Sowjanya News: ಸೌಜನ್ಯಾ- 11 ನೇ ವರ್ಷದ ಪುಣ್ಯಸ್ಮರಣೆ: ಛಲಗಾತಿ ಅಮ್ಮ ಕುಸುಮಾವತಿಗೂ ನಿರ್ಭಯಾ ತಾಯಿಗೂ ಹೋಲಿಕೆ ಮಾಡುತ್ತಿರೋ ಜನ !
People are comparing Sowjanya's mother Kusumavati and Nirbhaya's mother
ಸೌಜನ್ಯ ಅತ್ಯಾಚಾರದಲ್ಲಿ ನಿರ್ಭಯ ತಾಯಿ ಆಶಾದೇವಿ ಎಂಟ್ರಿ ಆಗಿರುವ ವಿಷಯ ಈಗಾಗಲೇ ನಿಮಗೆ ತಿಳಿದಿದೆ. ದೆಹಲಿಯಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಪಿಂಕಿ ಸಿಂಗ್ ಅಲಿಯಾಸ್ ನಿರ್ಭಯಾ ಎಂಬಾಕೆಯನ್ನು ತನ್ನ ಗೆಳೆಯ ಇರುವಾಗಲೇ ಚಲಿಸುವ ಬಸ್ಸಿನಲ್ಲಿ ಅತ್ಯಾಚಾರ ಮಾಡಿ ವಿಕೃತವಾಗಿ ಹಿಂಸಿಸಲಾಗಿತ್ತು. ನಂತರ, ಪಾರ್ಸೆಲ್ ಕಟ್ಟಿಸಿಕೊಂಡು ಬಂದ ಊಟ ಮಾಡಿದ ತರುವಾಯ ಉಂಡ ಎಲೆ ಮುದ್ದೆ ಮಾಡಿ ರಸ್ತೆಗೆ ಬಿಸಾಕುವ ಹಾಗೆ ಆಕೆಯನ್ನು ನಿರ್ಲಕ್ಷವಾಗಿ ಎಸೆದು ಹೋಗಲಾಗಿತ್ತು. ಅದರ ಮಧ್ಯೆ ಆಕೆಯ ಮರ್ಮಾಂಗಕ್ಕೆ ಕಬ್ಬಿಣದ ರಾಡ್ ತೂರಿಸಲಾಗಿತ್ತು. ಆಕೆಯ ಮೇಲೆ ನಡೆದ ಅಂದಿನ ಕೃತ್ಯದಲ್ಲಿ ಆಕೆಯ ಕರುಳು ದೇಹದಿಂದ 90 % ಭಾಗ ಹೊರಕ್ಕೆ ಬಂದು ಬಿಟ್ಟಿತ್ತು. ಇದೆಲ್ಲಾ ಘಟನೆ ಚಲಿಸುವ ಬಸ್ಸಿನಲ್ಲಿ ನಡೆದುಹೋಗಿತ್ತು. ಆ ಸಂದರ್ಭದಲ್ಲಿ ಬಸ್ಸು ದೆಹಲಿಯ ತುಂಬಾ ತಿರುಗುತ್ತಲೇ ಇತ್ತು. ಎಲ್ಲರೂ ತಮ್ಮ ಕೆಲಸ ಮುಗಿಸಿದ ಮೇಲೆ ಆಕೆಯನ್ನು ಮತ್ತು ಆಕೆಯ ಜತೆ ಇದ್ದ ಗೆಳೆಯನನ್ನು ಕಸ ಬಿಸಾಡಿದ ಥರ ರಸ್ತೆಯಲ್ಲಿ ಎಸೆದು ಹೋಗಲಾಗಿತ್ತು.
ನಂತರ ಜೀವನ್ಮರಣಗಳ ಹೋರಾಟಗಳ ನಂತರ ಆಕೆ ಮೃತಲಾಗಿದ್ದಳು. ಅಷ್ಟೆಲ್ಲಾ ಆಘಾತಗಳು ತನ್ನ ಮೇಲೆ ಆದರೂ, ಆ ಹುಡುಗಿ ಸಾವನ್ನು ಸುಲಭವಾಗಿ ಒಪ್ಪಿ ಕೊಳ್ಳಲೇ ಇಲ್ಲ. ಸಾವಿನ ಜತೆ ನಿರಂತರ ಹೋರಾಡಿ, ಕೊನೆಗೆ 13 ದಿನಗಳ ನಂತರ ಸಿಂಗಾಪುರ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ್ದಳು.
ಅವತ್ತು ತನ್ನ ಮಗಳ ಸಾವಿಗೆ ಪ್ರತೀಕಾರದ ಸೇಡನ್ನು ತೀರಿಸಿಕೊಳ್ಳಲು ಹೊರಟಿದ್ದೇ ಆಕೆಯ ಅಮ್ಮ. ಹಾಗೆ ಮಗಳ ಸಾವಿನ ಸೇಡಿಗಾಗಿ ವರ್ಷಾನುಗಟ್ಟಲೆ ಬಡಿದಾಡಿದ ಹೆಂಗಸು ಇದೇ ಆಶಾ ದೇವಿ ! ಯಾವತ್ತಿಗೂ ಹೋರಾಟದಲ್ಲಿ ಮನಸ್ಸು ವಿಚಲಿತಗೊಳ್ಳದೆ, ಕೊನೆಯ ತನಕ ಕಠೋರವಾಗಿ ವರ್ತಿಸಿ ಬೀದಿಯಲ್ಲಿ ನಿಂತು ಬಡಿದಾಡಿ ತನ್ನ ಮಗಳಿಗೆ ಹಿಂಸೆ ನೀಡಿ ಕೊಂದ 4 ಪಾಪಿಗಳನ್ನು ಗಲ್ಲಿಗೆ ನೇತು ಹಾಕಿ, ಅವರ ಕೊರಳ ಕೊಂಡಿ ಕಳಚಿಕೊಂಡು ಬೀಳುವ ತನಕ ವಿಶ್ರಮಿಸದ ಹೆಂಗಸು ನಿರ್ಭಯಾಳ ತಾಯಿ ಆಶಾದೇವಿ. ಇದೀಗ ಕರಾವಳಿಯ ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಸೌಜನ್ಯಳ ಅಮ್ಮ ಕುಸುಮಾವತಿಯನ್ನು ಈ ನಿರ್ಭಯಾ ತಾಯಿಯನ್ನು ಹೋಲಿಸಲಾಗುತ್ತಿದೆ.
ನಿರ್ಭಯಾ ತಾಯಿಗೂ ಸೌಜನ್ಯಾ ತಾಯಿಗೂ ಇದೆ ಭಾರೀ ಹೋಲಿಕೆ:
ಹೌದು, ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡು, ಭತ್ತ ಬೆಳೆಯುತ್ತ, ಅಡಿಕೆ ಹೆಕ್ಕಿಕೊಂಡು ಇರುತ್ತಿದ್ದ ಒಕ್ಕಲಿಗ ಗೌಡರ ಮನೆತನದ ಈ ಕುಸುಮಾವತಿಗೂ ನಿರ್ಭಯಾ ತಾಯಿ ಆಶಾದೇವಿಗೂ ಹಲವು ಸಾಮ್ಯತೆಗಳಿವೆ. ಅದರ ಬಗ್ಗೆ ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
ಈ ಇಬ್ಬರೂ ಹೋರಾಟಗಾರ ಅಮ್ಮಂದಿರ ಬಗ್ಗೆ ಮಾತಾಡುವ ಮೊದಲು ಸೌಜನ್ಯಾ ಮತ್ತು ನಿರ್ಭಯಾ ಮಧ್ಯೆ ಕೂಡಾ ತುಂಬಾ ಸಾಮ್ಯತೆಯಿವೆ. ನಿರ್ಭಯ ಅತ್ಯಾಚಾರ ಆದದ್ದು ಡಿಸೆಂಬರ್ 16 ರ 2012 ರಂದು. ಆಕೆ ಸತ್ತದ್ದು, 29 ಡಿಸೆಂಬರ್ 2012.
ಸೌಜನ್ಯ ಅತ್ಯಾಚಾರ ಮತ್ತು ಕೊಲೆಯಾದದ್ದು ಕೂಡಾ 2012 ರಂದು (9 ಅಕ್ಟೋಬರ್ ). ಒಂದೇ ವರ್ಷದಲ್ಲಿ ಈ ಎರಡೂ ಅತ್ಯಾಚಾರ – ಕೊಲೆಗಳೂ ನಡೆದಿವೆ. ನಿರ್ಭಯಾ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ, ಸಾಯುವಾಗ ಆಕೆಗೆ 23 ವರ್ಷ ವಯಸ್ಸು. ಸೌಜನ್ಯಾ ಅಪ್ರಾಪ್ತೆ , ಪ್ರಾಯ 17 ವರ್ಷ, ಆಕೆಗೆ ಕೂಡಾ ಮೆಡಿಕಲ್ ಓದಬೇಕೆನ್ನುವ ಆದಮ್ಯ ಕನಸಿತ್ತು. ಬಹುಶಃ ಪಾಪಿಗಳು ಬದುಕಲು ಬಿಟ್ಟಿದ್ದರೆ ಇವತ್ತಿಗೆ ಆಕೆ ಮೆಡಿಕಲ್ ಓದಿ ಅದ್ಯಾವುದೋ ಹಳ್ಳಿಯಲ್ಲಿ ಡಾಕ್ಟರಿಕೆ ಮಾಡಿಕೊಂಡಿರುತ್ತಿದ್ದಳು.
ಅಲ್ಲಿ ನಿರ್ಭಯಳ ಮರ್ಮಾಂಗಕ್ಕೆ ರಾಡ್ ಹಾಕಿದ್ದರೆ, ಇಲ್ಲಿ ಸೌಜನ್ಯಾ ಗುಪ್ತಾಂಗಕ್ಕೆ ಮರಳು ತುಂಬಲಾಗಿತ್ತು. ಎದೆಯ ಭಾಗ ಕಚ್ಚಲಾಗಿತ್ತು. ತೊಡೆಯ ಭಾಗಗಳಲ್ಲಿ ಪರಚು ಗಾಯಗಳಾಗಿದ್ದವು.
ಇನ್ನು, ನಿರ್ಭಯಾ ಹತ್ಯ ಆರೋಪಿಗಳಲ್ಲಿ ಒಟ್ಟು ಆರು ಜನ ಆರೋಪಿಗಳಿದ್ದು, ರಾಮ್ ಸಿಂಗ್ ಅನ್ನುವ ಒಬ್ಬ ಓರ್ವ ಮೂರೇ ತಿಂಗಳಲ್ಲಿ ವಿಚಾರಣೆಯ ಸಂದರ್ಭ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೊಬ್ಬ ಘಟನೆ ನಡೆದಾಗ ಅಪ್ರಾಪ್ತ ಬಾಲಕನಾಗಿದ್ದ, ಆತನನ್ನು ನಂತರ ಕೋರ್ಟಿನಲ್ಲಿ ಅಪ್ರಾಪ್ತ ಅನ್ನೋ ಕಾರಣಕ್ಕೆ ಬಿಡುಗಡೆ ಮಾಡಲಾಗಿತ್ತು. ಉಳಿದ ನಾಲ್ಕು ಜನರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು ಕೋರ್ಟು. ಆದರೆ ಮಧ್ಯೆ ಮಧ್ಯೆ ನಾನಾ ಕಾರಣಗಳಿಂದ ಅತ್ಯಾಚಾರದ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದರು. ಅಂದ್ರೆ ಗಲ್ಲು ಶಿಕ್ಷೆ ಪೋಸ್ಟ್ ಪೋನ್ ಆಗುತ್ತಲೇ ಇತ್ತು. ಆದ್ರೆ ನಿರ್ಭಯಾ ಅಮ್ಮ ಆಶಾ ದೇವಿ ಕಠೋರ ನಿಲುವು ತೆಗೆದುಕೊಂಡಿದ್ದರು. ಆಶಾ ದೇವಿ 8 ವರ್ಷಗಳ ಕಾಲ ಹೋರಾಟ ನಡೆಸಿ ತನ್ನ ಮಗಳ ಸಾವಿಗೆ ನ್ಯಾಯ ಒದಗಿಸಿದ್ದಾರೆ.
ಇತ್ತ ಸೌಜನ್ಯ ಅಮ್ಮ ಕುಸುಮಾವತಿಯವರದು ಕೂಡಾ ಹೇಳುತ್ತಿರುವುದು 4 ಆರೋಪಿಗಳ ಬಗ್ಗೆ. ಇಂದಿಗೆ ಸೌಜನ್ಯಾ ಸತ್ತು 11 ವರ್ಷಗಳಾಗುತ್ತದೆ. ಆದರೂ ಇವತ್ತಿಗೆ ಆರೋಪಿಗಳಿಗೆ ಶಿಕ್ಷೆಯಾಗುವುದು ಬಿಡಿ, ಇನ್ನೂ ಓರ್ವ ಆರೋಪಿ ಕೂಡಾ ಪೊಲೀಸರಿಗೆ ಸಿಕ್ಕಿಲ್ಲ. ಇದ್ದ ಒಬ್ಬ ನಿರಪರಾಧಿಯನ್ನು ಕೋರ್ಟು ಬಿಟ್ಟು ಕಳಿಸಿದೆ. ಆದ್ರೆ ಆಕೆಯ ಕುಟುಂಬ 4 ಮೇಲೆ ಪದೇ ಪದೇ ಆರೋಪ ಮಾಡುತ್ತಾ ಬರುತ್ತಿದೆ. ಇಲ್ಲಿ ಅಪರಾಧಿಗಳನ್ನು ಮೊದಲ ಕ್ಷಣದಿಂದಲೇ ರಕ್ಷಿಸುತ್ತ ಬರಲಾಯಿತು. ಅತಿ ಬುದ್ಧಿವಂತ, ಬಲಾಢ್ಯ ಭೂಮಾಲೀಕರು ಆರೋಪಿಗಳ ರಕ್ಷಣೆಗೆ ಇದ್ದಾರೆ ಅನ್ನೋದೂ ಕುಸುಮಾವತಿ ಕುಟುಂಬದ ಆರೋಪ. ಅದಕ್ಕೇ ತಕ್ಕಂತೆ ಕುಸುಮಾವತಿ ಅವರ ಹೋರಾಟಕ್ಕೆ ಪ್ರತಿ ಹಂತದಲ್ಲೂ ತಡೆ ಒಡ್ಡಲಾಗುತ್ತಿದೆ. ಅಪರಾಧಿಗಳನ್ನು ರಕ್ಷಿಸಲು ಎಲ್ಲಾ ಸಂಪನ್ಮೂಲಗಳನ್ನು ಬಳಸಲಾಗುತ್ತಿದೆ. ಕೋಟಿ ಗಟ್ಟಲೆ ಹಣ ಸುರಿಯಲಾಗುತ್ತಿದೆ. ಹಾಗಾಗಿ ಇದರ ಹಿಂದೆ ಬಲಾಢ್ಯರು ಇದ್ದಾರೆ ಎನ್ನುವುದು ಶತಸಿದ್ಧ. ಅದು ಯಾರು ಅನ್ನುವ ಬಗ್ಗೆ ಕೂಡಾ ಕರಾವಳಿ ಸೇರಿದಂತೆ ಯಾರಿಗೂ ಅನುಮಾನವಿಲ್ಲ. ಆದರೆ ಅವರಿಗೆ ನಿರ್ಭಯಾ ತಾಯಿ ಮುಂದೆ ನಿಂತು ತನ್ನ ಮಗಳ ಅತ್ಯಾಚಾರಿಗಳಿಗೆ ಶಿಕ್ಷೆ ಕೊಡಿಸಿದಂತೆ, ಇದೀಗ ಸೌಜನ್ಯಾ ತಾಯಿ ಕುಸುಮಾವತಿ ಇತರರ ಸಹಾಯ ಪಡೆದುಕೊಂಡು ಹೊರಟಿದ್ದಾರೆ.
ಹಳ್ಳಿಗೊಂದು ನ್ಯಾಯ, ದಿಲ್ಲಿಗೊಂದು ನ್ಯಾಯ:
ಆದರೆ ಅಲ್ಲಿ ನಿರ್ಭಯಾ ಪ್ರಕರಣದಲ್ಲಿ ಆರೋಪಿಗಳು ಸಾಮಾನ್ಯರಾಗಿದ್ದರು. ಅವರು ಬಸ್ ನಲ್ಲಿ ಕೆಲಸ ಮಾಡುವ ಡ್ರೈವರ್ ಕಂಡಕ್ಟರ್ ಮತ್ತು ಅವರ ಗೆಳೆಯರಾಗಿದ್ದರು. ಹಾಗಾಗಿ ಅಲ್ಲಿನ ಪೊಲೀಸರು ಮತ್ತು ಆಡಳಿತ ಆರೋಪಿಗಳನ್ನು ಸುಲಭವಾಗಿ ಹಿಡಿದು ಹಾಕಿ ಶಿಕ್ಷೆ ನೀಡಿತು. ನಿರ್ಭಯಾ ಹೋರಾಟಕ್ಕೆ ರಾಷ್ಟ್ರ ಅಂತರರಾಷ್ಟ್ರೀಯ ಸಹಾಯ ಹರಿದು ಬಂದಿದ್ದು ಅದು ದೊಡ್ಡದಾಗಿ ಎಲ್ಲರ ಗಮನ ಸೆಳೆಯಿತು. ಅಲ್ಲಿ ಹೋರಾಟ ಇದ್ದದ್ದು ಕೇವಲ ಕಾನೂನಿನ ಹೋರಾಟ. ಹಾಗಾಗಿ ನಿರ್ಭಯ ತಾಯಿ ಮುಂದೆ ನಿಂತು ಕಾನೂನು ಹೋರಾಟ ನಡೆಸಿ ತನ್ನ ಮಗಳ ಸಾವಿಗೆ ಪ್ರತೀಕಾರದ ಶಿಕ್ಷೆ ಕೊಡಿಸುವಲ್ಲಿ ಸಫಲರಾದರು.
ಆದರೆ ಸೌಜನ್ಯಳ ತಾಯಿ ಕುಸುಮಾವತಿ ಅವರದು ಇನ್ನೂ ಒಂದು ಹೆಜ್ಜೆ ಮುಂದಿಟ್ಟ ಹೋರಾಟ. ಇಲ್ಲಿ ಅವರಿಗೆ ಯಾವುದೇ ಪೊಲೀಸರು, ಸರ್ಕಾರಿ ಅಧಿಕಾರಿಗಳು, ವೈದ್ಯರು, ತನಿಖಾ ಸಂಸ್ಥೆಗಳು – ಊಹೂಂ ಎಲ್ಲರೂ ಸೌಜನ್ಯ ವಿರುದ್ಧವಾಗಿಯೇ ಕೆಲಸ ಮಾಡಿದರು. ಕುಸುಮಾವತಿಯವರಿಗೆ ಹೀಗೆ ಆಡಳಿತ ಯಂತ್ರದ ಜೊತೆಗೆ ಹೋರಾಟ ನಡೆಸುವ ಹೆಚ್ಚಿನ ಜವಾಬ್ದಾರಿ ಸಿಕ್ಕಿತು. ಇದರ ಜೊತೆಗೆ ಸರಕಾರವನ್ನು ಕೂಡ ಒಪ್ಪಿಸುವ, ಬೇಡಿಕೊಳ್ಳುವ ಕೆಲಸ ಅವರಿಗಿದೆ. ಅದು ಇವತ್ತಿಗೂ ಪ್ರತಿಭಟನೆಯ ರೂಪದಲ್ಲಿ ಮುಂದುವರೆಯುತ್ತಲೇ ಇದೆ. ಅಲ್ಲಲ್ಲಿ ಹೋಗಿ ಆಕೆಗೆ ಭಾಷಣ ಮಾಡಬೇಕಿದೆ. ಈಗಾಗಲೇ ಕುಸುಮಾವತಿಯವರು ತನ್ನ ಜೀವನದ ಸುಧೀರ್ಘ 11 ವರ್ಷಗಳನ್ನು ತನ್ನ ಮಗಳ ಸಾವಿಗೆ ನ್ಯಾಯ ಕೊಡಿಸಲು ಕಳೆದಿದ್ದಾರೆ. ಆಕೆಗೆ ಪ್ರತಿ ಹಂತದಲ್ಲೂ ಸಹಾಯ ಮಾಡಲು ಮಹೇಶ್ ಶೆಟ್ಟಿ ತಿಮರೋಡಿ ಎಂಬವರು ಅಣ್ಣನಾಗಿ, ಗುರುವಾಗಿ ಓರ್ವ ಯೋಧನಾಗಿ, ಕಾನೂನು ಸಲಹೆ ಚಾಚುವ ಸಂಸ್ಥೆಯಾಗಿ ಬೆಂಬಲಕ್ಕೆ ನಿಂತಿದ್ದಾರೆ.
ಇದೀಗ ಇಂದು ಅಕ್ಟೋಬರ್ 9 ನೆಯ ತಾರೀಖಿಗೆ ಸೌಜನ್ಯ ನಿರ್ಗಮಿಸಿ 11 ವರ್ಷ ಭರ್ತಿಯಾದವು. ಅವತ್ತಿನಿಂದ ಇವತ್ತಿನ ತನಕ ಆಕೆಯ ಹೆತ್ತಮ್ಮ ಹೋರಾಟದ ಮನೋಭಾವನೆ ಬಿಟ್ಟು ಕೊಟ್ಟಿಲ್ಲ. ನ್ಯಾಯಕೊಡಿ ಎಂದು ಆಕೆ ಸೆರಗೊಡ್ಡಿ ಬೇಡಿಕೊಳ್ಳುತ್ತಲೇ ಇದ್ದಾರೆ. ಕಣ್ಣೀರು ಹರಿಯುತ್ತಲೇ ಇದೆ. ಮಾತನಾಡದ ಮಂಜುನಾಥ ಸುಮ್ಮನೆ ಇದ್ದಾನೆ. ಆದರೂ ಈ ಕೃಷಿಕ ಮಹಿಳೆಯ ಉತ್ಸಾಹ ತಗ್ಗಿಲ್ಲ. ಇವತ್ತಲ್ಲ ನಾಳೆ ಮಗಳ ಸಾವಿಗೆ ನ್ಯಾಯ ಕೊಡಿಸಿಯೇ ಸಿದ್ಧ ಎಂದು ಆಕೆ ಹೋರಾಡುತ್ತಿದ್ದಾರೆ. ಹಾಗಾಗಿ, ಕುಸುಮಾವತಿಯವರನ್ನು ಕರ್ನಾಟಕದ ನಿರ್ಭಯಾ ತಾಯಿ ಎನ್ನಲು ಅಡ್ಡಿಯಿಲ್ಲ. ನಿರ್ಭಯಾಳಿಗೆ ನ್ಯಾಯ ಸಿಕ್ಕಂತೆ ಕರ್ನಾಟಕದ ನಿರ್ಭಯಾ ಸೌಜನ್ಯಾಗೂ ನ್ಯಾಯ ಸಿಗಲಿ ಅನ್ನೋದೇ ಆಶಯ.
ಇದನ್ನು ಓದಿ: DA Hike: ಶೇ. 4ರಷ್ಟು ಡಿಎ ಹೆಚ್ಚಳ ಮಾಡಿದರೆ ಸಂಬಳದಲ್ಲಿ ಎಷ್ಟು ಏರಿಕೆಯಾಗಬಹುದು ಗೊತ್ತಾ! ಪೂರ್ಣ ವಿವರ ಇಲ್ಲಿದೆ