ಸುಳ್ಯ : ಹೀಗೊಂದು ಕಳ್ಳತನ : ದನದ ಕೆಚ್ಚಲಿನಿಂದ ಕದ್ದು ಹಾಲು ಕರೆದ ಮಹಿಳೆ ,ಪೊಲೀಸ್ ದೂರು
ಸುಳ್ಯ : ಇದೊಂದು ವಿಚಿತ್ರ ಕಳ್ಳತನ.ವಸ್ತು, ನಗ,ನಗದು ಕಳ್ಳತನ ಮಾಡುವ ಬಗ್ಗೆ ಕೇಳಿದ್ದೇವೆ.ಆದರೆ ಇಲ್ಲೊಂದು ವಿಚಿತ್ರ ಕಳ್ಳತನ ಪ್ರಕರಣ ನಡೆದಿದೆ.
ಅದುವೇ ದನದ ಕೆಚ್ಚಲಿನಿಂದ ಹಾಲು ಕಳ್ಳತನ. ಹೌದು ಸುಳ್ಯ ತಾಲೂಕಿನ ಪಂಜ ಸಮೀಪದ ಕರಿಕ್ಕಳ ಮನೆಯೊಂದರ ಹಟ್ಟಿಯಲ್ಲಿದ್ದ ದನದ ಕೆಚ್ಚಲಿನಿಂದ ಮಹಿಳೆಯೊಬ್ಬರು ಹಾಲು ಕದ್ದ ಘಟನೆ.
ಸುಳ್ಯ ತಾಲೂಕಿನ ಪಂಜ ಸಮೀಪದ ಕರಿಕ್ಕಳದ ಮನೆಯೊಂದರಲ್ಲಿ ಮಹಿಳೆಯೊಬ್ಬರು ಹಲವು ವರ್ಷಗಳಿಂದ ಹಾಲು ಕರೆಯುವ ಕೆಲಸದಲ್ಲಿದ್ದು ಅವರೇ ಡೈರಿಗೆ ಹಾಲು ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಆ ಮಹಿಳೆ 4-5 ದಿವಸ ರಜೆ ಮಾಡಿದ್ದರು. ಈ ಸಂದರ್ಭ ಮನೆಯವರು ಹಾಲು ಕರೆಯುವ ಕೆಲಸಕ್ಕೆ ಬೇರೊಂದು ವ್ಯಕ್ತಿಯನ್ನು ಕೆಲಸಕ್ಕೆ ನೇಮಿಸಿದ್ದರು ಎನ್ನಲಾಗಿದೆ.
ಆದರೆ ಹೊಸದಾಗಿ ನೇಮಕಗೊಂಡ ಹಾಲು ಕರೆಯುವವನಿಗೆ ಮಾಮೂಲಿನಷ್ಟು ಹಾಲು ಸಿಗುತ್ತಿರಲಿಲ್ಲ ಎನ್ನಲಾಗಿದೆ. ದಿಢೀರ್ ಕೆಲಸದಾಕೆ ಬಾರದೇ ಇದ್ದಾಗ ದನದ ಹಾಲು ಕಡಿಮೆಯಾಗಲು ಕಾರಣ ಏನು ?ಯಾಕೆ ಹೀಗಾಯಿತು ಎಂದು ತಲೆಕೆಡಿಸುವ ಸರದಿ ಮನೆ ಮಾಲಿಕರದ್ದು.
ಹೊಸದಾಗಿ ಕೆಲಸಕ್ಕೆ ಸೇರಿದವರು ದನದ ಕೆಚ್ಚಲು ಮಾಮೂಲಿನಂತೆ ಇರುವುದಿಲ್ಲ ಯಾರೋ ಹಾಲು ಕರೆಯುತ್ತಿದ್ದಾರೆ ಎಂದು ದನದ ಮಾಲಕರಲ್ಲಿ ದೂರಿಕೊಂಡಿದ್ದರು.
ಇದನ್ನು ಆಧರಿಸಿ ಮನೆಯವರು ಹಟ್ಟಿಗೆ ಹಾಕಿದ್ದ ಸಿ.ಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಪ್ರಾತಃ ಕಾಲ 4 – 5 ಗಂಟೆಗೆ ಮಹಿಳೆಯೊಬ್ಬರು ಬಂದು ದನದ ಕೆಚ್ಚಲಿನಿಂದ ಅರ್ಧ ಹಾಲು ಕರೆದು ಹೋಗುತ್ತಿರುವ ದೃಶ್ಯ ಸೆರೆಯಾಗಿರುವುದಾಗಿ ಕಂಡುಬಂದಿದೆ.
ಈ ಕುರಿತು ದನದ ಮಾಲೀಕರು ಹಾಲು ಕದಿಯುವ ವಿಚಾರದ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿದು ಬಂದಿದೆ.
Comments are closed.