆ ಬೀರಿ ಬೈರಾಸು ಸೊಂಟಕ್ಕೆ ಬಿಗಿದುಕೊಂಡು ಮನೆ ಕಡೆ ನಡೀತಾರೆ. ಕೋಣಗಳಿಗೆ ಅಂದು ಹಬ್ಬ. ಅಂದು ಅವು ಯಾವುದೇ ಕಟ್ಟುಪಾಡು ಇರದ ಸ್ವಚ್ಛಂದ ಜೀವಿಗಳು. ಆಕ್ರೋಶಗೊಂಡು ಹುಯಿಲಿಡುತ್ತಿದ್ದ ದೇಹಕ್ಕೆ ಎಮ್ಮೆಯ ಸಾಂಗತ್ಯ ಮುದ ಹಾಗೆ ನೀಡುತ್ತದೆ.

ಆದರೆ, ಕಂಬಳದ ದಿನ ಹತ್ತಿರ ಬಂದಂತೆಲ್ಲ ಕೋಣಗಳಿಗೆ(Kambala buffaloes) ಹಾಕುವ ಕಟ್ಟುಪಾಡುಗಳು ಜಾಸ್ತಿಯಾಗುತ್ತವೆ. ಎಮ್ಮೆಗಳ ಜತೆ ಬಿಡುವುದು ಬಿಡಿ, ಹಲವು ಬಾರಿ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಎಮ್ಮೆಗಳನ್ನು ಎತ್ತಂಗಡಿ ಮಾಡಿ ದೂರಕ್ಕೆ ಸಾಗಿಸುವುದುಂಟು. ಎಮ್ಮೆಗಳನ್ನು ನೋಡಿ ಮನಸ್ಸು ಮುದುಡಿಸಿಕೊಳ್ಳದಿರಲಿ ಮತ್ತು ಕೋಣಗಳ ಮನಸ್ಸು ಚಂಚಲವಾಗದೆ ಇರಲೆಂಬುದಷ್ಟೇ ಎಂಬುದಷ್ಟೇ ಇದರ ಉದ್ದೇಶ.

ಕೆಲವು ಕೋಣಗಳಿಗೆ ಕಂಬಳದಲ್ಲಿ ಭಾಗವಹಿಸಲು ಇನ್ನಿಲ್ಲದ ಉತ್ಸಾಹ. ಇಂತಹಾ ಉತ್ಸಾಹೀ ಕೋಣಗಳು ಹಗ್ಗ ಜಗ್ಗಿಕೊಂಡು ಮುಂದಕ್ಕೆ ನಮ್ಮನ್ನು ಎಳಕೊಂಡು ಹೋಗುತ್ತವೆ ಎನ್ನುತ್ತಾರೆ, ಹಳೆಯ ಪಂಟರ್ ಓಟಗಾರ ಇಜಿಮಾನಿನ ರಾಘವ ಗೌಡ್ರು. ಹೀಗೆ ತಮ್ಮ 12 ವರ್ಷದ ಓಟದ ಅನುಭವದಿಂದ ಕೋಣಗಳ ಬಗೆಗಿನ ಸುಮಾರು ಇಂಟರೆಸ್ಟಿಂಗ್ ವಿಷಯಗಳನ್ನು ಗೌಡ್ರು ಹೆಕ್ಕಿ ಕೊಟ್ಟಿದ್ದಾರೆ. ಅವರು ಓಟಗಾರರು ಮಾತ್ರವಲ್ಲದೆ ಕೋಣಗಳನ್ನು ಸಾಕಿದವರು, ಮಾಲೀಶು ಮಾಡಿದವರು. ಎಂತಹುದೇ ಅಗ್ರೆಸ್ಸಿವ್ ಕೋಣವನ್ನೂ ಸುಲಭವಾಗಿ ಪಳಗಿಸಬಲ್ಲ, ಅವುಗಳ ಬಿಹೇವಿಯರ್ ಅನ್ನು ಸರಿಯಾಗಿ ಗ್ರಹಿಸಬಲ್ಲ ಕುಶಾಗ್ರಮತಿ !

” ಕೆಲವು ಸಲ ಬೇಡ, ಬಿಟ್ಟುಬಿಡಿ ಅಂತ ಕೋಣಗಳು ಬೇಡಿಕೊಳ್ಳುವುದೂ ಇದೆ. ಅವಕ್ಕೆ ಬಾಯಿ ಬರಲ್ಲ. ಅಥವಾ ಅವು ಆಡುವ ಮಾತು ನಮಗರ್ಥವಾಗಲ್ಲ. ಹಾಗಾಗಿ ಅವು ತಮ್ಮ ಮುಂದಿನ ಎರಡೂ ಕಾಲು ಮಡಚಿ ಕರೆಯಲ್ಲಿಯೇ ಚಿಕ್ಕ ಮಕ್ಕಳಂತೆ ಮುಂಡು ಬೀಳುತ್ತವೆ. ಒಂದೊಮ್ಮೆ ಓಟಕ್ಕೆ ಮನಸ್ಸು ಮಾಡಿದರೆ, ಅವು ಏಕ ಮನಸ್ಸಿನಿಂದ ಓಡುತ್ತವೆ. ಅವನ್ನು ಆಗ ತಡೆಯುವವರಿಲ್ಲ.” ಇದು ರಾಘವ ಗೌಡರ ಕೋಣಗಳ ಬಗೆಗಿನ ಅನುಭವದ ಮಾತು.

ಕೋಣಗಳನ್ನು ಕರೆಯಲ್ಲಿ ಬಿಡುವಾಗ ಕೂಡ ಕೆಲವು ಟೆಕ್ನಿಕ್ ಗಳನ್ನು ಕಂಬಳದ ಪಂಡಿತರು ಬಳಸುತ್ತಾರೆ. ಮೊದಲಿಗೆ, ಜೋಡಿ ಮಾಡಿದ ಎರಡೂ ಕೋಣಗಳು ಒಂದೇ ರೀತಿ ಓಡುವುದಿಲ್ಲ. ಹೇಗೆ ಇಬ್ಬರು ವ್ಯಕ್ತಿಗಳ ದೇಹಪ್ರಕೃತಿ ಮತ್ತು ಓಟದ ವಿಧಾನ, ಬೇರೆ ಬೇರೆಯೋ ಹಾಗೆಯೆ ಕೋಣಗಳಲ್ಲೂ ಕೂಡ ಬೇರೆ ಬೇರೆಯಾಗಿರುತ್ತದೆ. ಕೆಲವು ಕೋಣಗಳು ಒಳ್ಳೆಯ ಸ್ಟಾರ್ಟ್ ತೆಗೆದುಕೊಂಡರೆ, ಮತ್ತೆ ಕೆಲವು ಕೋಣಗಳು ಸ್ಲೋ ಸ್ಟಾರ್ಟಿಂಗ್ ತೆಗೆದುಕೊಂಡರೂ ಆ ನಂತರ ವೇಗ ಪಡೆದುಕೊಳ್ಳುತ್ತವೆ. ಕೆಲವು ಕೋಣಗಳು ಏಕ ರೀತಿಯ ವೇಗದಿಂದ ಓಡುತ್ತವೆ. ಮತ್ತೆ ಕೆಲವು ಕ್ಷಣ ಕ್ಷಣಕ್ಕೂ ವೇಗ ಹೆಚ್ಚಿಸಿಕೊಳ್ಳುತ್ತವೆ.

ಒಂದೊಮ್ಮೆ ಒಟ್ಟೊಟ್ಟಿಗೆ ಈ ಕಡೆ ಎರಡು ಕೋಣ ಮತ್ತು ಆ ಕಡೆ ಎರಡು ಕೋಣಗಳನ್ನೂ ಜೋಡಿ ಕರೆಯಲ್ಲಿ ಬಿಡುತ್ತಾರೆ ಅಂದುಕೊಳ್ಳಿ. ಆಗ, ಮಧ್ಯದ ಕಟ್ಟೆ ಇರುತ್ತದಲ್ಲವಾ, ಅದರ ಪಕ್ಕ ಚೆನ್ನಾಗಿ ಓಡುವ ಚುರುಕಿನ ಕೋಣಗಳನ್ನು ಕಟ್ಟುತ್ತಾರೆ. ಇದು ಯಾಕೆಂದರೆ ಚೆನ್ನಾಗಿ ಓಡುವ ಕೋಣಗಳು ಪಕ್ಕದ ಕರೆಯಲ್ಲಿ ಓಡುವ ಕೋಣಗಳ ವೇಗವನ್ನು ಗಮನಿಸಿಕೊಂಡು ಅದಕ್ಕೆ ತಕ್ಕಂತೆ ಸ್ಪಧೆಯಲ್ಲಿ ಓಡಿ ಲೀಡ್ ಮಾಡುತ್ತದೆ. ತಮ್ಮ ಪ್ರತಿಸ್ಪರ್ಧಿಯನ್ನು ಸೋಲಿಸಲೇಬೇಕೆಂದು ಅದರ ಮೇಲೊಂದು ಸಣ್ಣ ಗಮನವನ್ನಿಟ್ಟುಕೊಂಡು ಓಡಲು ಪ್ರಯತ್ನ ಪಡುತ್ತದೆ. ಹಾಗೆ ಈ ಕರೆಯ ಪಕ್ಕದ ಕೋಣಗಳು ಓಡಿದಾಗ, ಅದರ ಜತೆ ಕೋಣಗಳಿಗೂ ಜೋಶ್ ಬರುತ್ತದೆ.

ಕೋಣದ ಹಿಂದೆ ಓಡುವ ಕಂಬಳದ ಜಾಕಿಯದೂ ಒಂದು ವೈಬ್ರಂಟ್ ಬದುಕು. ಇವತ್ತಿಗೆ ಕಂಬಳದ ಜಾಕಿ ಜಗತ್ತಿನ ವೇಗದ ಓಟಗಾರ. ಕೋಣಗಳ ಹಿಂದೆ ಹಗ್ಗ ಹಿಡಿದುಕೊಂಡು ಓಡುವ ಕಂಬಳದ ಜಾಕಿಯು, ಜಗತ್ತಿನ ನಂಬರ್ ಒನ್ ಓಟಗಾರ ಉಸೇನ್ ಬೋಲ್ಟಿಗಿಂತಲೂ ವೇಗವಾಗಿ ಓಡುತ್ತಾನೆ. ಕಂಬಳದ ಜಾಕಿಯು ಜೋಡಿ ಓಟದ ಕೋಣಗಳ ಪೈಕಿ ಯಾವುದಾದರೂ ಒಂದು ಕೋಣದ ಹಿಂದೆ ನಿಂತಿರುತ್ತಾನೆ. ವೇಗ ಮತ್ತು ಆಯಾ ಕೋಣದ ವ್ಯಕ್ತಿತ್ವವನ್ನು ಅನುಸರಿಸಿ ಯಾವುದಾದರೂ ನಿಧಾನವಾಗಿ ಓಡುವ ಕೋಣದ ಹಿಂದೆ ಬೆತ್ತ ಝಳಪಿಸುತ್ತಾ ಓಡುತ್ತಾನೆ.

ಕೋಣಗಳು ಓಡಿ ಗುರಿ ತಲುಪಿದ ಮೇಲೆ ಕೊನೆಯಲ್ಲಿ ಸ್ವಲ್ಪ ಎತ್ತರದಲ್ಲಿ ಮರಳು ಹರಡಿದ ಅಂಗಳ ಮಾಡಿರುತ್ತಾರೆ. ಅದಕ್ಕೆ ಮ0ಜೊಟ್ಟಿ ಎಂದು ಹೆಸರು. ಅಲ್ಲಲ್ಲಿ ಮರಳು ಹಾಸಿರುವುದು ಮತ್ತು ಆ ಪ್ರದೇಶ ಕರೆಗಿಂತ ಎತ್ತರದಲ್ಲಿರುವುದರಿಂದ ಸಹಜವಾಗಿ ವೇಗವಾಗಿ ಓಡಿ ಬರುವ ಕೋಣಗಳು ತಮ್ಮ್ಮ ಓಟದ ಕೊನೆಯಲ್ಲಿ ವೇಗ ತಗ್ಗಿಸಿಕೊಳ್ಳಲು ಸಹಕಾರಿ. ಈ ಮಂಜೊಟ್ಟಿಯಲ್ಲಿಯೇ ಇಬ್ಬರು ಮೂವರು ಸಹಾಯಕರು ಬಂದು ಕೋಣಗಳನ್ನು ಹಿಡಿಯುತ್ತಾರೆ.

ಓಟದ ನಂತ್ರ ಅಥ್ವಾ ಗೆಲುವಿನ ನಂತರ ಕೋಣಗಳಿಗೂ ಬುಟ್ಟಿ ತುಂಬಾ ಕ್ಯಾರೆಟ್ ಮತ್ತು ಕಲ್ಲಂಗಡಿ ಹಣ್ಣುಗಳನ್ನು ನೀಡೋ ಧಾರಾಳಿ ಧನಿಗಳೂ ಇದ್ದಾರೆ. ಕೆಲವರಂತೂ ಎಳನೀರು ಪಾನಕ ಕುಡಿಸ್ಥಾರೆ ಆ ಮೂಲಕ ಮೆಡಲ್ ಗೆಲ್ಲೋ ಆಟಗಾರನ ರೀತಿಯಲ್ಲಿಯೇ ಅವುಗಳಿಗೂ ಭರ್ಜರಿ ಟ್ರೀಟ್ಮೆಂಟ್ ನೀಡಲಾಗುತ್ತೆ.

ಒಂದು ಓಟ ಆದ ಮೇಲೆ, ತನ್ನ ಸಹಾಯಕರು ಮತ್ತು ಧನಿಗಳು, ಅವುಗಳ ಹತ್ತಿರ ಬಂದು ಫೋಟೋ ತೆಗೆದುಕೊಳ್ಳುವಾಗ ಮತ್ತು ಪರಸ್ಪರ ಖುಷಿಯಿಂದ ಕಂಗ್ರಾಜುಲೇಷನ್ ಮಾಡುವಾಗ ಕೋಣಗಳಿಗೆ ತಾನು ಗೆದ್ದಿರುವುದು ಖಚಿತವಾಗುತ್ತದೆ. ತನ್ನ ಒಡೆಯನಿಗಾಗಿ ಓಡಿ ಪದಕ ತಂದುಕೊಟ್ಟ ಕೋಣಗಳು ಹೆಮ್ಮೆಯಿಂದ ಬೀಗ್ತವೆ. ಒಂದ್ವೆಳೆ ಕೋಣಗಳು ಓಟದಲ್ಲಿ ಸೋತು ಹೋದ್ರೆ, ತಮ್ಮ ಒಡೆಯರ ಹಾಗೆ ಅವುಗಳು ಕೂಡ ದುಃಖಿಸುತ್ವೆ. ಒಟ್ಟಾರೆ, ಮನುಷ್ಯನ ಜತೆ ಮತ್ತು ಕರಾವಳಿಯ ಸಂಸ್ಕೃತಿಯ ಜತೆ ಕೋಣಗಳದು ಅವಿನಾಭಾವ ಸಂಬಂಧ. ಪ್ರಾಣಿಗಳನ್ನು ಹತ್ತಿರದಿಂದ ನೋಡಿ, ಒಂದಿಷ್ಟು ಪ್ರೀತಿ ಅಕ್ಕರೆ ತೋರಿಸಿ ಅವು ಯಾವತ್ತೂ ನಿಮಗೆ ಋಣಿಯಾಗಿರ್ತವೆ; ಅವುಗಳಲ್ಲೂ ಮಾನವೀಯ ಗುಣಗಳಿವೆ ಎನ್ನುತ್ತಾ ಈ ವಿಡಿಯೋವನ್ನು ಇಲ್ಲಿಗೆ ಮುಗಿಸ್ತಾ ಇದ್ದೇವೆ. ಮತ್ತೆ ಬರ್ತಿವಿ, ಕಂಬಳದ ಪಾರ್ಟ್ 2 ಎಪಿಸೋಡ್ ನೊಂದಿಗೆ.

ಇದನ್ನೂ ಓದಿ:Halal Ban: ದೇಶಾದ್ಯಂತ ಹಲಾಲ್ ಉತ್ಪನ್ನಗಳ ನಿಷೇದ ವಿಚಾರ – ಅಮಿತ್ ಶಾ ಮಹತ್ವದ ಹೇಳಿಕೆ !!

Leave A Reply

Your email address will not be published.