AS Ramakrishna murder case: ಸುಳ್ಯ ಕೆವಿಜಿ ಪಾಲಿಟೆಕ್ನಿಕ್ ಪ್ರಾಚಾರ್ಯ ಎ.ಎಸ್.ರಾಮಕೃಷ್ಣ ಕೊಲೆ ಪ್ರಕರಣ : ಕೆ.ವಿ.ಜಿ. ಪುತ್ರ ಡಾ.ರೇಣುಕಾಪ್ರಸಾದ್ ಸಹಿತ 6 ಮಂದಿ ದೋಷಿಗಳು !

Dakshina Kannada news Sullia kvg polytechnic principal AS ramakrishna murder case matter

AS ramakrishna murder case: ಸುಳ್ಯ ಕೆವಿಜಿ ಪಾಲಿಟೆಕ್ನಿಕ್‌ ಕಾಲೇಜಿನ (KVG Polytechnic College) ಪ್ರಾಂಶುಪಾಲರಾಗಿದ್ದ ಎ.ಎಸ್‌.ರಾಮಕೃಷ್ಣ ಅವರ ಹತ್ಯೆ ಪ್ರಕರಣದ( AS ramakrishna murder case) ತೀರ್ಪನ್ನು ರಾಜ್ಯ ಹೈಕೋರ್ಟ್‌ ಪ್ರಕಟ ಮಾಡಿದೆ. ಈ ಪ್ರಕರಣದಲ್ಲಿ ಆರು ಮಂದಿಯನ್ನು ದೋಷಿ ಎಂದು ಹೈಕೋರ್ಟ್‌ ಬುಧವಾರ ಮಹತ್ವದ ತೀರ್ಪು ನೀಡಿದೆ.

ಪ್ರಕರಣದ ಏಳು ಮಂದಿ ಆರೋಪಿಗಳ ಪೈಕಿ ಡಾ.ರೇಣುಕಾಪ್ರಸಾದ್‌, ಮನೋಜ್‌ ರೈ, ಎಚ್‌.ಆರ್‌. ನಾಗೇಶ್‌, ವಾಮನ ಪೂಜಾರಿ, ಶರಣ್‌ ಪೂಜಾರಿ, ಶಂಕರ ಅವರನ್ನು ಮೃತ ಎ.ಎಸ್‌.ರಾಮಕೃಷ್ಣ ಅವರ ಹತ್ಯೆ ಮತ್ತು ಕೊಲೆಗೆ ಒಳಸಂಚು ರೂಪಿಸಿದ ಪ್ರಕರಣದಲ್ಲಿ ದೋಷಿಗಳೆಂದು ತೀರ್ಮಾನಿಸಿದೆ.

ಏಳನೇ ಆರೋಪಿಯಾದ ಎಚ್‌.ಯು ನಾಗೇಶ್‌ ಕುಮಾರ್‌ ಅವರನ್ನು ಖುಲಾಸೆಗೊಳಿಸಿ ಅಧೀನ ನ್ಯಾಯಾಲಯ ಆದೇಶ ನೀಡಿದೆ. ಶಿಕ್ಷೆ ಪ್ರಮಾಣವನ್ನು ಅ.5ರಂದು ನಿಗದಿಪಡಿಸುವುದಾಗಿ ನ್ಯಾಯಪೀಠ ಹೇಳಿದೆ.

2011ರ ಎಪ್ರಿಲ್‌ ತಿಂಗಳಿನಲ್ಲಿ ಎ.ಎಸ್‌.ರಾಮಕೃಷ್ಣ ಅವರನ್ನು ಸುಳ್ಯ ನಗರದ ರಸ್ತೆಯೊಂದರಲ್ಲಿ ಕೊಲೆ ಮಾಡಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಪುತ್ತೂರಿನ 5ನೇ ಹೆಚ್ಚುವರಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಈ ಪ್ರಕರಣದ ಪ್ರಮುಖ ಆರೋಪಿಯಾದ ರೇಣುಕಾ ಪ್ರಸಾದ್‌ ಸೇರಿ ಏಳು ಮಂದಿ ಆರೋಪಿಗಳನ್ನು 2016ರಲ್ಲಿ ಖುಲಾಸೆ ಗೊಳಿಸಿ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ರಾಜ್ಯ ಸರಕಾರ( ಪುತ್ತೂರು ಉಪವಿಭಾಗದ ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ) ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ.

ಪ್ರಕರಣದ ವಿವರ: ಕೆ ವಿ ಚಿದಾನಂದ ಮತ್ತು ರೇಣುಕಾ ಪ್ರಸಾದ್‌ ಅವರು ಕುರುಂಜಿ ವೆಂಕಟರಣ ಗೌಡ ಅವರ ಮಕ್ಕಳು. ಕೆವಿಜಿ ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಷನ್‌ ಸ್ಪ್ಲಿಂಟರ್‌ ಇನ್‌ಸ್ಟಿಟ್ಯೂಷನ್ಸ್‌ ನ ಸಂಸ್ಥಾಪಕರು ಕುರುಂಜಿ ವೆಂಕಟರಮಣ ಗೌಡ ಅವರು. ವಯಸ್ಸಾದ ಕಾರಣ ಅವರು ತಮ್ಮ ಶೈಕ್ಷಣಿಕ ಸಂಸ್ಥೆಗಳ ನಿರ್ವಹಣೆಯನ್ನು ತಮ್ಮ ಮಕ್ಕಳಿಗೆ ವಹಿಸಿದ್ದರು. ಇದರಲ್ಲಿ ಎ ಎಸ್‌ ರಾಮಕೃಷ್ಣ ಅವರು ಕೆವಿಜಿ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದರು.

ಆಸ್ತಿ ನಿರ್ವಹಣೆ, ಕೆವಿಜಿ ಮೆಡಿಕಲ್‌ ಕಾಲೇಜು ವ್ಯವಹಾರಗಳನ್ನು ರಾಮಕೃಷ್ಣ ಅವರೇ ವಹಿಸಿದ್ದಾರೆ ಎಂದು ಭಾವಿಸಿದ ರೇಣುಕಾ ಪ್ರಸಾದ್‌ ಅವರು ರಾಮಕೃಷ್ಣ ಅವರ ಕೊಲೆಗೆ ಸುಪಾರಿ ನೀಡಿದ್ದರು. ಎ.28, 2011 ಬೆಳಗ್ಗೆ ಸರಿ ಸುಮಾರು 7.45ರ ವೇಳೆ ಅಂಬೆತಡ್ಕ ಬಳಿಯ ಶ್ರೀಕೃಷ್ಣ ಆಯುರ್ವೇದಿಕ್‌ ಥೆರಪಿ ಕ್ಲಿನಿಕ್‌ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರಾಮಕೃಷ್ಣ ಅವರ ಮೇಲೆ ಆರೋಪಿಗಳು ದಾಳಿ ಮಾಡಿ ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ರೇಣುಕಾ ಪ್ರಸಾದ್‌ ಮೊದಲ ಆರೋಪಿಯಾಗಿದ್ದರು. ಒಟ್ಟು ಏಳು ಮಂದಿ ಆರೋಪಿಗಳಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು 2016 ಅಕ್ಟೋಬರ್‌ 21 ರಂದು ಅವರನ್ನೆಲ್ಲ ಖುಲಾಸೆ ಗೊಳಿಸಿತ್ತು.

ಆದರೆ 2017ರಲ್ಲಿ ಈ ಆದೇಶ ಪ್ರಶ್ನಿಸಿ ಕ್ರಿಮಿನಲ್‌ ಮೇಲ್ಮನವಿಯನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿತ್ತು. ಇದೀಗ ರೇಣುಕಾಪ್ರಸಾದ್‌ ಸೇರಿ ಇತರೆ ಐವರು ಆರೋಪಿಗಳು ದೋಷಿಗಳೆಂದು ಹೈಕೋರ್ಟ್‌ ತೀರ್ಪು ನೀಡಿದೆ.

ಇದನ್ನೂ ಓದಿ: Crime News: ಶಾಲೆಗೆಂದು ತೆರಳುತ್ತಿದ್ದ ವಿದ್ಯಾರ್ಥಿನಿಗೆ ಅಪ್ರಾಪ್ತ ಬಾಲಕನಿಂದ ಚೂರಿ ಇರಿದು ಹತ್ಯೆ!

Leave A Reply

Your email address will not be published.