ಸೌಜನ್ಯ ಗೌಡ ಪ್ರಕರಣ ಪ್ರಧಾನಿ ಅಂಗಳಕ್ಕೆ? ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿಸಲು ಸೌಜನ್ಯಾ ಕುಟುಂಬ ಆಗ್ರಹ !
soujanya-gowda-murder-case-family-members-will-meet-pm-question-arrised
ಧರ್ಮಸ್ಥಳ: ಕಾಮುಕರ ಅಟ್ಟಹಾಸಕ್ಕೆ ಬಲಿಯಾದ ಕಾಲೇಜು ವಿದ್ಯಾರ್ಥಿನಿ ಧರ್ಮಸ್ಥಳ ಗ್ರಾಮದ ಸೌಜನ್ಯ ಗೌಡ ಪ್ರಕರಣದಲ್ಲಿ ಸಿಬಿಐ ತನಿಖೆಯ ಬಳಿಕವೂ ಬಂಧಿತನಾಗಿದ್ದ ಆರೋಪಿ ಸಂತೋಷ್ ರಾವ್ ಪ್ರಕರಣದಿಂದ ದೋಷಮುಕ್ತಗೊಂಡ ಬೆನ್ನಲ್ಲೇ ಇಡೀ ದೇಶವೇ ನೈಜ ಆರೋಪಿ ಪತ್ತೆಗಾಗಿ ಮರು ತನಿಖೆಗೆ ಆಗ್ರಹಿಸಿ ಹೋರಾಟಕ್ಕಿಳಿದಿದೆ. ನ್ಯಾಯಾಲಯದ ತೀರ್ಪು ಬೆನ್ನಲ್ಲೇ ಆಕೆಯ ಹೆತ್ತವರು ಮತ್ತೊಮ್ಮೆ ಹೋರಾಟದ ಹಾದಿ ಹಿಡಿದಿದ್ದು ನ್ಯಾಯಕ್ಕಾಗಿ ಆರ್ತನಾದ ಬೆರೆತ ಕೂಗು ಹಾಕಿದ್ದಾರೆ. ಇದೀಗ ತನಿಖೆಯನ್ನು ಮತ್ತೆ ಮೊದಲಿನಿಂದ ಶುರು ಮಾಡಬೇಕು ಎನ್ನುವ ಮನವಿ ಮುಖ್ಯ ಮಂತ್ರಿಗಳನ್ನು ತಲುಪಿದೆ.
ಹೋರಾಟಕ್ಕೆ ಆರಂಭದಿಂದಲೂ ರಾಷ್ಟೀಯ ಹಿಂದೂ ಜಾಗರಣ ವೇದಿಕೆ ನಾಯಕ ಮಹೇಶ್ ಶೆಟ್ಟಿ ತಿಮರೋಡಿ, ಕಾರ್ಯಕರ್ತರು, ಸಾಹಿತಿಗಳು, ಸಾಮಾಜಿಕ ಹೋರಾಟಗಾರರು, ವಿದ್ಯಾರ್ಥಿ ಸಮೂಹ, ಸಂಘಟನೆಗಳು ಸಾಥ್ ನೀಡಿದ್ದು ಈ ಬಾರಿಯ ಹೋರಾಟಕ್ಕೆ ಮೈಸೂರಿನ ಒಡನಾಡಿ ಸಂಸ್ಥೆ ಬಲ ನೀಡಿದ್ದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ಬೆನ್ನಲ್ಲೇ, ನಿನ್ನೆ ಉಡುಪಿಯಲ್ಲಿ ಅಂಬೇಡ್ಕರ್ ಯುವಸೇನೆ ವತಿಯಿಂದ ಪ್ರತಿಭಟನೆ ನಡೆದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ನಡುವೆ ನಾಗರೀಕ ಸಮಾಜ ಜಿಲ್ಲೆಯ ರಾಜಕಾರಣಿಗಳ ಮೌನಕ್ಕೆ ಆಕ್ರೋಶಗೊಂಡ ಬೆನ್ನಲ್ಲೇ ಜಿಲ್ಲೆಯ ಯುವ ನಾಯಕ, ಯುವಕರ ನೆಚ್ಚಿನ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಮಾನ್ಯ ಮುಖ್ಯಮಂತ್ರಿಗಳಿಗೆ ಮರು ತನಿಖೆ ನಡೆಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದ್ದು ಹೋರಾಟಕ್ಕೆ ಮಟ್ಟಿಗೆ ಒಂದೊಳ್ಳೆ ಬೆಳವಣಿಗೆ. ಆದರೆ ಮೆಚ್ಚುಗೆಯ ಮಾತಿನ ಮಧ್ಯೆಯೇ ಆಕೆಯ ಕುಟುಂಬಿಕರು ಬೇಸರ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಆಕೆಯ ಹೆತ್ತವರು, ” ಮಾನ್ಯ ಶಾಸಕರು ಮನವಿ ಸಲ್ಲಿಸಿ ಆಗ್ರಹಿಸಿದ್ದು ನಮಗೆ ಧೈರ್ಯ ತುಂಬಿದೆ. ಆದರೆ ಮನವಿ ಸಲ್ಲಿಸುವ ವೇಳೆ ಜೊತೆಗಿದ್ದ ಕೆಲವರು ಈ ಹಿಂದೆ ಹೋರಾಟದ ವಿರುದ್ಧ ನಿಂತವರು. ಹೋರಾಟವನ್ನು ಹತ್ತಿಕ್ಕಲು ಸಂಚು ರೂಪಿಸಿದ್ದಲ್ಲದೇ, ಕೈ ಕಡಿಯುವ ಬೆದರಿಕೆ ಹಾಕಿದ್ದ ವ್ಯಕ್ತಿಗಳು ಈಗ ಸಜ್ಜನರಂತೆ ವರ್ತಿಸಿದ್ದಾರೆ. ಮಾನ್ಯ ಶಾಸಕರು ಹೋರಾಟದ ಬಗ್ಗೆ ಯಾವುದೇ ವಿಚಾರ ಚರ್ಚಿಸದೇ ನೇರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವುದರ ಹಿಂದಿನ ಉದ್ದೇಶ ಏನು ? ನಮ್ಮನ್ನು ಶಾಸಕರು ಸಂಪರ್ಕಿಸಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.
” ಅಲ್ಲದೇ, ಇಡೀ ರಾಜ್ಯದಲ್ಲಿ ಈಗಾಗಲೇ ಬೃಹತ್ ಹೋರಾಟ ಆರಂಭವಾಗಿದ್ದು, ಮಾನ್ಯ ಶಾಸಕರು ಮತ್ತೊಮ್ಮೆ ನಮ್ಮ (ಸೌಜನ್ಯಳ ಹೆತ್ತವರ) ಸಮ್ಮುಖದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಬೇಕು. ಆ ಮೂಲಕ ಹೋರಾಟಕ್ಕೆ ಸಂಪೂರ್ಣ ಬೆಂಬಲ ಹಾಗೂ ಮರು ತನಿಖೆಗೆ ಆಗ್ರಹಿಸಬೇಕು. ಜಿಲ್ಲೆಯಿಂದ ವಿಧಾನಸಭೆ, ಸಂಸತ್ ಭವನ ಪ್ರವೇಶಿಸಿರುವ ನಾಯಕರುಗಳು ಧ್ವನಿ ಎತ್ತದ ಸಂದರ್ಭದಲ್ಲಿ ಶಾಸಕರು ಹೋರಾಟಕ್ಕೆ ಬೆಂಬಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೋರಾಟ ದಿಲ್ಲಿ ತಲುಪಲಿದ್ದು ನಾಗರಿಕರ ನೆಚ್ಚಿನ ಶಾಸಕರು ಪ್ರಧಾನಿಗಳ ಬಳಿಗೂ ನಮ್ಮನ್ನು ಕರೆದುಕೊಂಡು ಹೋಗಬೇಕು” ಎನ್ನುವ ಆಗ್ರಹವನ್ನು ಸೌಜನ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವಿಠಲ ಗೌಡ ಹೇಳಿಕೆ ನೀಡಿದ್ದಾರೆ. ಒಂದಲ್ಲಾ ಒಂದು ದಿನ ಈ ಪ್ರಕರಣದ ಯಥಾವತ್ ವರದಿ ಪ್ರಧಾನಿಗಳನ್ನು ತಲುಪುತ್ತದೆ ಎನ್ನುವ ನಂಬಿಕೆಯಲ್ಲಿ ಕುಟುಂಬ ಕುಳಿತಿದೆ.