ಬೆಳ್ತಂಗಡಿ ಚಲೋ: ರೋಷದ ಜತೆಗೆ ರೋಚಕ ಸಾಹಿತ್ಯ: ನಿಮ್ಮನ್ನು ದೂರ ಇಟ್ಟು, ಮಕ್ಕಳು ಮಾಡದೆ ಇದ್ರೆ ನಿಮ್ ಪರಿಸ್ಥಿತಿ ಏನಾಗಬಹುದು ಗಂಡಸರೇ? | ಬಡವನ ಹೆಂಡತಿ ಚಲುವಿ ಕಂಡ್ರೆ ಬಡ್ಡಿ ಕೊಡ್ತಾರೋ !

ಬೆಳ್ತಂಗಡಿ ಜಾಥಾ: ರೋಷದ ಜತೆಗೆ ಮೂಡಿ ನಿಂತ ರೋಚಕ ಸಾಹಬೆಳ್ತಂಗಡಿಯಲ್ಲಿ ಇವತ್ತು ಜನಪರ ಸಂಘಟನೆಗಳ ರಾಜ್ಯಮಟ್ಟದ ಸಭೆ ಯಶಸ್ವಿಯಾಗಿ ನಡೆಯಿತು. ರಾಜ್ಯದ ವಿವಿಧ ಪ್ರಗತಿಪರ 100 ಮಿಕ್ಕಿದ ಸಂಘಟನೆಗಳು ಊರು ಊರುಗಳಿಂದ ಬೆಳಂಬೆಳಗ್ಗೆ ಬೆಳ್ತಂಗಡಿಯನ್ನು ಸೇರಿಕೊಂಡಿದ್ದರು. ಉತ್ತರದ ಜಿಲ್ಲೆಯಾದ ಬೀದರ್ ಗುಲ್ಬರ್ಗದಿಂದ ಹೊರಟು ದಕ್ಷಿಣದ ಬೆಂಗಳೂರು, ಮೈಸೂರು, ಮಂಡ್ಯ ಇತ್ಯಾದಿ ಪ್ರದೇಶಗಳಿಂದ ಪ್ರಗತಿಪರ ಸಂಘಟನೆಗಳು ಚಿಂತಕರು ವಿಚಾರವಾದಿಗಳು ಹೀಗೆ ಒಟ್ಟಾರೆ ಯಶಸ್ವಿ ಪ್ರಗತಿಪರ ಸಮಾವೇಶ ಇಂದು ಬೆಳ್ತಂಗಡಿಯಲ್ಲಿ ನಡೆದಿದೆ.

ಮಹೇಶ್ ಶೆಟ್ಟಿ ತಿಮರೋಡಿಯವರ ಜೊತೆಗೆ ಆಗಮಿಸಿದ ಸೌಜನ್ಯ ತಾಯಿ ಭಾಷಣ ಆರಂಭಿಸಿ ತನ್ನ ಮಗಳಿಗೆ ಆದ ದೌರ್ಜನ್ಯದ ಬಗ್ಗೆ ವಿವರಿಸುತ್ತಿದ್ದ ವೇಳೆ ಭಾವುಕರಾದ ದುಃಖ ತಡೆಯಲಾಗದೆ ಭಾಷಣವನ್ನು ಅರ್ಧಕ್ಕೆ ನಿಲ್ಲಸಿದರು. ನಂತರ ಮಾತನಾಡಿದ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡುತ್ತಾ ಪದ್ಮಲತಾ ಕೊಲೆಯಿಂದ ಹಿಡಿದು ಸೌಜನ್ಯ ಕೊಲೆ ಪ್ರಕರಣದವರೆಗೆ ನಡೆದ ಧರ್ಮಸ್ಥಳದ 465 ದೌರ್ಜನ್ಯದ ವಿರುದ್ಧ ಮಿಡಿಯುವ ಮನಸ್ಸುಗಳು ಇಡೀ ದೇಶಾದ್ಯಂತ ಈ ರೀತಿಯ ಹೋರಾಟಕ್ಕೆ ಮುನ್ನುಗ್ಗುತ್ತಿವೆ. ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗದೇ ಇದ್ದರೆ ಈ ಹೋರಾಟ ದೇಶಾದ್ಯಂತ ಇನ್ನಷ್ಟು ತೀವ್ರಗೊಳ್ಳಲಿದೆ ಎಂದರು.

ಈ ಮಹಾಧರಣಿಯಲ್ಲಿ ಮಹಿಳೆಯರೇ ಪಾರುಪತ್ಯ ವಹಿಸಿದ್ದು, ಹೆಣ್ಣು ಮಕ್ಕಳ ಬಗ್ಗೆ ಇರುವ ಕಾಳಜಿಯನ್ನು ಎತ್ತಿ ತೋರಿಸುವಂತೆ ಮಾಡಿದ್ದು, ಎಲ್ಲರ ಗಮನ ಸೆಳೆದಿರುವುದಂತು ಖಂಡಿತ. ಅನೇಕ ಚಿಂತಕರು, ಸಾಹಿತಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದು, ತಮ್ಮ ವಿಚಾರಧಾರೆಗಳನ್ನು ಹಂಚಿಕೊಂಡಿದ್ದಾರೆ. ಕೆಲವು ಮಹಿಳಾ ಮಣಿಗಳು ರೋಚಕವಾಗಿ ಮಾತನಾಡಿದ್ದಾರೆ. ಆ ವ್ಯಗ್ರ, ರೋಚಕ ಮತ್ತು ಸ್ವಾರಸ್ಯಕರ ಅಂಶಗಳು ಇಲ್ಲಿವೆ.

ಸಬೀಹಾ ಭೂಮಿಗೌಡ ಹೇಳಿಕೆ:
ಗಂಡಸರೇ, ಒಂದು ಬಾರಿ ನಾವು ಮನಸ್ಸು ಮಾಡಿ ನಿಮ್ಮನ್ನು ದೂರ ಇಟ್ಟು, ಮಕ್ಕಳು ಮಾಡದೆ ಇದ್ರೆ ನಿಮ್ ಪರಿಸ್ಥಿತಿ ಏನಾಗಬಹುದು ಗಂಡಸರೆ? ನಮಗೆ ನಮ್ಮನ್ನು ಕಂಟ್ರೋಲ್ ಮಾಡ್ಕೊಳ್ಳೋದು ಗೊತ್ತು. ನೀವೇನು ಮಾಡ್ತೀರಿ ? ಎಂದು ವಿವಿ ವಿಶ್ರಾಂತ ಕುಲಪತಿ ಸಬೀಹಾ ಭೂಮಿಗೌಡ ಹೇಳಿದ್ದಾರೆ.
ಮೀನಾಕ್ಷಿ ಬಾಲ್ಯಾ:
ಎದ್ದೇಳು ಮಂಜುನಾಥ? ಇನ್ನು ಎದ್ದಿಳುವಲ್ಲೋ ? ಎಲ್ಲಿದ್ದಿಯೋ, ಇನ್ನೂ ನಿನ್ ಏನು ಮದ್ದು ಹಾಕಿ ಮಲಗಿಸಿಯಾರೋ? ಎಂದು ಮೀನಾಕ್ಷಿ ಬಾಳ್ಯಾ ಕೇಳಿದ್ದಾರೆ. ನಿನ್ನ ಕ್ಷೇತ್ರದಲ್ಲಿಯೇ ಅನ್ಯಾಯ ಆದ ಬಗ್ಗೆ ಸುದ್ದಿ ಆದರೂ, ನೀ ಇನ್ನೂ ಸುಮ್ನಿದ್ದೀಯಲ್ಲೋ ಎಂದು ಮಾರ್ಮಿಕವಾಗಿ ಹೇಳಿದರು.
400 ಕೊಲೆ ಮಾಡಿದವರಿಗೂ ಇಲ್ಲಿ ಏನೂ ಆಗಿಲ್ಲ. ದೇವರ ಮೇಲೆ ತಕರಾರಿಲ್ಲ. ದೇವರನ್ನು ಗುತ್ತಿಗೆ ಹಿಡಿದವರ ಮೇಲೆ ನಮ್ಮ ತಕರಾರು. ನಾವು ಕಮ್ಯುನಿಸ್ಟ್ ರೇ, ಆದ್ರೆ ನಾ ರೇಪಿಸ್ಟ್ ರು ಅಲ್ಲ. ಇಲಿ ತುಂಬಾ ಇರುತ್ತೆ, ಸಾವಿರಾರು ಇರುತ್ತೆ. ಆದ್ರೆ ಬೆಕ್ಕುಗಳು ಕೆಲವೇ ಕೆಲವು ಇರುತ್ತೆ. ನಾವು ಕಮ್ಯುನಿಸ್ಟ್ ಗಳು ಬೆಕ್ಕಿನ ಥರ ನಾವು. ಬೆಕ್ಕು ಥರ ನಾಲ್ಕೇ ಜನ ಇರೋದು. ಆದ್ರೂ ಬಿಡಲ್ಲ ಎಂದಿದ್ದಾರೆ ಕಮ್ಯುನಿಸ್ಟ್ ನಾಯಕಿ ಮೀನಾಕ್ಷಿ ಬಾಳ್ಯಾ.
“ತುಮಾರ ದಿಮಕ್ ಮೆ ಕಾಲಾ ಹೋಗಾಯಾ” ಎಂಬ ಮಾತನ್ನು ಕೂಡಾ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಅಷ್ಟೇ ಅಲ್ಲ ಬುದ್ಧಿವಂತರ ಜಿಲ್ಲೆ ದಕ್ಷಿಣ ಕನ್ನಡವನ್ನು ಹೊಗಳುತ್ತಾ ಇಲ್ಲಿರುವ ಕೆಲವು ನ್ಯೂನತೆಗಳನ್ನು ಎತ್ತಿ ಹಿಡಿದಿದ್ದಾರೆ. ” ನೀವು ಎಲ್ಲದರಲ್ಲೂ ಫಸ್ಟ್, ಎಸ್ ಎಸ್ ಎಲ್ ಸಿ ಫಸ್ಟ್, ಪಿಯುಸಿ ಫಸ್ಟ್ , ಎಲ್ಲದರಲ್ಲಿ ಬುದ್ದಿವಂತರು ನೀವು. ಆದ್ರೆ ನಾವು ಕಲಬುರ್ಗಿಯವರು ಎಲ್ಲದರಲ್ಲೂ ಲಾಸ್ಟ್ ಇದ್ದೇವೆ. ಆದ್ರೆ ಆವಾಜ್ ಹಾಕೋದ್ರಲ್ಲಿ ನಾವೇ ಫಸ್ಟ್. ನೀವು ಹೆದರಿ ಕೊಳ್ತೀರಿ. ಇನ್ನಾದರೂ ಹೆದರಿಕೊಳ್ಳದೆ ಧರ್ಮಸ್ಥಳದ ಭೂಪತಿಗಳ ವಿರುದ್ಧ ಹೋರಾಡಿ” ಎಂದು ಈ ಮಹಿಳಾ ಹೋರಾಟಗಾರ್ತಿ ಚಾಟಿ ಬೀಸಿದರು.

ಕಾಮ್ರೇಡ್ ನೀಲಾ :
ಕಡಕೊಳು ಮಡಿವಾಳಪ್ಪ ಹೇಳಿದ ಹಾಡನ್ನು ಹಾಡಿದರು. ‘ಬಡವನ ಹೆಂಡತಿ ಚಲುವಿ ಕಂಡ್ರೆ ಬಡ್ಡಿ ಕೊಡ್ತಾರೋ ‘ ಹೋತಿನಂತೆ ಜೋತು ಕೊಂಡು ಅಲ್ಲೇ ಕುಂತಾರೋ ‘ ಎಂದು ಹಾಡಿ ಸಭೆಯಲ್ಲಿ ಚಪ್ಪಾಳೆ ಗಿಟ್ಟಿಸಿಕೊಂಡರು. ಕಮ್ಯುನಿಸ್ಟ್ ಜನರು ಧರ್ಮವನ್ನು ಮುಂದೆ ಇಟ್ಟು ಹಿಂದೆ ಗುಪ್ತವಾಗಿ ಮಾತಾಡೊಲ್ಲ. ಕಮ್ಯುನಿಸ್ಟ್ ರು ಮುಂದೆ ಇದ್ದು ಮಾಡ್ತಾರೆ. ಕರಬುರುಗಿಯಿಂದ ಇಲ್ಲಿಗೆ ಬಂದಿದ್ದೇನೆ. ಕರಬುರುಗಿಯಲ್ಲಿ ತಪ್ಪಾದರೆ ತನಿಖೆ ಆಗತ್ತೆ. ಇಲ್ಲಿ ತಮ್ಮ ಸುಂದರ ಊರಿನಲ್ಲಿ ಯಾಕೆ ಆಗಲ್ಲ ? ಎಂದು ಅವರು ಅವರು ಊರವರನ್ನು ಕೇಳಿದ್ದಾರೆ.
“ಯಾರೂ ಹೆದರದೆ ಮುಚ್ಚುಮರೆಯಿಲ್ಲದೆ ಪ್ರತಿಭಟನೆ ಮಾಡಬೇಕು. ಧರ್ಮಸ್ಥಳದ ಕೇಂದ್ರ ಬಿಂದುವಲ್ಲಿ ಒಂದು ಜಾದೂ ಇದೆ. ಅಲ್ಲಿ ಎಲ್ಲವೂ ಸಡನ್ನಾಗಿ ಮಾಡುವ ಜಾದೂ ಇದೆ ಇಲ್ಲಿರುವ ಜಾಮೀನುದಾರರ ಬಳಿ. ಧರ್ಮದ ಹೆಸರಿನಲ್ಲಿ ಅಪರಾಧಿಗಳು ತಪ್ಪಿಸಿಕೊಳ್ಳಲು ಬಿಡಲ್ಲ” ಎಂದು ಕಾಮ್ರೇಡ್ ನೀಲಾ ಉಗ್ರವಾಗಿ ಮಾತಾಡಿದ್ದಾರೆ.

ಧಾರವಾಡದ ಮಹಿಳಾ ಹೋರಾಟಗಾರ್ತಿ ಶಾರದಾ ರಾವಡೆ:
ಇದೇ ವೇದಿಕೆಯಲ್ಲಿ ಮಾತನಾಡಿದ ಧಾರವಾಡದ ಮಹಿಳಾ ಹೋರಾಟಗಾರ್ತಿ ಶಾರದಾ ರಾವಡೆ, ರಾಜ್ಯಾದ್ಯಂತ ಇರುವ ಧರ್ಮಸ್ಥಳ ಸ್ವಸಹಾಯ ಸಂಘಗಳಲ್ಲಿ ಅತೀ ಹೆಚ್ಚು ಹೊಲೆಯರೇ ಇದ್ದು ಈ ಸ್ವ ಸಹಾಯ ಸಂಘಗಳು ನೀಡುವ ಸಾಲಗಳಿಗೆ ಅತ್ಯಧಿಕ ಬಡ್ಡಿಯನ್ನು ವಿಧಿಸಲಾಗುತ್ತಿದೆ. ಹೀಗಾಗಿ ಸಾಲವನ್ನು ವಸೂಲಾತಿ ಮಾಡಲು ಧರ್ಮಸ್ಥಳದವರ ಹಿಂಸೆ ಕೊಡುತ್ತಾರೆ. ಕಿರುಕುಳಗಳಿಂದಾಗಿ ರಾಜ್ಯಾದ್ಯಂತ ಅದೆಷ್ಟೋ ಬಡ ಹೆಣ್ಣಮಕ್ಕಳಲ್ಲಿ ಕೆಲವರು ಇದ್ದಕ್ಕಿದ್ದಂತೆ ಕಾಣೆಯಾದರೆ, ಇನ್ನು ಕೆಲವು ಬಡ ಹೆಣ್ಣು ಮಕ್ಕಳು ಆತ್ಮ ಹತ್ಯೆ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಸೌಜನ್ಯ ಪ್ರಕರಣದ ಜೊತೆಗೆ, ಧರ್ಮಸ್ಥಳ ಸ್ವ ಸಹಾಯ ಸಂಘಗಳಲ್ಲಿ ಅಧಿಕ ಬಡ್ಡಿ ವಿಧಿಸುತ್ತಿರುವ ಮತ್ತು ಈ ಸ್ವಸಹಾಯ ಸಂಘಗಳಲ್ಲಿ ಸಾಲ ಪಡೆದುಕೊಂಡ ಬಡ ಹೆಣ್ಣು ಮಕ್ಕಳು ನಾಪತ್ತೆಯಾಗುವ ಮತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆಯೂ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.

ಉಡುಪಿ ದಲಿತ ಮುಖಂಡ ಜಯಂತ್ ಮಲ್ಪೆ:
ಇದೇ ವೇಳೆ ಮಾತನಾಡಿದ ಉಡುಪಿ ದಲಿತ ಮುಖಂಡ ಜಯಂತ್ ಮಲ್ಪೆ ದಲಿತರ ಜಾಗವನ್ನು ಕಬಳಿಸಿಕೊಂಡು ವಿವಿಧ ಸಂಸ್ಥೆಗಳನ್ನು ನಡೆಸುವ ಧರ್ಮಸ್ಥಳದ ಧರ್ಮ ರಾಜಕಾರಣಿ ತನ್ನ ಸಂಸ್ಥೆ ಯಲ್ಲಿ ಮಾತ್ರ ದಲಿತರಿಗೆ ಕಸ ಗುಡಿಸುವ ಕೆಲಸವನ್ನಲ್ಲದೆ ಬೇರೆ ಯಾವ ಕೆಲಸವನ್ನೂ ನೀಡುವುದಿಲ್ಲ. ಇಲ್ಲಿನ ಅನ್ಯಾಯ ಅನಾಚಾರ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಇಡೀ ದಲಿತ ಸಮೂಹ ಧರ್ಮಸ್ಥಳ ಬೀಡಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜೊತೆಗೆ ಹಲವು ಮಂದಿ ಸಾಹಿತಿಗಳು ರಂಗಕರ್ಮಿಗಳು ಸಮಾರಂಭಕ್ಕೆ ಅಂದ ತಂದಿದ್ದಾರೆ. ಈ ನಿಟ್ಟಿನಲ್ಲಿ ಇವತ್ತು ಸಮಾರಂಭಕ್ಕೆ ಬಂದ ಕೆಲವು ಪ್ರಗತಿಪರ ಸಾಹಿತಿಗಳು ಮಣಿಗಳು ರೋಚಕವಾಗಿ ಮಾತನಾಡಿದ್ದು, ಅವರುಗಳ ಮಾತಿನ ಧಾಟಿಗೆ ಸಭೆ ಉಘೇ ಎಂದಿತು.

Leave A Reply

Your email address will not be published.