‘ಬೆಳ್ತಂಗಡಿಯ ಒಕ್ಕಲಿಗ ಗೌಡರು ಎದ್ದು ನಿಂತರೆ ಧರ್ಮಸ್ಥಳದ ಛತ್ರದಲ್ಲಿ ಅನ್ನ ಬಡಿಸಲು ಜನ ಸಿಗೋದಿಲ್ಲ’; ಅಂಥ ಗೌಡರು ಇನ್ನೂ ಸೌಜನ್ಯಾ ಹೋರಾಟಕ್ಕೆ ಪೂರ್ತಿ ಧುಮುಕಿಲ್ಲ ಯಾಕೆ ?

ಈ ಸಲ ಮತ್ತೆ ಜೋರಾಗಿ ಗೊರಕೆ ಕೇಳಿ ಬಂದಿದೆ. ಊರಿಗೆ ಊರೇ, ತಾಲೂಕಿಗೆ ತಾಲೂಕು, ಜಿಲ್ಲೆಗೆ ಜಿಲ್ಲೆ ಕೈ ಜೋಡಿಸಿ ಇವತ್ತು ರಾಜ್ಯವಿಡೀ ಸೌಜನ್ಯ ಚಳವಳಿ ಶುರುವಾದರೂ ಬೆಳ್ತಂಗಡಿಯ ಒಕ್ಕಲಿಗ ಗೌಡರು ತಣ್ಣಗೆ ಇದ್ದಾರೆ. ಧರ್ಮಸ್ಥಳದ ತೋಟಗಳಲ್ಲಿ ಒಕ್ಕಲು ನಡೆಸುತ್ತಾ, ಅನ್ನ ಛತ್ರದಲ್ಲಿ ಊಟ ಬಡಿಸುತ್ತ, ದೇವಸ್ಥಾನದ ಮುಂದಿನ ಗೇಟಿನ ಬಳಿ ರಾಜನ ಕಾಲದ ಯೋಧರಂತೆ ದಿರಿಸು ಧರಿಸಿ ಪಾರೆ (ಪಹರೆ) ಕಾಯುತ್ತಾ ಗೌಡರು ಸೌಜನ್ಯಾ ಎಂಬ ಹೆಣ್ಣು ಮಗಳು ತಮ್ಮ ಜಾತಿಯವರು ಎಂಬ ‘ ಹೆಮ್ಮೆ’ ಮಾತ್ರ ಪಟ್ಟುಕೊಂಡು ನೆಮ್ಮದಿಯಾಗಿದ್ದಾರೆ !

ಒಕ್ಕಲಿಗರಲ್ಲಿ ಒಂದಷ್ಟು ದುಡ್ಡು ಕಾಸು ಇದ್ದು ಸ್ವಾಭಿಮಾನದಿಂದ ಬದುಕಬೇಕಾದವರು ಯಾವುದೋ ರಾಜಕೀಯ ಪಕ್ಷದ ಬ್ಯಾನರಿನ ಕೆಳಗೆ ತಮ್ಮ ಕತ್ತು ಮತ್ತು ಮತ್ತೊಂದನ್ನು ಸಿಕ್ಕಿಹಾಕಿಸಿಕೊಂಡಿದ್ದಾರೆ. ಹೋರಾಟಕ್ಕೆ ವ್ಯಗ್ರವಾಗಿ ಧುಮುಕಬೇಕಾದ ಒಕ್ಕಲಿಗ ಗೌಡರ ಯುವಕರ ಕತ್ತಲ್ಲಿ ಶಾಲು, ಅದರ ಹಿಡಿ ಹರೀಶಣ್ಣನ ಕೈಲಿ ! ಕೆಲವರ ಜುಟ್ಟು ಗ್ರಾಮ ಪಂಚಾಯತ್ ಇತ್ಯಾದಿ ಹಲವು ಚುನಾವಣೆಯ ನೆಪದಲ್ಲಿ ಬಂಧಿ. ಮತ್ತೇನು ಹೇಳಬೇಕು ಹೇಳಿ ? ದಲಿತರು ಕೂಡಾ ಕರಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರು ಸಣ್ಣ ಪುಟ್ಟ ಕೆಲ್ಸ ಮಾಡುತ್ತಾ ಇರುವವರು. ಹೆಚ್ಚಿನ ಜನ ಕೂಲಿ ಕೆಲ್ಸಕ್ಕೆ ಹೋಗುವವರು. ಅವರೂ ದಿನದ ಕೂಲಿ ಬಿಟ್ಟು ಮೊನ್ನೆ ತಮ್ಮ ಜನಪರ ಧ್ವನಿ ಮೊಳಗಿಸಿದರು. ಆದ್ರೆ ಗೌಡರು, ಅದರಲ್ಲೂ ಸೌಜನ್ಯ ಊರಿನ, ಬೆಳ್ತಂಗಡಿ ತಾಲೂಕಿನ ಒಕ್ಕಲಿಗ ಗೌಡರು ಮಾತ್ರ ನಿರುಮ್ಮಲ !!

ಇವತ್ತು ಬೆಳ್ತಂಗಡಿ ತಾಲೂಕಿನ ಒಕ್ಕಲಿಗ ಮತ್ತು ಗೌಡ ಸಂಘ ಮಹೇಶ್ ಶೆಟ್ಟಿ ತಿಮರೋಡಿ ಅವರ ಹೆಜ್ಜೆಗೆ ಹೆಜ್ಜೆ ಹಾಕಿ ಅವರ ಎಡ ಬಲಗಳಲ್ಲಿ ನಿಂತು ಮುಂದೆ ನಡೆಯಬೇಕಿತ್ತು. ಪಕ್ಕದ ತಾಲೂಕಿನ ಕೆಲವು ಉತ್ಸಾಹಿ ಒಕ್ಕಲಿಗ ಸಂಘಗಳು ತಮ್ಮ ಕೈಲಾದ ಹೋರಾಟಗಳನ್ನು ರೂಪಿಸಿವೆ. ಇತರ ಹೋರಾಟಗಳಿಗೆ ಜನಬೆಂಬಲ ಕ್ರೋಡಿಕರಿಸುವಲ್ಲಿ ತಮ್ಮ ಪ್ರಯತ್ನ ಮಾಡಿವೆ. ಬೆಳ್ತಂಗಡಿ ತಾಲೂಕಿನಲ್ಲಿ ಇದ್ಯಾವುದೂ ಕಾಣಿಸುತ್ತಿಲ್ಲ. ಕಾರಣ ನಾಯಕರು ಎನಿಸಿಕೊಂಡವರ ಭೂಪತಿಗಳ ಕಡೆಗಿನ ದಾಸ್ಯ !! ರಾಜ್ಯಾದ್ಯಂತ ಸೌಜನ್ಯ ಪ್ರಕರಣ ಸಂಬಂಧ ಜಾತಿ ಧರ್ಮಗಳ ತಡೆ, ‘ ತಡಮೆ’ ಗಳನ್ನು ಮೀರಿ ಪ್ರತಿಭಟನೆ ಹೋರಾಟಗಳು ನಿರಂತರವಾಗಿ ನಡೆಯುತ್ತಿದ್ದರೂ ಬೆಳ್ತಂಗಡಿಯ ಗೌಡರ ಯಾನೇ ಒಕ್ಕಲಿಗರ ಸಂಘದವರು ಮಾತ್ರ ಈ ಬಗ್ಗೆ ಹೋರಾಟ ಬಿಡಿ, ಕನಿಷ್ಟ ಬಹಿರಂಗವಾಗಿ ಗಟ್ಟಿ ಹೇಳಿಕೆಗಳನ್ನೂ ಸಹಾ ಕೊಡಲು ಮುಂದಾಗದಿರುವುದನ್ನು ನೋಡಿದರೆ ಏನು ಹೇಳಬೇಕೆಂದು ತೋಚದ ಪರಿಸ್ಥಿತಿ. ಇಡೀ ರಾಜ್ಯಕ್ಕೆ ರಾಜ್ಯವೇ ಎಚ್ಚೆತ್ತು ಕೊಂಡರೂ ಬೆಳ್ತಂಗಡಿಯ ಗೌಡರ ಯಾನೇ ಒಕ್ಕಲಿಗರ ಸಂಘದವರು ತಮ್ಮದೇ ಮನೆ ಮಗಳು ಸೌಜನ್ಯಳ ವಿಚಾರದಲ್ಲಿ ಮಾತ್ರ ಇನ್ನೂ ಗೊರಕೆ ಹೊಡೆಯುತ್ತಿದ್ದಾರೇನೋ ಎಂದು ಭಾಸವಾಗುತ್ತಿದೆಯೆಂದು ನಾಡಿನಾದ್ಯಂತ ಮಾತುಗಳು ಕೇಳಿ ಬರುತ್ತಿವೆ.

ನಿಜಕ್ಕೂ ಒಕ್ಕಲಿಗ ಗೌಡರಿಗೆ ತಮ್ಮ ಶಕ್ತಿಯ ಅರಿವಿಲ್ಲ ಅಂತಲೇ ಹೇಳಬೇಕಾಗುತ್ತದೆ. ಇದು ಕೇವಲ ನಾಯಕರ ಬಗ್ಗೆ ನಾವು ಹೇಳುತ್ತಿಲ್ಲ. ಒಟ್ಟಾರೆ ಒಗ್ಗಟ್ಟಿಲ್ಲದ ತಮ್ಮ ಪಾಡಿಗೆ ತಾವು, ತಮ್ಮದೇ ಲೋಕದಲ್ಲಿ ಇರುವ ಸಮಾಜ ಒಂದಿದ್ದರೆ ಅದು ಬೆಳ್ತಂಗಡಿಯ ಒಕ್ಕಲಿಗ ಸಮಾಜ. ಇವತ್ತು ಬೆಳ್ತಂಗಡಿಯಲ್ಲಿ ಒಕ್ಕಲಿಗ ಗೌಡರು ಬೈರಾಸ್ ಕೊಡವಿ ಎದ್ದು ನಿಂತರೆ, ನಾಳೆ ದಿನ ಧರ್ಮಸ್ಥಳದ ಛತ್ರದಲ್ಲಿ ಅನ್ನ ಬಡಿಸಲು ಜನ ಸಿಗುವುದಿಲ್ಲ. ಇಡೀ ಧರ್ಮಸ್ಥಳದ ಹಲವು ಸಂಸ್ಥೆಗಳಲ್ಲಿ ಮುಕ್ಕಾಲು ಭಾಗ ಇರುವವರು ಒಕ್ಕಲಿಗ ಗೌಡರು. ಅವರು ಸಣ್ಣ ಹುದ್ದೆಯಲ್ಲಿರಬಹುದು: ಆದರೆ ಅಗಾಧ ಪರಿಶ್ರಮದ ಕೆಲಸ ಮಾಡಬಲ್ಲ, ರಾತ್ರಿ ಹಗಲು ಒಂದು ಮಾಡಿ ಹಿಡಿದ ಕೆಲಸ ಮುಗಿಸಬಲ್ಲ, ಬರುತ್ತಿರುವುದು ಮಳೆಯಾ ಅಥವಾ ಮೈಯ ಬೆವರಾ ಎಂದು ಕೂಡಾ ಅರಿವಿಗೆ ಬಾರದಂತೆ ಮೈ ಮುರಿದುಕೊಂಡು ಶ್ರಮ ಹಾಕಬಲ್ಲ ಶ್ರಮಜೀವಿಗಳು ಅವರು ಎಂಬುದರಲ್ಲಿ ಎರಡು ಮಾತಿಲ್ಲ. ಹೋರಾಟದ ಕಿಚ್ಚಿನ ಮನೋಭಾವ ಅವರಲ್ಲಿ ಹೆಚ್ಚಿನವರಲ್ಲಿ ಇವತ್ತು ಮಾಯ ಆಗಿರೋದು ದೊಡ್ಡ ದುರಂತವೇ ಸರಿ.

ಬೆಳ್ತಂಗಡಿ ತಾಲೂಕಿನ ಜನಪ್ರತಿನಿಧಿಗಳ ಆಯ್ಕೆಯಲ್ಲೂ ಬೆಳ್ತಂಗಡಿಯ ಗೌಡರು ಪ್ರಮುಖ ನಿರ್ಣಾಯಕರಾಗಿರುತ್ತಾರೆ. ಅದೇ ರೀತಿ ಪ್ರತಿಯೊಂದು ಕ್ಷೇತ್ರದಲ್ಲೂ ಗೌಡ ಸಮುದಾಯದವರು ಉನ್ನತ ಸ್ಥಾನಮಾನದಲ್ಲಿದ್ದಾರೆ. ಈ ಸಮುದಾಯದವರು ಈ ಮೊದಲೇ ಮನಸ್ಸು ಮಾಡಿರುತ್ತಿದ್ದರೆ ಸೌಜನ್ಯ ಪ್ರಕರಣದಲ್ಲಿ ಇಡೀ ರಾಜ್ಯಮಟ್ಟದ ಹೋರಾಟವನ್ನು ಬೆಳ್ತಂಗಡಿಯಲ್ಲಿ ಆಯೋಜಿಸುವ ಮೂಲಕ ತಮ್ಮ ತಾಕತ್ತು ಪ್ರದರ್ಶಿಸಿ ಸರ್ಕಾರ ಹಾಗೂ ಮುಂಡಾಸುಧಾರಿಗಳ ಚಳಿ ಬಿಡಿಸಿ ಪ್ರಕರಣ ಯಾವತ್ತೋ ಮುಗಿದು ಹೋಗುತ್ತಿತ್ತು. ಆ ಸಾಮರ್ಥ್ಯ ಬೆಳ್ತಂಗಡಿಯ ಗೌಡರ ಯಾನೆ ಒಕ್ಕಲಿಗರ ಸಂಘಕ್ಕಿದೆ. ಈ ಒಂದು ಸಣ್ಣ ಪ್ರಯತ್ನ ಈ ಹಿಂದೆಯೇ ನಡೆದಿರುತ್ತಿದ್ದರೆ ಯಾವಾಗಲೋ ಸೌಜನ್ಯ ಪ್ರಕರಣದಲ್ಲಿ ಎಷ್ಟೇ ದೊಡ್ಡ ಪ್ರಭಾವಿಗಳಿರುತ್ತಿದ್ದರೂ ಸಹಾ ಕಾನೂನಿನ ಕೋಳದಲ್ಲಿ ಬಿದ್ದು ಕುಣಿಕೆಗೆ ಜಗ್ಗಿ ಬೀಳುತ್ತಿದ್ದರು. ಅಥವಾ ಇತರ ಹೋರಾಟಗಾರ ಬೆಂಬಲಕ್ಕೆ ಹೆಜ್ಜೆಗೆ ಹೆಜ್ಜೆಯಾಗಿ ನಿಂತು ಹೋರಾಟಕ್ಕೆ ಮತ್ತಷ್ಟು ಶಕ್ತಿಯನ್ನು ತುಂಬಬಹುದಾಗಿತ್ತು. ಆದರೆ ಇದ್ಯಾವುದೂ ಕೂಡಾ ಇಲ್ಲಿ ನಡೆಯಲೇ ಇಲ್ಲ. ಹೀಗಾಗಿ ಗೌಡ ಸಮುದಾಯಗಳು ತಮ್ಮಲ್ಲಿ ಇರುವ ಈ ಎಲ್ಲಾ ಶಕ್ತಿ ಸಾಮರ್ಥ್ಯಗಳ ಬಗ್ಗೆ ಅರಿತುಕೊಳ್ಳದೆ ಇನ್ನೂ ಕೂಡ ಮೌನವಹಿಸಿ ಸುಮ್ಮನೆ ಕುಳಿತುಕೊಂಡಿರುವುದೇಕೆ ಎಂಬುದು ಎಲ್ಲೆಡೆಯಿಂದ ಕೇಳಿ ಬರುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಈಗ ಏನು ಮಾಡಬೇಕು?

ಇನ್ನು ಕೂಡಾ ಸಮಯ ಮೀರಿಲ್ಲ. ತಕ್ಷಣ ದೊಡ್ಡ ಪ್ರಮಾಣದಲ್ಲಿ ಸೌಜನ್ಯ ಚಳವಳಿಗೆ ಧುಮುಕಲು ಬೇಕಿದೆ. ಆ ಇಚ್ಚಾಶಕ್ತಿ ಪ್ರದರ್ಶಿಸಬೇಕಿದೆ.

1) ದೊಡ್ಡ ಪ್ರಮಾಣದಲ್ಲಿ ಬೆಳ್ತಂಗಡಿಯಲ್ಲಿ ಅಥವಾ ಧರ್ಮಸ್ಥಳದಲ್ಲಿ ಒಕ್ಕಲಿಗ ನೇತೃತ್ವದ ಸರ್ವ ಜನಾಂಗದ ಸಮಾವೇಶ ನಡೆಸಬೇಕು.
2) ಅದಕ್ಕೆ ರಾಜ್ಯಮಟ್ಟದ ಒಕ್ಕಲಿಗ ಸಂಘದ ಅಧ್ಯಕ್ಷರು ಪದಾಧಿಕಾರಿಗಳನ್ನು ಕರೆಸಬೇಕು.
3) ರಾಜ್ಯ ಒಕ್ಕಲಿಗ ಸ್ವಾಮೀಜಿಯವರನ್ನು( ಅಡಿ ಚುಂಚನಗಿರಿ) ಸಮಾವೇಶಕ್ಕೆ ಆಹ್ವಾನಿಸಬೇಕು.
4) ರಾಜ್ಯದ ಆಯಕಟ್ಟಿನ ಮುಖಂಡರನ್ನು, ರಾಜಕೀಯ ನಾಯಕರನ್ನು ಆಹ್ವಾನಿಸಬೇಕು.
5) ಇತರ ಎಲ್ಲಾ ಜಿಲ್ಲೆಗಳ ಒಕ್ಕಲಿಗ ಸ್ವಾಮೀಜಿಗಳನ್ನು ಸಮಾವೇಶಕ್ಕೆ ಕರೆಸಿ ಅವರಿಗೆ ಎಲ್ಲರಿಗೂ ವಸ್ತು ಸ್ಥಿತಿಯನ್ನು ಖುದ್ದು ಧರ್ಮಸ್ಥಳದ ನೆಲದಲ್ಲೇ ನಿಂತು ವಿವರಿಸಬೇಕು.
6) ಎಲ್ಲಾ ವರ್ಗಗಳ, ಜಾತಿಗಳ ಮತ ಧರ್ಮಗಳ ಜನರನ್ನು ಬೆಂಬಲಕ್ಕೆ ಆಹ್ವಾನಿಸಬೇಕು.
7) ಸಂತ್ರಸ್ತ ಅಮ್ಮ ಕುಸುಮಾವತಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಿ ನೋಡಿ. ಜನರೆಂಬುದು ಸಾಗರವಾಗಿ ಬರದೆ ಹೋದರೆ ಕೇಳಿ.

ಅವತ್ತು ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಮತ್ತು ರೈತ ಚಳವಳಿಯ ನಾಯಕ ಕೆದಂಬಾಡಿ ರಾಮಯ್ಯಗೌಡರು ಸುಳ್ಯದಲ್ಲಿ, ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ ಶುರು ಮಾಡಿ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಮಾಡಿದ್ದರು. ಇದು ಇಡೀ ದೇಶದಲ್ಲಿ ನಡೆದ ಎಲ್ಲಾ ಹೋರಾಟಗಳಿಗಿಂತಲೂ 10 ವರ್ಷ ಮುಂಚೆಯೇ ನಡೆದ ಹೋರಾಟ ಎನ್ನಲಾಗುತ್ತಿದೆ. ಇಂತಹ ಒಕ್ಕಲು ಗೌಡರು ಸಾಂಗಿಕ ಹೋರಾಟಕ್ಕೆ ಇಳಿದು ಸೌಜನ್ಯಳಿಗೆ ನ್ಯಾಯ ಕೊಡಿಸಲು ಬದ್ಧರಾಗಬೇಕು. ಆ ಕ್ಷಣಕ್ಕಾಗಿ ಅಮ್ಮ ಕುಸುಮಾವತಿ ಕಣ್ಣೀರ ಜತೆ ಕಾಯುತ್ತಿದ್ದಾರೆ.

Leave A Reply

Your email address will not be published.