ಮಸಾಲೆ ದೋಸೆಯ ಜತೆ ಸಾಂಬಾರ್ ಕೊಟ್ಟಿಲ್ಲ ಎಂದು ಕೋರ್ಟ್ ಮೆಟ್ಟಲೇರಿದ ಗ್ರಾಹಕ: ತೀರ್ಪು ಕೇಳಿದ ಜನಕ್ಕೆ ಬೆರಗೋ ಬೆರಗು !
Masala dosa :ಬಿಸಿ ಬಿಸಿ ಹಬೆಯಾಡುವ ದೋಸೆಯೊಂದಿಗೆ ಸಾಂಬಾರ್ ಮತ್ತು ಚಟ್ನಿ ಬಡಿಸುವುದು, ಅದನ್ನು ಚಪ್ಪರಿಸಿ ತಿನ್ನುವುದು ಲೋಕಾ ರೂಢಿ. ಆದರೆ ಅಲ್ಲೊಂದು ರೆಸ್ಟೋರೆಂಟ್‌ನಲ್ಲಿ, ಅದ್ಯಾಕೋ ದೋಸೆಯೊಂದಿಗೆ ಸಾಂಬಾರ್ ನೀಡುವ ಬದಲು ಸೂಪ್ ಕೊಟ್ಟಿದ್ದಾರೆ. ಅಲ್ಲಿ ರೆಸ್ಟೊರೆಂಟ್ ನಲ್ಲಿ ಒಂದು ಸ್ಪೆಷಲ್ ಮಸಾಲಾ ದೋಸೆ(Masala dosa)ಯನ್ನು ಅಂದು ಗ್ರಾಹಕರಿಗೆ ಬಡಿಸಲಾಗಿತ್ತು. ಸೂಪ್ ಜತೆಗಿನ ಮಸಾಲ ದೋಸೆ ಸರ್ವ್ ಮಾಡಿದ ಕಾರಣಕ್ಕೆ ಈಗ 3,500 ರೂಪಾಯಿಗಳನ್ನು ದಂಡ ತೆರಬೇಕಾಗಿ ಬಂದಿದೆ.
ಬಿಹಾರದ ಬಕ್ಸಾರ್‌ನಲ್ಲಿರುವ ಗ್ರಾಹಕ ನ್ಯಾಯಾಲಯವು ರೆಸ್ಟೋರೆಂಟ್’ಗೆ ಈ ಭಾರೀ ಫೈನ್ ಹಾಕಿದೆ. ಈ ಪ್ರಕರಣ ನ್ಯಾಯಾಲಯಕ್ಕೆ ಬಂದ ನಂತರ 140 ರೂಪಾಯಿ ದೋಸೆಯ ವ್ಯಾಜ್ಯಕ್ಕೆ ರೆಸ್ಟೋರೆಂಟ್‌ಗೆ 3,500 ರೂ.ದಂಡ ವಿಧಿಸಲಾಗಿದೆ. ಅಲ್ಲದೆ ದಂಡ ಪಾವತಿಸಲು ರೆಸ್ಟೋರೆಂಟ್ ಗೆ 45 ದಿನಗಳ ಕಾಲಾವಕಾಶ ನೀಡಲಾಗಿದ್ದು, ಒಂದು ವೇಳೆ ಕಟ್ಟದಿದ್ದಲ್ಲಿ ದಂಡದ ಮೊತ್ತದ ಮೇಲೆ ಪ್ರತಿಶತ 8% ಬಡ್ಡಿಯನ್ನು ಕಟ್ಟಬೇಕು ಎಂದು ನ್ಯಾಯಾಲಯವು ಆದೇಶಿಸಿದೆ.
ಅಂದು ವಕೀಲ ಮನೀಶ್ ಗುಪ್ತಾ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಮಸಾಲಾ ದೋಸೆಯನ್ನು ಸವಿಯಲು ನಿರ್ಧರಿಸಿ ಬಿಹಾರದ ಬಕ್ಸಾರ್‌ನ ನಮಕ್ ರೆಸ್ಟೋರೆಂಟ್ ಗೆ ಹೋಗಿ 140 ರೂಪಾಯಿ ಮೌಲ್ಯದ ವಿಶೇಷ ಮಸಾಲೆ ದೋಸೆಯನ್ನು ಪ್ಯಾಕ್ ಮಾಡಿಸಿ ತಂದಿದ್ದರು. ಆದರೆ ಅಂದು ಮನೆಗೆ ತಂದು ಪಾರ್ಸೆಲ್ ಬಿಚ್ಚಿ ನೋಡಿದರೆ ದೋಸೆಯೊಂದಿಗೆ ಸಾಂಬಾರ್ ಇರಲಿಲ್ಲ. ಅತೃಪ್ತಗೊಂಡು ಅವರು ಸಾಂಬಾರ್ ಇರದ ಬಗ್ಗೆ ವಿಚಾರಿಸಲು ರೆಸ್ಟೋರೆಂಟ್ ಗೆ ಹೋಗಿದ್ದರು. ಆ ರೆಸ್ಟೊರೆಂಟ್ ನಲ್ಲಿ ರೆಸ್ಟೋರೆಂಟ್ ಮಾಲೀಕರು ಗ್ರಾಹಕ ಮನೀಶ್ ಗುಪ್ತಾಗೆ ಸರಿಯಾಗಿ ಪ್ರತಿಕ್ರಿಯಿಸಿಲ್ಲಾ. ಆಲ್ಲದೆ, ‘ ಏನು ನಿಮಗೆ 140 ರೂಪಾಯಿಗೆ ಇಡೀ ಹೋಟೆಲ್ ಬೇಕೇನು ? ‘ಎಂದು ರೆಸ್ಟೋರೆಂಟ್ ಮಾಲೀಕ ಪ್ರಶ್ನಿಸಿದ್ದಾನೆ.
ರೆಸ್ಟೋರೆಂಟ್ ಮಾಲೀಕನ ಬೇಜಾರಾಗಿ ಹೇಳಿಕೆಯಿಂದ ಬೇಸರಗೊಂಡ ಮನೀಶ್ ರೆಸ್ಟೋರೆಂಟ್ ಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ. ಆದರೂ ಮಾಲೀಕರಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ತದನಂತರ, 11 ತಿಂಗಳ ಬಳಿಕ, ಗ್ರಾಹಕ ಆಯೋಗದ ಅಧ್ಯಕ್ಷ ವೇದ್ ಪ್ರಕಾಶ್ ಸಿಂಗ್ ಮತ್ತು ಸದಸ್ಯ ವರುಣ್ ಕುಮಾರ್ ಅವರ ವಿಭಾಗೀಯ ಪೀಠವು ರೆಸ್ಟೋರೆಂಟ್ ಮಾಲೀಕನನ್ನು ತಪ್ಪಿತಸ್ಥ ಘೋಷಿಸಿದೆ. ಅಲ್ಲದೆ ಪರಿಹಾರವಾಗಿ 3,500 ರೂ ದಂಡ ವಿಧಿಸಿದೆ.
ದಂಡ ವಿಧಿಸಿದ ಪೀಠವು ಅರ್ಜಿದಾರ ಮನೀಶ್ ಗುಪ್ತಾರ ‘ಮಾನಸಿಕ, ದೈಹಿಕ ಮತ್ತು ಆರ್ಥಿಕ’ ನೋವನ್ನು ಗಮನಿಸಿದೆ. ದಂಡವನ್ನು ಎರಡು ಭಾಗಗಳಲ್ಲಿ ವಿಧಿಸಲಾಗಿದೆ. 1,500 ರೂ. ವ್ಯಾಜ್ಯ ವೆಚ್ಚ ಮತ್ತು 2,000 ರೂ ಮೂಲ ದಂಡ ಎಂದು ಪರಿಗಣಿಸಿ ದಂಡ ಹಾಕಲಾಗಿದೆ. ಅಲ್ಲದೆ ನಿಶ್ಚಿತ ಸಮಯದಲ್ಲಿ ದಂಡ ಪಾವತಿ ಮಾಡದಿದ್ದರೆ, ದಂಡದ ಮೊತ್ತಕ್ಕೆ 8% ರಷ್ಟು ಬಡ್ಡಿ ಕೂಡಾ ಪಾವತಿಸಬೇಕಾಗುತ್ತದೆ ಎಂದು ಗ್ರಾಹಕ ನ್ಯಾಯಾಲಯವು ಹೇಳಿದೆ.
ಇದನ್ನೂ ಓದಿ :ಏ ರೇವಣ್ಣ, ನಿಂಬೆ ಹಿಡಿದುಕೊಳ್ಳುವ ಕೈಯಲ್ಲಿ ಕೊಬ್ಬರಿ ಏಕೆ ಹಿಡ್ಕೊಂಡಿದ್ದೀಯಾ ?