Dakshina Kannada: ಅನ್ನ ಭಾಗ್ಯದ ಅಕ್ಕಿಯಲ್ಲಿ ಸಿಕ್ತು ಕಲ್ಲು, ಹುಣಸೆ ಬೀಜ, ದೇವಸ್ಥಾನದ ಪಂಚಕಜ್ಜಾಯ !! ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೀಗೊಂದು ಯಡವಟ್ಟು
Kadaba: ಬಡವರು ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಸರಕಾರದಿಂದ ಪಡಿತರ ಚೀಟಿ (Ration Card)ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಡಿತರ ಚೀಟಿ ಮೂಲಕ ಸಬ್ಸಿಡಿಯಲ್ಲಿ ಅಕ್ಕಿ ಮತ್ತು ಗೋಧಿಯಂತಹ ಅಗತ್ಯ ಪದಾರ್ಥಗಳನ್ನು ನೀಡುತ್ತಿದೆ. ಇದರ ಜೊತೆಗೆ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯ ಅನುಸಾರ, ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆಯ(Anna bhagya Scheme) ಮೂಲಕ ಅಕ್ಕಿ ವಿತರಣೆ ಮಾಡಲಾಗುತ್ತಿದೆ.
ಕಡಬ ತಾಲೂಕಿನ ಆಲಂಕಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಕೊಯಿಲ ಶಾಖೆಯಲ್ಲಿ ಕಳಪೆ ಅಕ್ಕಿಯನ್ನು ಪೂರೈಕೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಕಡಬದಲ್ಲಿ ಬಡತನ ರೇಖೆಗಿಂತ ಕೆಳಗಿನ ಪಡಿತರದಾರರಿಗೆ(Ration Card Holder)ಪ್ರತಿ ತಿಂಗಳು ವಿತರಿಸುವ ಅನ್ನ ಭಾಗ್ಯದ ಅಕ್ಕಿಯಲ್ಲಿ ಕಲ್ಲು, ಪಂಚಕಜ್ಜಾಯ, ಹುಣಸೆ ಬೀಜ ಕಂಡು ಬಂದಿದೆ ಎಂಬ ಆರೋಪ ಕೇಳಿ ಬಂದಿದೆ.ಈ ಬೆಳವಣಿಗೆಯ ಬಗ್ಗೆ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟವರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.
ಕೊಯಿಲ ಶಾಖೆಯಲ್ಲಿ ಪ್ರತೀ ತಿಂಗಳು ಹತ್ತು ತಾರೀಕಿನ ಬಳಿಕ ಅನ್ನ ಭಾಗ್ಯ ಅಕ್ಕಿ ವಿತರಣೆ ಮಾಡಲಾಗುತ್ತದೆ. ಎಂದಿನಂತೆ ಅಕ್ಕಿ ವಿತರಣೆ ವೇಳೆ ಕಳೆದ ಬಾರಿ ಸರಬರಾಜಾದ ಉಳಿಕೆ ಅಕ್ಕಿಯನ್ನು ಬಳಸಿದ ನಂತರ ಈ ಬಾರಿಯೂ ಈ ಶಾಖೆಗೆ ಮೀಸಲಾದ 300 ಚೀಲ ಅಕ್ಕಿ ಆಲಂಕಾರಿನಲ್ಲಿರುವ ಆಹಾರ ಇಲಾಖೆಯ ಗೋಡೌನ್ ನಿಂದ ಸರಬರಾಜು ಆಗಿದ್ದು, ಇದರಲ್ಲಿ ಅಕ್ಕಿ ವಿತರಣೆಗಾಗಿ 25 ಚೀಲವನ್ನು ತೆರೆದ ಸಂದರ್ಭ ಅದರಲ್ಲಿ ನಾಲ್ಕು ಚೀಲದಲ್ಲಿ ಒಂದು ಕೆಜಿ ತೂಗುವ ಎರಡು ಸಣ್ಣ ಸಣ್ಣ ಕಲ್ಲಿನ ಪ್ಯಾಕ್, ಹುಣಸೆ ಬೀಜ, ದೇವಸ್ಥಾನಗಳಲ್ಲಿ ಕೊಡುವ ರೀತಿಯ ಗೋಧಿಪುಡಿಯಂತಹ ಪಂಚಕಜ್ಜಾಯ ಪ್ರಸಾದ ಲಭ್ಯವಾಗಿದೆ ಎನ್ನಲಾಗಿದೆ. ಅದರಲ್ಲಿಯೂ ಒಂದು ಚೀಲದಲ್ಲಿ ತುಂಬಾ ಕಳಪೆಯಾಗಿರುವ ಅಕ್ಕಿ ದೊರೆತಿದೆ ಎನ್ನಲಾಗಿದೆ.
ಕಳೆದ ಎರಡು ತಿಂಗಳಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಿತ ಅಕ್ಕಿ ವಿತರಣೆ ಆಗಿದ್ದು, ಆ ಅಕ್ಕಿಯನ್ನು ನೀರಿಗೆ ಹಾಕಿದ ಕೂಡಲೇ ಅನ್ನದ ಅಗಳಿನ ಗಾತ್ರವಾಗಿ ನೀರಿನಲ್ಲಿ ತೇಲುತ್ತಿತ್ತು ಎನ್ನಲಾಗಿದೆ.ಪ್ರತೀ ಬಾರಿ ಸೆಣಬು ಗೋಣಿ ಚೀಲದಲ್ಲಿ ಅಕ್ಕಿ ಪೂರೈಕೆಯಾಗುತ್ತಿತ್ತು. ಆದರೆ,ಈ ಬಾರಿ ಪ್ಲಾಸ್ಟಿಕ್ ಚೀಲದಲ್ಲಿ ಅಕ್ಕಿ ಸರಬರಾಜು ಮಾಡಲಾಗಿದೆ.
ಆಲಂಕಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಅಕ್ಕಿಯಲ್ಲಿ ಕಲ್ಲು ಇನ್ನಿತರ ಬೇಡದ ವಸ್ತುಗಳು ಸಿಕ್ಕಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ವಿಲಕ್ಷಣ ವಿದ್ಯಮಾನದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಹಾರ ಇಲಾಖಾ ಉನ್ನತ ಮಟ್ಟದ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಅಕ್ಕಿ ಚೀಲದಲ್ಲಿ ಕಾಟುಕಲ್ಲು , ಪಂಚಕಜ್ಜಾಯ, ಹುಣಿಸೆ ಬೀಜ ಸಿಕ್ಕಿರುವ ಹಿನ್ನೆಲೆ ಎಲ್ಲಾ 300 ಚೀಲ ಬಿಚ್ಚಿದಾಗ ಇನ್ನೆಷ್ಟು ಕಲ್ಲು ಮಣ್ಣು ಇರಲಿದೆಯೋ ಎಂಬ ಪ್ರಶ್ನೆ ಸಹಜವಾಗಿ ಎಲ್ಲರಿಗೂ ಮೂಡಿದೆ. ಕೊಯಿಲ ಶಾಖೆಯಲ್ಲಿ ಕಂಡು ಬಂದ ಬೆಳವಣಿಗೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಏನು ಪ್ರಯೋಜನ ಆಗಿಲ್ಲ ಎನ್ನಲಾಗಿದೆ. ಈ ನಡುವೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಈ ಕುರಿತು ಕಡಬ ತಹಶೀಲ್ದಾರ್ ಅವರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ತಕ್ಷಣ ಭೇಟಿ ನೀಡಿ ಸಮಸ್ಯೆ ಪರಿಹರಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.