ಸೌಜನ್ಯ ಪ್ರಕರಣ: ನಾನು ಕೂಡಾ ಗೌಡ ಅಂದ ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ !! ಒಕ್ಕಲಿಗರ ಧರಣಿಯಲ್ಲಿ ಭಾಗಿಯಾದ ತಿಮರೋಡಿಯಿಂದ ಅಚ್ಚರಿಯ ಹೇಳಿಕೆ !
ಮಂಗಳೂರು: ಸೌಜನ್ಯ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಒಕ್ಕಲಿಗರ ಜಿಲ್ಲಾ ಹೋರಾಟ ಸಾಂಸ್ಥಿಕ ರೂಪ ಪಡೆದುಕೊಂಡಿದೆ. ನಿನ್ನೆ ಮತ್ತು ಇವತ್ತು ಎರಡು ದಿನಗಳಲ್ಲಿ ಮಹಾತ್ಮಾ ಗಾಂಧೀಜಿಯ ಸತ್ಯಾಗ್ರಹದ ಮಾದರಿಯಲ್ಲಿ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿಯಿಂದ ಎರಡು ದಿನಗಳ ಕಾಲ ಧರಣಿ ಇದೀಗ ಮುಕ್ತಾಯವಾಗಿದೆ. ಮಂಗಳೂರಿನ ಮಿನಿ ವಿಧಾನ ಸೌಧದ ಎದುರು, ಕ್ಲಾಕ್ ಟವರ್ ಪಕ್ಕಾ ಮಂಗಳವಾರ ಆರಂಭಗೊಂಡು ಈಗ ಮುಕ್ತಾಯವಾಗಿದೆ.
ಈ ಧರಣಿ ಸತ್ಯಾಗ್ರಹದ ಸಮಾರೋಪ ಸಮಾರಂಭಕ್ಕೆ ಸೌಜನ್ಯ ಹೋರಾಟದ ನೇತೃತ್ವ ವಹಿಸಿರುವ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಸೌಜನ್ಯ ತಾಯಿ ಕುಸುಮಾವತಿಯವರು ಆಗಮಿಸಿದ್ದಾರೆ. ಅವರ ಜೊತೆ ಸೌಜನ್ಯ ಮಾವ ವಿಠಲ ಗೌಡ ಸೌಜನ್ಯ ತಾತ ಬಾಬುಗೌಡ ಮತ್ತು ಇತರ ಕುಟುಂಬಸ್ಥರು ಹಾಜರಿದ್ದರು.
ಮಹೇಶ್ ಶೆಟ್ಟಿ ತಿಮರೋಡಿಯವರು ಮಾತನಾಡಿ, ಒಕ್ಕಲಿಗರು ರಾಜ್ಯದಲ್ಲಿ ಎರಡನೆಯ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇವತ್ತು ಸರಕಾರ ಇರಬಹುದು, ಅಥವಾ ಮುಂದೆ ಯಾವುದೇ ಸರ್ಕಾರದ ಬರಬಹುದು. ಎಲ್ಲಾ ಆಯ್ಕೆಯಲ್ಲಿ ಒಕ್ಕಲಿಗರ ಪಾತ್ರ ಬಹಳ ದೊಡ್ಡದಿದೆ. ಒಕ್ಕಲಿಗರನ್ನು ಬಿಟ್ಟು ಯಾರು ಏನು ಮಾಡಲು ಆಗುವುದಿಲ್ಲ. ಹಾಗಾಗಿ ನಿಮ್ಮದು ಬಲಿಷ್ಠ ಸಮುದಾಯ. ನಿಜ ಹೇಳಬೇಕೆಂದರೆ ನಾನು ಕೂಡ ಒಕ್ಕಲಿಗ. ನಮ್ಮನ್ನು ಹಿಂದೆ ಒಕ್ಕಲ್ಮೇ ಎಂದು ಕರೆಯುತ್ತಿದ್ದರು. ಹಿಂದೆ ಜೀವರಾಜ ಆಳ್ವಾ ಇದ್ದ ಸಮಯದಲ್ಲಿ ಒಕ್ಕಲಿಗರ ಯಾನೆ ನಾಡವರ ಸಂಘ ಅಂತಲೇ ಇತ್ತು. ಆ ಸಂಘದಲ್ಲಿ ನನಗೂ ಜವಾಬ್ದಾರಿ ಇದ್ದವು. ಹಾಗಾಗಿ ನಾನು ಕೂಡ ಒಕ್ಕಲಿಗ ಎದ್ದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ಒಕ್ಕಲಿಗರ ಸ್ವಾಮೀಜಿಯ ಜೊತೆ ಮಾತನಾಡಿದ್ದೇನೆ ಹಿಂದೆಯೂ ಸೌಜನ್ಯ ಕುಟುಂಬವನ್ನು ಕರೆದುಕೊಂಡು ಒಕ್ಕಲಿಗರ ಸ್ವಾಮೀಜಿಯನ್ನು ನಾವು ಭೇಟಿಯಾಗಿ ಬಂದಿದ್ದೆವು. ನಂತರ ದೊಡ್ಡಮಟ್ಟದಲ್ಲಿ ಒಕ್ಕಲಿಗ ಗೌಡ ಸಂಘದ ದಕ್ಷಿಣ ಕನ್ನಡದ ಎಲ್ಲಾ ಪದಾಧಿಕಾರಿಗಳು ಕಳೆದ ವಾರ ಸ್ವಾಮೀಜಿಯನ್ನು ಕಂಡು ಬೆಂಬಲ ಕೋರಿ ಬಂದಿದ್ದಾರೆ. ಕಡೆಯ ತನಕ ಸೌಜನ್ಯ ಹೋರಾಟದಲ್ಲಿ ನಿಲ್ಲುವುದಾಗಿ ಆದಿಚುಂಚನಗಿರಿಯ ಸ್ವಾಮೀಜಿಯವರು ಹೇಳಿದ್ದಾರೆ. ಈ ಸಲ ಸೌಜನ್ಯರಿಗೆ ಖಚಿತವಾಗಿಯೂ ನ್ಯಾಯ ಸಿಗುತ್ತದೆ ಎಂದಿದ್ದಾರೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ.
ಯಥಾಪ್ರಕಾರ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಸಹಜ ಸಾವುಗಳ ಮತ್ತು ಸೌಜನ್ಯ ಹತ್ಯೆಯ ತನಿಖೆಯಲ್ಲಿ ಉಂಟಾದ ಲೋಪಗಳು ಮತ್ತು ಆರೋಪಿಗಳನ್ನು ರಕ್ಷಿಸಿದ ವ್ಯವಸ್ಥೆಯ ವಿರುದ್ಧ ಅವರು ಕಿಡಿಕಾರಿದ್ದಾರೆ.
ಸೌಜನ್ಯ ತಾಯಿ ಮಾತನಾಡಿ ನಮಗೆ, ನಮ್ಮ ಕುಟುಂಬಕ್ಕೆ ಈಗ ಭದ್ರತೆ ಇಲ್ಲ. ನಮ್ಮ ಮನೆಗೆ ಈಗ ಸುತ್ತಮುತ್ತಲಿನ ಯಾರನ್ನು ಬರಲು ಬಿಡುತ್ತಿಲ್ಲ. ನಮ್ಮ ಮನೆಗೆ ಬರುವವರನ್ನು ತಡೆಯಲಾಗುತ್ತಿದೆ. ಆದರೆ ನಮಗೆ ಮಂಜುನಾಥ ಮತ್ತು ಅಣ್ಣಪ್ಪ ದೇವರೇ ರಕ್ಷಣೆ ಅವರೇ ನಮ್ಮನ್ನು ತರ ಕಾಯುತ್ತಿದ್ದಾರೆ ಎಂದು ಕುಸುಮಾವತಿಯವರು ಅಳಲು ತೋಡಿಕೊಂಡಿದ್ದಾರೆ.
ದಕ್ಷಿಣ ಕನ್ನಡದ ಸೌಜನ್ಯ ಹೋರಾಟ ಸಮಿತಿ ರೂಪಿಸಿದ ಎರಡು ದಿನಗಳ ಸತ್ಯಾಗ್ರಹದ ನೇತೃತ್ವವನ್ನು ಸೌಜನ್ಯ ಹೋರಾಟ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಗೌಡ ಡಿ ಬಿ, ಪದಾಧಿಕಾರಿಗಳಾದ ಗುರುದೇವ್, ಕಿರಣ್ ಬುಡ್ಲೆಗುತ್ತು, ಗಣೇಶ್ ಕಲಾಯಿ, ಆಶಾ ತಿಮ್ಮಪ್ಪ ಗೌಡ ಮುಂತಾದವರು ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಹಲವು ತಾಲೂಕುಗಳ ಮತ್ತು ಗ್ರಾಮಗಳ ಒಕ್ಕಲಿಗರ ಸಂಘದ ಪ್ರತಿನಿಧಿಗಳು ಭಾಗಿಯಾಗಿದ್ದರು. ಯಾಕೆಂದರೆ ದಕ್ಷಿಣ ಕನ್ನಡದ ಒಕ್ಕಲಿಗ ಯಾನೆ ಗೌಡರ ಸಂಘದ ಎಲ್ಲಾ ಜಿಲ್ಲೆಗಳ ತಾಲೂಕುಗಳ ಮತ್ತು ಗ್ರಾಮಗಳ ಪದಾಧಿಕಾರಿಗಳು ಇಲ್ಲಿ ಎರಡು ದಿನ ಸೇರಿದ್ದು, ರಾಜ್ಯ ಒಕ್ಕಲಿಗರ ಸಂಘ ಮತ್ತು ಒಕ್ಕಲಿಗರ ಶಕ್ತಿ ಕೇಂದ್ರ ಆದಿಚುಂಚನಗಿರಿ ಸ್ವಾಮಿಜಿಯವರನ್ನು ಈಗಾಗಲೇ ಸರ್ಕಾರದ ಮೇಲೆ ಒತ್ತಡ ಹೇರಲು ಸಂಪರ್ಕಿಸಲಾಗಿದ್ದು ಸ್ವಾಮೀಜಿಯವರ ಕಡೆಯಿಂದ ದೊಡ್ಡಮಟ್ಟದ ಬೆಂಬಲ ವ್ಯಕ್ತವಾಗಿದೆ.