ರಣಭೀಕರ ಮಳೆಯಲ್ಲಿ ಹಳ್ಳಿಗರ ಕೋಲ; ಮಳೆಗಾಲ ಬರಗಾಲವಾದರೆ ಇವರಿಗೆ ಅದೇ ಆದಾಯದ ಮೂಲ
ಪ್ರತೀ ವರ್ಷದಂತೆ ಈ ವರ್ಷವೂ ಕೊಂಚ ತಡವಾದರೂ ಮಳೆರಾಯ ಭರ್ಜರಿ ಪ್ರವೇಶ ಪಡೆದುಕೊಂಡಿದ್ದಾನೆ. ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳ ಹಿಂದೆ ನಿರಂತರ ಮಳೆ ಸುರಿದು ಇಳೆಯನ್ನು ತಂಪೆರೆದ ಬೆನ್ನಲ್ಲೇ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿತ್ತು. ಆ ಬಳಿಕ ಮಳೆಯ ಪ್ರಮಾಣ ಕಡಿಮೆಗೊಂಡರೂ ಮತ್ತೊಮ್ಮೆ ಭರ್ಜರಿ ಮಳೆಯಾಗುವ ಮೂಲಕ ಮಳೆಗಾಲ ಆರಂಭಗೊಂಡಿದ್ದು ಹಲವೆಡೆಗಳಿಂದ ಸಮಸ್ಯೆ, ಪ್ರವಾಹ, ರಸ್ತೆ ಬಂದ್ ನಂತಹ ಸುದ್ದಿ ಕೇಳಿಬಂದಿದೆ. ಯಾರ ಜೀವಕ್ಕೂ ಹಾನಿಯಾಗದಿರಲಿ ಎನ್ನುವ ಪ್ರಾರ್ಥನೆಯ ನಡುವೆ ಗ್ರಾಮೀಣ ಭಾಗದಲ್ಲಿ ಪ್ರವಾಹವೇ ಆದಾಯದ ಮೂಲವಾಗಿರುವ ವೃತ್ತಿಯೊಂದು ಕಂಡುಬರುತ್ತಿದೆ. ಹೌದು ಇಲ್ಲಿನ ಜನಕ್ಕೆ, ಜೋರು ಮಳೆ ಬಂದರೆ, ನೆರೆ ಉಕ್ಕಿ ಹರಿದರೆ ಖುಷಿ. ಆಗ ಭರಪೂರ ಕೈತುಂಬಾ ಕೆಲಸ ಇವರಿಗೆ. ದೈನಂದಿನ ಆದಾಯ ಮಳೆಗಾಲದಲ್ಲಿ ಬಲು ಸುಲಭವಾದರೂ ಅದೊಂದು ಸಾಹಸದ ಕೆಲಸವಾಗಿದೆ.
ಮಳೆಗಾಲ ಹೇಗೆ ಆದಾಯದ ಮೂಲ
ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ಮೂಲಮಂತ್ರವಾಗಿದೆ. ಸಣ್ಣ ಸಣ್ಣ ಹಳ್ಳ, ತೊರೆಗಳು ತುಂಬಿ ಹರಿಯುವ ಮಧ್ಯೆ ಕೃಷಿ ತೋಟಗಳಲ್ಲಿ ನೀರು ತುಂಬಿ ತೆಂಗಿನಕಾಯಿ, ಅಡಿಕೆ ಎಲ್ಲವೂ ನೀರುಪಾಲಾಗುತ್ತದೆ. ಇಂತಹ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸುವ ಸಾಹಸಿಗರು ಎಲ್ಲಾ ಹಳ್ಳಿಗಳಲ್ಲೂ ಕಾಣಸಿಗುತ್ತಾರೆ. ಊರಿನ ಕಾಲು ಸೇತುವೆ ಅಥವಾ ಮುಳುಗು ಸೇತುವೆಯ ಬಳಿಯಲ್ಲಿ ಕೆಲವೊಂದು ಪರಿಕರಗಳನ್ನು ಹಿಡಿದು ನಿಲ್ಲುವ ಮಂದಿ ನೆರೆ ನೀರಿನಲ್ಲಿ ಬರುವ ತೆಂಗಿನಕಾಯಿ, ಅಡಿಕೆ ಹಾಗೂ ಗುಜರಿ ವಸ್ತುಗಳನ್ನು ಸಂಗ್ರಹಿಸುವ ಸಾಹಸ ಕಾರ್ಯದಲ್ಲಿ ತೊಡಗುತ್ತಾರೆ.
ಅಲ್ಲದೇ ಬಲೆ ಕೋರುವ, ಬಲೆ ಬೀಸುವ ಮೂಲಕ ಮೀನು ಹಿಡಿಯುವ ಸಮೂಹ ಕೂಡಾ ಕಂಡುಬರುತ್ತದೆ. ಪ್ರವಾಹಕ್ಕೆ ತುತ್ತಾದ ಪ್ರದೇಶದ ಕೃಷಿಕರ ನೋವಿನ ವ್ಯಥೆ, ಹಾನಿಗೊಳಗಾದ ಕೃಷಿ ಭೂಮಿಯ ಮಧ್ಯೆ ಪ್ರವಾಹವನ್ನೇ ಆದಾಯದ ಮೂಲವಾಗಿಸುವ ಗ್ರಾಮೀಣ ಮಂದಿಯ ಖುಷಿಗೆ ಈಗ ಪಾರವೇ ಇಲ್ಲದಾಗಿದೆ.
ನೋಡುಗರಿಗೆ ಸಾಹಸಮಯ ದೃಶ್ಯ
ಹಳ್ಳಿಯ ಸಣ್ಣ ಸೇತುವೆಯ ಮೇಲೆ ನಿಲ್ಲುವ ಇದೇ ಸಾಹಸಿಗರು ದಿನಕ್ಕೆ ಇನ್ನೂರರಿಂದ ಮುನ್ನೂರು ತೆಂಗಿನಕಾಯಿ ಹಿಡಿಯುತ್ತಾರೆ. ಉದ್ದನೆಯ ಬಿದಿರಿನ ತುದಿಯಲ್ಲಿ ಬುಟ್ಟಿಯಕಾರದ ಬಲೆ, ಬಟ್ಟೆ ಕಟ್ಟುವ ಮೂಲಕ ಪರಿಕರ ತಯಾರಿಸಿ ನೀರಿನಲ್ಲಿ ಕೊಚ್ಚಿಕೊಂಡು ಬರುವ ತೆಂಗಿನಕಾಯಿ, ಅಡಿಕೆಯನ್ನು ಸುಲಭವಾಗಿ ಹಿಡಿಯುತ್ತಾರೆ. ಕೆಲವರು ಛತ್ರಿ ಹಿಡಿದು, ರೈನ್ ಕೋಟ್ ಹಾಕಿಕೊಂಡಿದ್ದರೆ ಇನ್ನೂ ಹಲವರು ನೆನೆಯುತ್ತಲೇ ಕೆಲಸದಲ್ಲಿ ಬ್ಯುಸಿಯಾಗುತ್ತಾರೆ.
ಹೆಚ್ಚಿನದಾಗಿ ಹಲವಾರು ದಿಕ್ಕಿನಿಂದ ತೊರೆಗಳನ್ನು ಜೊತೆಯಾಗಿಸಿಕೊಂಡು ಬಂದು ಒಂದೆಡೆ ಸೇರುವ ನದಿ, ತೊರೆಗಳ ಮಧ್ಯೆ ಊರನ್ನು ಸಂಪರ್ಕಿಸಲು ನಿರ್ಮಿಸಲಾದ ಸೇತುವೆಯೇ ಸಾಹಸಕ್ಕೆ ವೇದಿಕೆಯಾಗಿದೆ. ಸೇತುವೆಯಲ್ಲಿ ನಿಂತು ಆದಾಯದ ಉತ್ಪನ್ನಗಳನ್ನು ಸಂಗ್ರಹ ಮಾಡುವ ಸಾಹಸ ದೃಶ್ಯವನ್ನು ಕಾಣಲು ಮಕ್ಕಳಿಂದ ಹಿಡಿದು ಹಿರಿಯರ ಉಪಸ್ಥಿತಿಯೂ ಕಂಡುಬರುತ್ತದೆ.
ಅಪಾಯ-ಬೇಕಿದೆ ಮುಂಜಾಗ್ರತೆ
ಗ್ರಾಮೀಣ ಭಾಗದಲ್ಲಿ ಭೀಕರ ಮಳೆಗೆ ಮರ ಮುರಿದು ಬೀಳುವುದು,ಧರೆ ಉರುಳುವುದು ಹೆಚ್ಚಾಗಿ ಮನೆಯ ಮೇಲೆಯೇ ಧರೆ ಉರುಳಿ ಸಾವು-ನೋವಿನ ಸುದ್ದಿ ಪ್ರತೀ ವರ್ಷವೂ ವರದಿಯಾಗುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಆದಾಯದ ಮೂಲ ಹುಡುಕುವ ಸಮೂಹ ಕೆಲವೊಂದು ಮುಂಜಾಗ್ರತಾ ಕ್ರಮ ವಹಿಸಿಕೊಳ್ಳಬೇಕು. ನೆರೆ ನೀರಿನ ಸರಸಕ್ಕೂ ಮುನ್ನ ಅಪಾಯದ ಅರಿವು, ಮುಂಜಾಗ್ರತೆ ಮೈಗೂಡಿಸಿಕೊಳ್ಳಬೇಕಾಗಿದೆ. ಮಳೆಗಾಲ ಬರಗಾಲವಾದರೂ ಇವರಿಗೆ ಅದೇ ಆದಾಯದ ಮೂಲ ಎನ್ನುವ ಹಳ್ಳಿಯ ಹಿರಿಯರೊಬ್ಬರ ಮಾತಿನ್ನು ಸಾಹಸ ದೃಶ್ಯದ ಚಿತ್ರ ಸಹಿತ ಇಲ್ಲಿ ವಿವರಿಸಲಾಗಿದೆ.