Chandrayana-3: ಚಂದ್ರನ ಅಂಗಳದಲ್ಲಿ ಮತ್ತೊಂದು ಸಾಧನೆಗೆ ಇಸ್ರೋ ಸಜ್ಜು – ಅಚ್ಚರಿಯ ಸಾಹಸಕ್ಕೆ ವಿಜ್ಞಾನಿಗಳು ರೆಡಿ

Chandrayana-3: ಚಂದ್ರಯಾನ-3(Chandrayan-3) ಭಾರತದ ಹಿರಿಮೆಗಳಲ್ಲಿ ಕಲಶಪ್ರಾಯ ವಾದುದು. ಇಡೀ ಜಗತ್ತು ಭಾರತವನ್ನು ತಿರುಗಿ ನೋಡುವಂತೆ ಮಾಡಿದಂತ ಯೋಜನೆ ಇದು. ಬೆಂಕಿಯಂತೆ ಗಗನಕ್ಕೆ ಚಿಮ್ಮಿ ಚಂದ್ರನ ದಕ್ಷಿಣ ಅಂಗಳದಲ್ಲಿ ಇಳಿದ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಇಡೀ ವಿಶ್ವಕ್ಕೆ ಭಾರತದ ತಾಕತ್ತು ಏನೆಂದು ತೋರಿಸಿಕೊಟ್ಟವು. ಈ ಮೂಲಕ ಭಾರತದ ಹಿರಿಮೆಯನ್ನು ವಿಶ್ವಕ್ಕೆ ತೋರಿಸಿಕೊಟ್ಟ ಪ್ರಗ್ಯಾನ್ ರೋವರ್ ಕಳೆದ 15 ದಿನಗಳ ಹಿಂದೆ ಸೂರ್ಯನ ಕಿರಣಳಿಲ್ಲದೆ ನಿದ್ರೆಗೆ ಜಾರಿತ್ತು. ಆದರೀಗ ಮತ್ತೆ ಚಂದ್ರನಲ್ಲಿ ಬೆಳಕಾಗುವದರಿಂದ ತನ್ನ ಕಾರ್ಯವನ್ನು ನಿರ್ವಹಿಸಲು ಮೈ ಕೊಡವಿ ರೆಡಿಯಾಗಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳು ಎಲ್ಲಾ ರೀತಿಯ ತಯಾರಿ ಮಾಡಿ ರೆಡಿಯಾಗಿ ನಿಂತಿದ್ದಾರೆ.

 

ಚಂದ್ರಯಾನ-3 ಅಭೂತಪೂರ್ವ ಯಶಸ್ಸಿನ ಬಳಿಕ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಂದು ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಅಚ್ಚರಿಯ ಕ್ಷಣಕ್ಕೆ ಸಾಕ್ಷಿಯಾಗಲು ವಿಜ್ಞಾನಿಗಳು ರೆಡಿಯಾಗಿ ನಿಂತಿದ್ದಾರೆ. ಈ ಮೂಲಕ 15 ದಿನಗಳ ಹಿಂದೆ ಚಂದ್ರನಲ್ಲಿ ರಾತ್ರಿಯಾದ ಕಾರಣ ನಿದ್ರೆಗೆ ಜಾರಿಸಿದ್ದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಗಳನ್ನು ಎಬ್ಬಿಸುವ ಸಾಹಸಕ್ಕೆ ಇಸ್ರೋ ಮುಂದಾಗಿದೆ. ಈ ಅಭೂತಪೂರ್ವ ಕ್ಷಣಕ್ಕಾಗಿ ಭಾರತೀಯರೂ ಕಾತರರಾಗಿದ್ದಾರೆ. ಚಂದ್ರನ ಸೂರ್ಯಾಸ್ತ ಸಂದರ್ಭದಲ್ಲಿ ಮೈನಸ್ 200 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುವ ತಾಪಮಾನ ಎದುರಿಸಿ ಈ ಸಾಧನಗಳು ಜಾಗೃತಾವಸ್ಥೆಗೆ ಹೇಗೆ ಮರಳಲಿವೆ ಎಂಬ ಕುತೂಹಲ ಮೂಡಿದೆ. ಹೀಗೆ ಜಾಗೃತಗೊಂಡ ನಂತರ ಮುಂದಿನ 14 ದಿನಗಳ ಕಾಲ ಇವು ಭೂಮಿಗೆ ಚಂದ್ರನ ಅಂಗಳದ ಮಾಹಿತಿ
ಕಳುಹಿಸಲಿವೆ.

ಅಂದಹಾಗೆ ಈ ಹಿಂದೆ ಚಂದ್ರಯಾನ ನೌಕೆ ಅಂದರೆ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ್ದ ಇಸ್ರೋ ಅದು 14 ದಿನ ಕೆಲಸ ಮಾಡಬಹುದು ಎಂದು ಹೇಳಿತ್ತು. ಅದರಂತೆ 14 ದಿನಗಳ ಕಾಲ ರೋವರ್ ಮತ್ತು ಲ್ಯಾಂಡರ್ ಅಭೂತಪೂರ್ವವಾಗಿ ಕಾರ್ಯ ನಿರ್ವಹಿಸಿದ್ದವು. ಬಳಿಕ 15ನೇ ಚಂದ್ರನಲ್ಲಿ ಕತ್ತಲು ಕವಿದ ಬಳಿಕ ಈ ಉಭಯ ನೌಕೆಗಳನ್ನು ನಿದ್ರೆಗೆ ಜಾರಿಸಲಾಗಿತ್ತು. ಇದೀಗ ಮತ್ತೆ ಚಂದ್ರನಲ್ಲಿ ಮುಂಜಾನೆಯಾಗುತ್ತಿದ್ದು ಇದೇ ಕಾರಣಕ್ಕೆ ಇಸ್ರೋ ವಿಜ್ಞಾನಿಗಳು ನಿದ್ರೆಗೆ ಜಾರಿರುವ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ಗಳನ್ನು ಎಬ್ಬಿಸಲು ಹಗಲು ರಾತ್ರಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್ ಅವರು ’15 ದಿನಗಳ ಚಂದ್ರನ ಹಗಲು ಶುಕ್ರವಾರದಿಂದ ಆರಂಭವಾಗಲಿದ್ದು, ಮೊದಲ ಕಿರಣ ಬಿದ್ದ ನಂತರ ವಿಕ್ರಂ ಹಾಗೂ ಪ್ರಜ್ಞಾನ್‌ನಲ್ಲಿ ಜಾಗೃತಾವಸ್ಥೆಗೆ ತರುವ ಯತ್ನವನ್ನು ವಿಜ್ಞಾನಿಗಳು ನಡೆಸಲಿದ್ದಾರೆ ಎಂದು. ಗುರುವಾರ ಚಂದ್ರನಲ್ಲಿ ಸೂರ್ಯೋದಯದ ನಂತರ ಆರಂಭವಾಗುವ ಈ ಪ್ರಕ್ರಿಯೆ ಶುಕ್ರವಾರವೂ ಮುಂದುವರಿಯಲಿದೆ. ಈ ಎರಡು ಪ್ರಮುಖ ಸಾಧನಗಳು ಮರಳಿ ಜಾಗೃತಾವಸ್ಥೆಗೆ ಬರುವ ನಿರೀಕ್ಷೆ ಇದೆ. ಇದು ಸೆ. 22ರಂದು ಗೊತ್ತಾಗಲಿದೆ’ ಎಂದಿದ್ದಾರೆ.

ಅಲ್ಲದೆ ಚಂದ್ರನ ಅಂಗಳದಲ್ಲಿನ ಸೂರ್ಯಾಸ್ತದ ಸಂದರ್ಭದಲ್ಲಿ ಸೆ.2ರಂದು ಈ ಎರಡು ಸಾಧನಗಳನ್ನು ಹಂತ ಹಂತವಾಗಿ ನಿದ್ರಾವಸ್ಥೆಗೆ ಕಳುಹಿಸಲಾಗಿತ್ತು. ಇದಕ್ಕೂ ಪೂರ್ವದಲ್ಲಿ ಈ ಸಾಧನಗಳಲ್ಲಿರುವ ಬ್ಯಾಟರಿಗಳನ್ನು ಮರುಪೂರಣಗೊಳಿಸಲಾಗಿತ್ತು. ಜತೆಗೆ ಸೂರ್ಯಾಸ್ತದ ಸಂದರ್ಭದಲ್ಲೂ ಸೂರ್ಯನ ಕಿರಣಗಳು ಲಭ್ಯವಾಗುವಂತೆ ಸೌರ ಫಲಕಗಳನ್ನು ಸಜ್ಜುಗೊಳಿಸಲಾಗಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸದ್ಯ ರೋವರ್ 100 ಮೀಟರ್ ದೂರವನ್ನು ಕ್ರಮಿಸಿದೆ. ಚಂದ್ರನನ್ನು ತಲುಪಿದ ನಂತರ, ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಭೂಮಿಯ ಮೇಲಿನ ವಿಜ್ಞಾನಿಗಳಿಗೆ ಅನೇಕ ಪ್ರಮುಖ ಡೇಟಾವನ್ನು ಕಳುಹಿಸಿವೆ. ಈ ಮಾಹಿತಿಯ ಆಧಾರದ ಮೇಲೆ ಚಂದ್ರನಿಗೆ ಸಂಬಂಧಿಸಿದ ಹಲವು ಮಾಹಿತಿಗಳು ಬೆಳಕಿಗೆ ಬಂದಿವೆ. ಈ ಹಿಂದೆ ಪ್ರಗ್ಯಾನ್ ರೋವರ್ 100 ಮೀಟರ್ ದೂರ ಕ್ರಮಿಸಿದೆ ಎಂದು ಇಸ್ರೋ ತಿಳಿಸಿತ್ತು. ಈ ದೂರವನ್ನು ಕ್ರಮಿಸಲು ರೋವರ್ ಸುಮಾರು 10 ದಿನಗಳನ್ನು ತೆಗೆದುಕೊಂಡಿತ್ತು.

Leave A Reply

Your email address will not be published.