BJP-JDS alliance: ಅಧಿಕೃತವಾಗಿ NDA ಮೈತ್ರಿ ಕೂಟ ಸೇರಿದ ಜೆಡಿಎಸ್
BJP-JDS alliance: ದೇಶ ರಾಜಕಾರಣದಲ್ಲಿ ಬಾರಿ ಕುತೂಹಲ ಕೆರಳಿಸಿದಂತಹ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ(BJP-JDS alliance) ವಿಚಾರ ಇದೀಗ ಕೊನೆಗೂ ತಾರ್ಕಿಕ ಅಂತ್ಯ ಕಂಡಿದೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸೋಲಿಸಲು ಬಿಜೆಪಿ ನೇತೃತ್ವದ ಎನ್‌ಡಿಎ (NDA) ಒಕ್ಕೂಟಕ್ಕೆ ಜೆಡಿಎಸ್ (JDS) ಅಧಿಕೃತವಾಗಿ ಸೇರ್ಪಡೆಯಾಗಿದೆ.
ಹೌದು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಇಂದು ದೆಹಲಿಯಲ್ಲಿ ಅಮಿತ್ ಶಾ ಜೊತೆ ಮಾಜಿ ಸಿಎಂ ಕುಮಾರಸ್ವಾಮಿ ಮಹತ್ವದ ಸಭೆ ನಡೆಸಿದ್ದಾರೆ. ಈ ವೇಳೆ ಮೈತ್ರಿ ಕುರಿತು ಮಹತ್ವದ ಮಾತುಕತೆ ನಡೆದಿದ್ದು, ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ವಿಚಾರವಾಗಿ ಗೃಹ ಸಚಿವ ಅಮಿತ್ ಶಾ (Amit Shah) ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ (Kumaraswamy) ಚರ್ಚೆ ನಡೆಸಿದ್ದಾರೆ. ಈ ಮೂಲಕ ಕರ್ನಾಟಕ ಜೆಡಿಎಸ್ ಪಕ್ಷವು ಅಧಿಕೃತವಾಗಿ ಬಿಜೆಪಿ ನೇತೃತ್ವದ NDA ಮೈತ್ರಿ ಕೂಟವನ್ನು ಸೇರಿದೆ.
ಇನ್ನು ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆಗೆ ಹೆಚ್.ಡಿ ಕುಮಾರಸ್ವಾಮಿ ಮಾತುಕತೆ ನಡೆಸಿದ್ದು ಜೆಡಿಎಸ್ 6 ಕ್ಷೇತ್ರಗಳನ್ನು ಕೇಳಿದ್ದು, ಬಿಜೆಪಿ 4 ಕ್ಷೇತ್ರಗಳನ್ನು ನೀಡಲು ಸಿದ್ಧವಿದೆ ಎನ್ನಲಾಗುತ್ತಿದೆ. ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರದ ಜೊತೆ ಮೈಸೂರಿನ ಮೇಲೂ ಜೆಡಿಎಸ್ ಕಣ್ಣಿಟ್ಟಿದೆ ಎಂದು ತಿಳಿದುಬಂದಿದೆ.
ಸಭೆಯ ನಂತರ ಮಾತನಾಡಿದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, “ಜೆಡಿಎಸ್ ಎನ್ಡಿಎಗೆ ಸೇರ್ಪಡೆಯಾಗಿದೆ. ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನ ಭೇಟಿಯಾದೆ. ನಾವು ಅವರನ್ನ ಎನ್ಡಿಎಗೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ” ಎಂದರು.
ಇನ್ನು “ಇದು NDA ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನವ ಭಾರತ, ಬಲವಾದ ಭಾರತದ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದಿರುವ ನಡ್ಡಾ, ಅವರು ಸಭೆಯ ಫೋಟೋವನ್ನ ಸಹ ಹಂಚಿಕೊಂಡಿದ್ದಾರೆ.
ಈ ಕುರಿತು ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ‘ ಅಧಿಕೃತವಾಗಿ ಮೈತ್ರಿ ಬಗ್ಗೆ ಕೆಲವು ವಿಷಯಗಳ ಬಗ್ಗೆ ಅಮಿತ್ ಶಾ ಜೊತೆ ಚರ್ಚೆ ಮಾಡಿದ್ದೇವೆ, ಮೈತ್ರಿ ಮಾಡಿಕೊಳ್ಳುವ ಬಗೆಗಿನ ಕೆಲವು ಫಾರ್ಮಾಲಿಟಿಸ್ ಬಗ್ಗೆ ಚರ್ಚಿಸಿದ್ದೇವೆ. ಈ ಬಗ್ಗೆ ಹಂತ ಹಂತವಾಗಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ, ಸದ್ಯ, ಮೊದಲ ಹಂತದ ಮಾತುಕತೆ ಆಗಿದೆ ಎಂದರು. ನಮಗೆ ಎಷ್ಟು ಸೀಟ್ ಕೊಡುತ್ತಾರೆ ಎಂಬುದು ಮುಖ್ಯ ಅಲ್ಲ, ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ, ಜೆಡಿಎಸ್ ಗೆಲ್ಲುವುದೇ ನಮ್ಮ ಗುರಿ. ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ . ಮೈತ್ರಿ ಸುಗಮವಾಗಿ ನಡೆಯಲಿದೆ ಎಂದರು.