BJP State president: ಯಡಿಯೂರಪ್ಪ ಪುತ್ರ ಬಿ. ವೈ ವಿಜಯೇಂದ್ರನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ?! ಸಿ ಟಿ ರವಿ ಯಿಂದ ಅಚ್ಚರಿ ಮಾಹಿತಿ ಬಹಿರಂಗ
BJP State president: ರಾಜ್ಯ ಬಿಜೆಪಿಯ(BJP) ಹಾಲಿ ರಾಜ್ಯಾಧ್ಯಕ್ಷರ ಅವಧಿ ಮುಗಿದಿದ್ದರೂ ಇನ್ನೂ ಕೂಡ ನೂತನ ಅಧ್ಯಕ್ಷರ ಆಯ್ಕೆ ಆಗಿಲ್ಲ. ಇದರಿಂದ ಸಮರ್ಥ ನಾಯಕನಿಲ್ಲದೆ ಬಿಜೆಪಿ ಸೊರಗಿ ಹೋಗುತ್ತಿದೆ. ಜೊತೆಗೆ ಕೇಂದ್ರ ನಾಯಕರ ಕಡೆಗಣನೆ ರಾಜ್ಯ ನಾಯಕರಿಗೆ ಭಾರೀ ತಲೆನೋವು ತಂದೊಡ್ಡಿದೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಬಿಜೆಪಿ ನಾಯಕ ಸಿಟಿ ರವಿ(CT Ravi) ಅವರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
ಹೌದು, ಬಿಜೆಪಿ ರಾಜ್ಯಾಧ್ಯಕ್ಷರಾಗಲು ಹಲವು ನಾಯಕರು ಇಂಗಿತ ವ್ಯಕ್ತಪಡಿಸಿದ್ದರು. ನಾವೂ ಆಕಾಂಕ್ಷಿಗಳು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅಲ್ಲದೆ ಕೆಲವರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದರು. ಇದರಲ್ಲಿ ಮಾಜಿ ಸಿಎಂ, ಬಿಜೆಪಿ ಮಾಸ್ ಲೀಡರ್ ಬಿ ಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ಕೂಡ ಒಬ್ಬರು. ಆದರೀಗ ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟವನ್ನು ಕಟ್ಟುವ ಕುರಿತು ಬಿಜೆಪಿ ಪ್ರಬಲ ನಾಯಕ ಸಿಟಿ ರವಿ ಮೌನ ಮುರಿದಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ವೈ.ವಿಜಯೇಂದ್ರ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂದು ಒಂದೆಡೆ ಕಾರ್ಯಕರ್ತರು ಚರ್ಚೆ ಮಾಡುತ್ತಿದ್ದಾರೆ. ಆದರೆ ಅಂತಿಮವಾಗಿ ಪಕ್ಷದ ನಾಯಕರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಈ ವಿಚಾರವಾಗಿ ಹೆಚ್ಚು ಮಾತನಾಡುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಅಲ್ಲದೆ ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆಯೂ ಇನ್ನೂ ಅಧಿಕೃತ ಮಾಹಿತಿ ಇಲ್ಲ ಎಂದ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ವರಿಷ್ಠರಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಆಡಿದ ಮಾತುಗಳನ್ನೂ ಕೇಳಿದ್ದೇನೆ. ಆದರೆ, ಈ ಕುರಿತು ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಎಂದರು. ಇನ್ನು, ವಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ಯಾಕೆ ವಿಳಂಬವಾಗುತ್ತಿದೆ ಎಂಬುದು ಸ್ಪಷ್ಟವಿಲ್ಲ. ಆದರೆ, ಕಾರಣವಿಲ್ಲದೇ ಕೇಂದ್ರದ ನಾಯಕರು ವಿಳಂಬ ಮಾಡುತ್ತಿಲ್ಲ ಎಂದಷ್ಟೆ ಹೇಳಿದರು.