Chaitra kundapura case: ಚೈತ್ರಾ ಕುಂದಾಪುರ ವಂಚನೆ ಪ್ರಕರಣ- ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ ಪೊಲೀಸ್ ಆಯುಕ್ತ ಬಿ.ದಯಾನಂದ್ !!

Chaitra kundapura case: ಸನಾತನ ಹಿಂದೂ ಧರ್ಮದ ಹೆಸರು ಹೇಳಿಕೊಂಡು ಭಾಷಣ ಹೋರಾಟದ ಮೂಲಕ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ (Chaithra Kundapura)ಳ ಅಸಲಿ ಮುಖ ಬಯಲಾಗಿದ್ದು, ಆಕೆ ಮತ್ತು ಆಕೆಯ ಗ್ಯಾಂಗ್ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ನಕಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರನ್ನು ತಯಾರು ಮಾಡಿ ಬರೋಬ್ಬರಿ 5 ಕೋಟಿ ರೂ. ದೋಚಿದ್ದ ಪ್ರಕರಣದಲ್ಲಿ ಸಿಸಿಬಿ (CCB) ಬಲೆಗೆ ಬಿದ್ದಿದೆ. ಸದ್ಯ ಫೈರ್ ಬ್ರ್ಯಾಂಡ್‌ ನಾಯಕಿ ಎಂಬ ಹಣೆಪಟ್ಟಿ ಇರುವ ಚೈತ್ರಾ ಕುಂದಾಪುರ ಇದೀಗ ಪೋಲೀಸರ ಅತಿಥಿಯಾಗಿದ್ದಾಳೆ.

 

ಕಳೆದ 2023 ವಿಧಾನಸಭಾ ಚುನಾವಣೆಯನ್ನು ಬಂಡವಾಳ ಮಾಡಿಕೊಂಡು ಈ ತಂಡ ದುಡ್ಡು ಮಾಡುವ ಯೋಜನೆಯನ್ನು ಹಾಕಿತ್ತು. ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಐದು ಕೋಟಿ ರೂ. ಉಂಡೇನಾಮ ತಿಕ್ಕಲಾಗಿದೆ. ಹೀಗಾಗಿ ಬಂಡೇಪಾಳ್ಯದಲ್ಲಿ ಉದ್ಯಮಿ ಗೋವಿಂದಬಾಬು ಎಂಬುವರು ದೂರು ನೀಡಿದ್ದರು. ಈ ದೂರಿನ ಅನ್ವಯ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಈ ಕೃತ್ಯದಲ್ಲಿ ಒಟ್ಟು ಎಂಟು ಜನ ಆರೋಪಿಗಳು ಭಾಗಿಯಾಗಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಪ್ರತಿಕ್ರಿಯಿಸಿದ್ದು, ಮಹತ್ವದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಹೌದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್(bengaluru city police commissioner B Dayananda) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಅರೋಪಿಗಳು ಒಂದು ರಾಜಕೀಯ ಪಕ್ಷದದಲ್ಲಿ ವಿಧಾನಸಭೆ ಟಿಕೆಟ್ ಕೊಡಿಸುವ ಮಾತು ನೀಡಿ ಹಣ ಪಡೆದು ವಂಚಿಸಿದ್ದಾರೆ. ಬೇರೆ ವ್ಯಕ್ತಿಗಳನ್ನು ರಾಜಕೀಯ ಮುಖಂಡರು ಎಂದು ನಂಬಿಸಿ ವಂಚನೆ ಮಾಡಲಾಗಿದೆ. ಈಗ ಅರೋಪಿಗಳ ಅರೆಸ್ಟ್ ಮಾಡಿ ಪೊಲೀಸ್ ಕಸ್ಟಡಿಗೆ ಪಡೆಯಲಿದ್ದೇವೆ‌. ನಂತರ ಹೆಚ್ಚಿನ ತನಿಖೆ ಮಾಡುತ್ತೆವೆ ಎಂದು ತಿಳಿಸಿದರು.

ಯಾರು ಈ ಚೈತ್ರಾ?
ಹೆಸರೇ ಹೇಳುವ ಹಾಗೆ ಚೈತ್ರಾ ಕುಂದಾಪುರ ಅವರು ಉಡುಪಿ ಜಿಲ್ಲೆ ಕುಂದಾಪುರದವರು.. ಪ್ರಖರ ಭಾಷಣಕಾರರಾಗಿ ಗಮನ ಸೆಳೆದವರು. ಕುಂದಾಪುರದ ತೆಕ್ಕಟ್ಟೆಯಲ್ಲಿ ಪಿಯುಸಿವರೆಗೆ ವ್ಯಾಸಂಗ ಮಾಡಿದ ಚೈತ್ರಾ, ಕೊಣಾಜೆಯಲ್ಲಿ ಪದವಿ ಪೂರ್ಣಗೊಳಿಸಿದರು. ಮಂಗಳೂರು ವಿಶ್ವ ವಿದ್ಯಾಲಯದ ಪದವೀಧರೆಯಾದ ಚೈತ್ರಾ ಕುಂದಾಪುರ, ಕೆಲ ಕಾಲ ಬೆಂಗಳೂರಿನಲ್ಲಿ ಸಮಯ ಸುದ್ದಿವಾಹಿನಿಯಲ್ಲಿ ಕೆಲಸ ಮಾಡಿದ್ದರು ಅನ್ನೋ ಮಾಹಿತಿ ಇದೆ. ಆದರೆ, ಅವರು ಜನಪ್ರಿಯತೆ ಗಳಿಸಿದ್ದು ಉಡುಪಿಯ ಸ್ಪಂದನ ಟಿವಿಯ ನಿರೂಪಕಿಯಾಗಿ.. ಇದಲ್ಲದೆ ಉಡುಪಿಯ ಮುಕ್ತ ನ್ಯೂಸ್ ಅನ್ನೋ ಸ್ಥಳೀಯ ಸುದ್ದಿ ವಾಹಿನಿಯಲ್ಲೂ ಚೈತ್ರಾ ಕುಂದಾಪುರ ಕೆಲಸ ಮಾಡಿದ್ದರು. ಆದರೆ, ಆ ಸುದ್ದಿವಾಹಿನಿ ಈಗ ಬಂದ್ ಆಗಿದೆ. ಇದಲ್ಲದೆ ಉದಯವಾಣಿ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿಯೂ ಕೆಲ ಕಾಲ ಚೈತ್ರಾ ಕುಂದಾಪುರ ಕೆಲಸ ಮಾಡಿದ್ದರು. ಕಾಲೇಜು ದಿನಗಳಿಂದಲೇ ಎಬಿವಿಪಿ ಸಂಘಟನೆಯಲ್ಲಿ ಗುರ್ತಿಸಿಕೊಂಡಿದ್ದ ಚೈತ್ರಾ ಕುಂದಾಪುರ, ಎಬಿವಿಪಿ ರಾಷ್ಟ್ರೀಯ ಸಮಿತಿ ಸದಸ್ಯೆ. ಉಡುಪಿಯ ಅಜ್ಜರ ಕಾಡಿನಲ್ಲಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ ಅನುಭವವನ್ನೂ ಹೊಂದಿದ್ದಾರೆ. ಪತ್ರಕರ್ತೆಯಾಗಿ, ನಿರೂಪಕಿಯಾಗಿ ಭಾಷಣಕಾರರಾಗಿ ಗಮನ ಸೆಳೆದಿರುವ ಚೈತ್ರಾಗೆ ಯುವ ಮಾಧ್ಯಮ ರತ್ನ ಪ್ರಶಸ್ತಿಯೂ ಸಿಕ್ಕಿತು. ತುಂಬಾ ಜನರಿಗೆ ಗೊತ್ತಿಲ್ಲದ ಸಂಗತಿ ಎಂದರೆ, ಈಕೆ ಲೇಖಕಿ ಕೂಡಾ ಆಗಿದ್ದಾರೆ. ಪ್ರೇಮ ಪಾಶ ಅನ್ನೋದು ಚೈತ್ರಾ ಕುಂದಾಪುರ ಅವರ ಚೊಚ್ಚಲ ಕೃತಿ.

ಇನ್ನು ಸೋಷಿಯಲ್ ಮೀಡಿಯಾ ಇರಬಹುದು, ಟಿವಿ ಚಾನಲ್‌ ಇರಬಹುದು, ಎಲ್ಲೆಡೆ ಚೈತ್ರಾ ಕುಂದಾಪುರ ವಿವಾದಗಳಿಂದಲೇ ಸುದ್ದಿಯಲ್ಲಿ ಇದ್ರು. ಅದರಲ್ಲೂ ಹಿಂದೂ ವಿಚಾರಧಾರೆಗಳ ಕುರಿತಾಗಿ ಆವೇಶಭರಿತವಾಗಿ ಮಾತನಾಡೋದು ಚೈತ್ರಾ ಕುಂದಾಪುರ ಅವರ ಟ್ರೇಡ್ ಮಾರ್ಕ್‌ ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚೈತ್ರಾ ಕುಂದಾಪುರ ಹಾಗೂ ದೇವಸ್ಥಾನದ ಭಕ್ತರ ನಡುವೆ ಜಟಾಪಟಿ ನಡೆದಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಕೂಡಾ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪೂಜೆ, ಪುನಸ್ಕಾರಗಳ ವಿಚಾರಕ್ಕೆ ಸಂಬಂಧಪಟ್ಟಂತೆ ಆಕ್ಷೇಪ ತೆಗೆದಿದ್ದ ಚೈತ್ರಾ ಕುಂದಾಪುರ ಪ್ರಚೋದನಕಾರಿ ಪೋಸ್ಟ್‌ ಮಾಡಿದ್ದರು. ಲವ್ ಜಿಹಾದ್ ಹಾಗೂ ಮತಾಂತರದ ಬಗ್ಗೆ ಆಕ್ರೋಶ ಭರಿತವಾಗಿ ಮಾತನಾಡಿ ಹಲವು ಬಾರಿ ವಿವಾದಕ್ಕೆ ಸಿಲುಕಿದ್ದಾರೆ. ಇನ್ನೂ ಉಡುಪಿಯ ಹಿಜಾಬ್ ವಿವಾದ ಶುರುವಾದ ಹೊತ್ತಲ್ಲೂ ಅಖಾಡಕ್ಕೆ ಇಳಿದಿದ್ದ ಚೈತ್ರಾ ಕುಂದಾಪುರ, ಪ್ರಚೋದನಕಾರಿಯಾಗಿ ಭಾಷಣ ಮಾಡಿ ವಿವಾದಕ್ಕೆ ಕಾರಣವಾಗಿದ್ದರು. ಕರಾವಳಿ ಜಿಲ್ಲೆಗಳಲ್ಲಿ ಆಗಾಗ ಕೇಳಿ ಬರುವ ಗೋವುಗಳ ಕಳ್ಳತನ ಸೇರಿದಂತೆ ಹಲವು ವಿಚಾರಗಳ ಕುರಿತಾಗಿಯೂ ಚೈತ್ರಾ ಕುಂದಾಪುರ ದನಿ ಎತ್ತುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲೂ ಸಾಕಷ್ಟು ಸಕ್ರಿಯವಾಗಿರುವ ಚೈತ್ರಾ ಕುಂದಾಪುರ ವಿರುದ್ಧ ದ್ವೇಷ ಭಾಷಣ ಆರೋಪದ ಮೇಲೆ ಸಾಕಷ್ಟು ಪ್ರಕರಣಗಳು ದಾಖಲಾಗಿವೆ.

Leave A Reply

Your email address will not be published.