ಗ್ರಾಮ ಪಂಚಾಯತ್‌ಗಳ ಗ್ರಂಥಾಲಯಗಳ ಗ್ರಂಥಪಾಲಕರಿಗೆ ವೇತನ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ
gramapanchayath salary hike
ಬೆಂಗಳೂರು: ಗ್ರಾಮ ಪಂಚಾಯತ್ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಮಾಸಿಕ ಕನಿಷ್ಠ ಮೂಲವೇತನ ನಿಗದಿಪಡಿಸಿ, ಅವರ ಮಾಸಿಕ ವೇತನವನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಕಳೆದ ಜು.27 ರಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಗ್ರಂಥಾಲಯಗಳ ಗ್ರಂಥಪಾಲಕರ ಸಂಘದ ಪ್ರತಿನಿಧಿಗಳು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ತಮ್ಮ ಹಲವಾರು ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಬೇಡಿಕೆಗಳಲ್ಲಿ ಪ್ರಮುಖವಾಗಿ ವೇತನ ಪರಿಷ್ಕರಣೆಯ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಇದೀಗ ರಾಜ್ಯದ ಎಲ್ಲಾ ಪಟ್ಟಣ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಗಳಲ್ಲಿ ಗ್ರಂಥಪಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಕನಿಷ್ಠ ವೇತನ 15,196 ರೂಪಾಯಿ ನಿಗದಿಪಡಿಸಲಾಗಿದೆ.
ಗ್ರಂಥಾಲಯಗಳನ್ನು ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವನ್ನಾಗಿ ಬದಲಿಸಲಾಗಿದೆ. ಕೆಲಸದ ಅವಧಿಯನ್ನು ಎರಡು ಗಂಟೆ ಹೆಚ್ಚಳ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳು “ಅರಿವು ಕೇಂದ್ರ” ಗಳಾಗಿ ಕಾರ್ಯ ನಿರ್ವಹಿಸಲು ಗ್ರಂಥಪಾಲಕರ ಕೆಲಸದ ಸಮಯವನ್ನು ಹೆಚ್ಚಿಸಿ ಹೆಚ್ಚಿದ ಗಂಟೆಗಳು ಹಾಗೂ ವಿಭಜಿತ ಸಮಯವನ್ನು ಗಮನದಲ್ಲಿರಿಸಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಕನಿಷ್ಠ ಮಾಸಿಕ ಮೂಲ ವೇತನವನ್ನು ನಿಗದಿಪಡಿಸಿ ಮಹತ್ವಾಕಾಂಕ್ಷಿ ಆದೇಶವನ್ನು ಹೊರಡಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
Comments are closed.