ಸವಣೂರು : ತೆಂಗಿನಕಾಯಿ ಕೀಳುವಾಗ ತೆಂಗಿನ ಮರದಿಂದ ಬಿದ್ದು ಮಹಿಳೆ ಮೃತ್ಯು

 

Dakshina Kannada news: ಸವಣೂರು : ತೆಂಗಿನ ಮರ ಹತ್ತಿ ತೆಂಗಿನಕಾಯಿ ಕೀಳುವ ಕಾಯಕದಲ್ಲಿ ನಿರತರಾಗಿದ್ದ ಸುಚಿತ್ರ (30) ರವರು ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಘಟನೆ ಕಡಬ ತಾಲೂಕಿನ ಪುಣ್ಚಪ್ಪಾಡಿ ಗ್ರಾಮದ ಬೊಳ್ಳಾಜೆಯಲ್ಲಿ  ನಡೆದಿದೆ (Dakshina Kannada news).

ಪುಣ್ಚಪ್ಪಾಡಿ ಗ್ರಾಮದ ಬೊಳ್ಳಾಜೆ ನಿವಾಸಿ ದೇವಪ್ಪ ಗೌಡ ಅವರ ಪುತ್ರ ಪ್ರಮೋದ್ ಬೊಳ್ಳಾಜೆಯವರ ಪತ್ನಿ ಸುಚಿತ್ರಾರವರು ಕಳೆದ 5 ವರ್ಷಗಳಿಂದ ತೆಂಗಿನ ಮರ ಹತ್ತುವ ಸಲಕರಣೆಯೊಂದಿಗೆ ತೆಂಗಿನ ಮರ ಹತ್ತಿ ತೆಂಗಿನಕಾಯಿ ಕೀಳುವ ಕೆಲಸ ಮಾಡುತ್ತಿದ್ದರು.

ಜು.9 ರಂದು ಸುಚಿತ್ರಾ ಅವರು ತಮ್ಮ ಮನೆಯ ಮುಂಭಾಗದಲ್ಲಿದ್ದ ತೆಂಗಿನ ಮರಕ್ಕೆ ಮರಹತ್ತುವ ಸಲಕರಣೆಯೊಂದಿಗೆ ಮರಕ್ಕೆ ಏರುತ್ತಿರುವಾಗ ಸಲಕರಣೆ ಸಹಿತ 40 ಅಡಿ ಆಳಕ್ಕೆ ಬಿದ್ದಿದ್ದಾರೆ.ಸುಚಿತ್ರಾ ಅವರ ಪತಿ ಪ್ರಮೋದ್ ಅವರು ತಕ್ಷಣ ಅವರ ಬಳಿ ಹೋಗಿ ನೋಡಿದಾಗ ಅವರ ಹಣೆಯ ಬಳಿ ಗಾಯವಾಗಿದ್ದು ಕೂಡಲೇ ಅವರ ಭಾವ ವೆಂಕಪ್ಪ ಗೌಡ ಅವರಿಗೆ ತಿಳಿಸಿ 108 ಅಂಬ್ಯುಲೆನ್ಸ್‌ನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದರಾದರೂ ಅದಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಓರ್ವ ಮಹಿಳೆಯಾಗಿ ತೆಂಗಿನ ಮರವೇರಿ ತೆಂಗಿನ ಕಾಯಿ ಕೊಯ್ಯುವ ಕಾಯಕದಲ್ಲಿ ಖ್ಯಾತಿ ಪಡೆದಿದ್ದರು.ಸುಚಿತ್ರ ರವರ ಈ ಕಾಯಕಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಹಲವಾರು ಸಂಘ-ಸಂಸ್ಥೆಗಳು ಗೌರವಿಸಿ ಅಭಿನಂದಿಸಿತ್ತು‌.

ಮೃತರು ಪತಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.ಮೃತರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿ ಮನೆಯವರನ್ನು ಸಂತೈಸಿದರು.

ಮೃತರ ಪತಿ ಪ್ರಮೋದ್ ಬೊಳ್ಳಾಜೆ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.