Sowjanya case: ಬೆಳ್ತಂಗಡಿಯ ಸೌಜನ್ಯ ಹೋರಾಟಕ್ಕೆ ಆದ ಖರ್ಚು ಎಷ್ಟು ಕೋಟಿ ಗೊತ್ತಾ ?! ಅಬ್ಬಬ್ಬಾ.. ಕೇಳಿದ್ರೆ ನೀವೇ ಶಾಕ್ ಆಗ್ತೀರಾ- ಇಲ್ಲಿದೆ ನೋಡಿ ಪಕ್ಕಾ ಲೆಕ್ಕ !
ನಿನ್ನೆ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಪ್ರಜಾಪ್ರಭುತ್ವ ವೇದಿಕೆ ಮತ್ತು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಡಿಯಲ್ಲಿ ಅಭೂತ ಪೂರ್ವ ಜನಸ್ಪಂದನೆಯ ಜನ ಸಮಾವೇಶ ನಡೆದಿದೆ. ಸಾಮಾನ್ಯವಾಗಿ ಯಾವುದೇ ಸೆಲೆಬ್ರಿಟಿಗಳ ಮದುವೆ ಆದಾಗ ಅಥವಾ ಯಾವುದಾದರೂ ಬೃಹತ್ ಕಾರ್ಯಕ್ರಮವಾದಾಗ ಅಲ್ಲಿ ಏಳಿಸಿದ ಪೆಂಡಾಲ್, ಇಳಿಸಿದ ಕುರ್ಚಿ, ಬಡಿಸಿದ ಥರಾವರಿ ಭಕ್ಷ್ಯ ಭೋಜ್ಯಗಳ ವಿವರ, ಪಾಲ್ಗೊಂಡ ಬಾಣಸಿಗರು, ಮದುಮಗಳ ಚಿನ್ನದ ಲೇಪನದ ಸೆರಗು, ಮಾವ ಕೊಟ್ಟ ದುಬಾರಿ ಕಾರು, ಅದರ ಫೀಚರ್ಸ್, ಒಟ್ಟಾಗಿ ಸಮಾರಂಭಕ್ಕೆ ತಗುಲಿದ ಖರ್ಚು ಇತ್ಯಾದಿ ಇತ್ಯಾದಿ ವಿಷಯಗಳ ಬಗ್ಗೆ ವಿವರಗಳಲ್ಲಿ ನಾವು ನೋಡುತ್ತೇವೆ, ಓದುತ್ತೇವೆ. ಅದೇ ರೀತಿ ನಿನ್ನೆ ನಡೆದ ಸೌಜನ್ಯಾ ಹೋರಾಟದ ಈ ಬೃಹತ್ ಸಮಾರಂಭಕ್ಕೆ ಬಿದ್ದ ಖರ್ಚಿನ ಲೆಕ್ಕ ಕೇಳಿದ್ರೆ ನೀವ್ ಶಾಕ್ ಆಗ್ತೀರಾ !
ಹೌದು, ನಿನ್ನೆ ಬೆಳ್ತಂಗಡಿಯಲ್ಲಿ ನಡೆದ ಐತಿಹಾಸಿಕ ಜನಪ್ರವಾಹವೇ ಹರಿದು ಬಂದ ಸಮಾರಂಭದ ಒಟ್ಟಾರೆ ಖರ್ಚು 6 ಕೋಟಿ ರೂಪಾಯಿ !! ನಿನ್ನೆ ಒಂದೇ ದಿನ ದೇಶದ ಜನರ ಸಂಪತ್ತಿನಲ್ಲಿ 6 ಕೋಟಿ ರೂಪಾಯಿಗಳಷ್ಟು ಬಡತನವಾಗಿದೆ. ಹೌದು, ಕನಿಷ್ಟ 6 ಕೋಟಿ ರೂಪಾಯಿಗಳ ಸಂಪತ್ತನ್ನು ನಿನ್ನೆಯ ಸಮಾವೇಶ ನುಂಗಿ ಹಾಕಿದೆ. ಏನಪ್ಪಾ ಇಷ್ಟು ಖರ್ಚು ಎಂದು ನಿಮಗೆ ಅನುಮಾನ ಮೂಡಬಹುದು, ಅದರ ಪಕ್ಕಾ ಲೆಕ್ಕ ನಾವು ನೀಡುತ್ತಿದ್ದೇವೆ, ಇಲ್ಲಿ ನೋಡಿ.
ಯಾವುದೇ ಸಮಾರಂಭದಲ್ಲಿ ಹಾಕುವ ಪೆಂಡಾಲ್ ಮತ್ತು ಊಟದ ಖರ್ಚು ಅಧಿಕವಾಗಿರುತ್ತದೆ. ಆದರೆ ನಿನ್ನೆಯ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅವುಗಳ ಖರ್ಚೆಷ್ಟು ಗೊತ್ತಾ ? ಊಟ ಮತ್ತು ಪೆಂಡಾಲ್ ಮತ್ತಿತರ ಖರ್ಚು ತೆಗೆದುಕೊಂಡದ್ದು ಸುಮಾರು ಮೂರರಿಂದ ನಾಲ್ಕು ಲಕ್ಷಗಳನ್ನು. ಉಳಿದಂತೆ ಲೈಟಿಂಗ್, ಎಲ್ ಈ ಡಿ ಸ್ಕ್ರೀನ್ ಇತ್ಯಾದಿ ಖರ್ಚುಗಳಿಗೆ ಒಂದೆರಡು ಲಕ್ಷ ಖರ್ಚಾಗಿರಬಹುದು. ಹಾಗಾದರೆ ಉಳಿದ ದುಡ್ಡು ಎಲ್ಲಿ ಖರ್ಚಾಯಿತು ಎನ್ನುವ ಅನುಮಾನ ಮತ್ತು ಕುತೂಹಲ ನಿಮ್ಮಲ್ಲಿ ಇದ್ದೇ ಇರುತ್ತೆ.
ಬರೋಬ್ಬರಿ 6 ಕೋಟಿ ರೂ. ಮಾನವ ಸಂಪನ್ಮೂಲ ಪೋಲು !
ಹೌದು, ಇವತ್ತಿನ ಪ್ರತಿಭಟನೆಗೆ ಬರೋಬ್ಬರಿ 6 ಕೋಟಿ ರೂಪಾಯಿಗಳ ಸಂಪನ್ಮೂಲ ವೆಚ್ಚವಾಗಿದೆ. ಜನರು ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ದುಷ್ಟ ಭೂಪತಿಗಳ ಕ್ರೌರ್ಯ ಮತ್ತು ಅಟ್ಟಹಾಸವನ್ನು ಸಾಮೂಹಿಕವಾಗಿ ಮತ್ತು ಸಾಂಘಿಕವಾಗಿ ಎದುರಿಸಲು ನಡೆಯುತ್ತಿರುವ ಈ ಹೋರಾಟಕ್ಕೆ ಸುಮಾರು ಒಂದು ಲಕ್ಷ ಜನರು ಊರೂರುಗಳಿಂದ ಬಂದಿದ್ದಾರೆ. ಸಮಾರಂಭಕ್ಕೆ ಆದ ಇತರ ಖರ್ಚಿನ ಜತೆಗೆ ಮಾನವ ಸಂಪನ್ಮೂಲದ ನಷ್ಟವನ್ನೂ ನಾವು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಕನಿಷ್ಠ ವೇತನ, ಅಂದರೆ ದಿನಗೂಲಿಯ ವೇತನದ ಲೆಕ್ಕದಲ್ಲಿ ಲೆಕ್ಕ ಹಾಕಿದರೆ, 1 ಲಕ್ಷ ಜನರಿಗೆ ತಲಾ 600 ರೂಪಾಯಿಗಳನ್ನು ಲೆಕ್ಕ ಹಾಕಿದರೂ, ಈ ಸಮಾರಂಭದ ಒಟ್ಟು ಖರ್ಚು 6 ಕೋಟಿ ರೂಪಾಯಿ ಆಗುತ್ತದೆ. ದೂರದ ಊರಿನಿಂದ ಘಟಾನುಘಟಿ ನಾಯಕರುಗಳು, ಲಕ್ಷ ಲಕ್ಷ ಜನರು ತಮ್ಮ ತಮ್ಮ ವಾಹನಗಳ ಮೂಲಕ ಇಳಿದು ಬಂದಿದ್ದಾರೆ. ನೂರಾರು ಪೊಲೀಸರು, ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆ – ಈ ಎಲ್ಲಾ ಉಳಿದ ಖರ್ಚುಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಹೋದರೂ, ಕನಿಷ್ಟ 6 ಕೋಟಿ ನಷ್ಟ ನಿನ್ನೆಯ ಸಮಾರಂಭದ್ದು !!
ಈವರೆಗೆ ಸೌಜನ್ಯಾ ತನಿಖೆಗೆ ಸುಮಾರು 80 ಕೋಟಿಗಳಷ್ಟು ಖರ್ಚನ್ನು ಸರ್ಕಾರ ಹಲವು ತನಿಖೆಗಳ ನೆಪದಲ್ಲಿ ಮಾಡಿದೆ. ಆದರೆ ಏನೂ ಫಲ ಶ್ರುತಿಯಾಗಿಲ್ಲ. ಈ 80 ಕೋಟಿಗಳ ಖರ್ಚು ಸರಕಾರದ್ದಾದರೆ ಕಳೆದ 12 ವರ್ಷಗಳಲ್ಲಿ ತನಿಖೆಗಾಗಿ ಒತ್ತಾಯಿಸಿ ನೂರಾರು ಸಭೆಗಳು ನಡೆದಿವೆ. ಅವುಗಳ ಒಟ್ಟು ಖರ್ಚು ಎಷ್ಟಾಗಿರಬಹುದು ನೀವೇ ಊಹಿಸಿ. ಮೂರು ತಿಂಗಳ ಹಿಂದೆ ಆರೋಪಿ ಸಂತೋಷ ರಾವ್ ಆರೋಪ ಮುಕ್ತನಾಗಿ ಹೊರಬಂದ ನಂತರ, ರಾಜ್ಯದ ಅಲ್ಲಲ್ಲಿ ಕನಿಷ್ಠ 25 ಬೃಹತ್ ಸಭೆಗಳು ನಡೆದಿವೆ. ಲಕ್ಷ ಕೋಟಿಗಳಲ್ಲಿ ಜನ ಸಭೆಗಳಲ್ಲಿ ಪ್ರತಿಭಟನೆಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಂಡಿದ್ದಾರೆ. ಈ ಸಲದ (ಕಳೆದ 3 ತಿಂಗಳಿನಲ್ಲಿ) ಪ್ರತಿಭಟನೆಯಲ್ಲಿ ಕನಿಷ್ಠ 100 ಕೋಟಿ ನೀರು ಪಾಲಾಗಿದೆ. ಇವೆಲ್ಲವೂ ನಾವು ಯೋಚಿಸದೆ ಹುಂಡಿಗೆ ಹಾಕಿದ ಹಣದಂತೆ, ಮತ್ತೆ ಎಂದೂ ನಮ್ಮ ಕೈ ಸೇರುವುದಿಲ್ಲ. ಇವೆಲ್ಲದಕ್ಕೂ ಕಾರಣರಾದವರು ಧರ್ಮಸ್ಥಳದ ಭೂಪತಿಗಳು. ದಿನೇ ದಿನೇ ದೇಶದ ಮಾನವ ಸಂಪನ್ಮೂಲದ ದುಡ್ಡು ವ್ಯಯ ಆಗುತ್ತಿದೆ. ಹಾಗಾಗಿ ಸರ್ಕಾರ ಆದಷ್ಟು ಸೌಜನ್ಯ ಪೋಷಕರ ಮತ್ತು ಪ್ರತಿಭಟನಕಾರರ ಬೇಡಿಕೆಗೆ ಮನ್ನಣೆ ನೀಡಬೇಕು. ಬೇಗ ವಿಶೇಷ ತನಿಖೆಗೆ ಆದೇಶಿಸಬೇಕು. ದಿನಗಳು ಕಳೆದಂತೆ ಜನರ ಮತ್ತು ಸರ್ಕಾರದ ದುಡ್ಡು ಪೋಲು ಆಗುವುದು ಬಿಟ್ಟರೆ ಬೇರೆ ಏನನ್ನು ಕೂಡಾ ಸರ್ಕಾರ ಸಾಧಿಸಲು ಆಗುವುದಿಲ್ಲ. ಜನರ ಮತ್ತು ದೇಶದ ಸಂಪತ್ತನ್ನು ಮತ್ತಷ್ಟು ಕರಗಿಸಿದ ಮೇಲೆ ತನಿಖೆಗೆ ಕೊಡುವ ಮೊದಲು ಈಗಲೇ ತನಿಖೆಗೆ ಆದೇಶಿಸಿ. ಇದು ನಾಡಿನ ಸಮಾಜವಾದಿ ಮನಸ್ಥಿತಿಯ ನಂಬಿಕಸ್ತ ದೊರೆ ಸಿದ್ದರಾಮಯ್ಯನವರಿಗೆ ಕೈಮುಗಿದು ಮಾಡುವ ಪ್ರಾರ್ಥನೆ.