ಗ್ರಾ.ಪಂ. ಅಧ್ಯಕ್ಷ – ಉಪಾಧ್ಯಕ್ಷ ಮೀಸಲು ಮಾರ್ಗಸೂಚಿ ಪ್ರಕಟ

 

 

ಬೆಂಗಳೂರು : ಗ್ರಾಮ ಪಂಚಾಯತ್‌ಗಳಿಗೆ 2020ರಲ್ಲಿ ನಡೆದ ಚುನಾವಣೆಯ ಬಳಿಕ ನಿಗದಿಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೊದಲ 30 ತಿಂಗಳ ಅಧಿಕಾರಾವಧಿ ಶೀಘ್ರದಲ್ಲಿ ಮುಗಿಯಲಿದ್ದು, ಬಾಕಿ 30 ತಿಂಗಳ 2ನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷತೆಗೆ ಮೀಸಲಾತಿ ನಿಗದಿ ಪಡಿಸಲು ಚುನಾವಣ ಆಯೋಗ ಮಾರ್ಗಸೂಚಿಗಳನ್ನು ಹೊರಡಿಸಿದೆ.

ರಾಜ್ಯದಲ್ಲಿರುವ ಒಟ್ಟು ಜನಸಂಖ್ಯೆಯಲ್ಲಿ ಎಸ್‌ಸಿ – ಎಸ್ ಟಿ ಜನಸಂಖ್ಯೆಗೆ ಅದರ ಅನುಪಾತದ ಆಧಾರದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳನ್ನು ಮೀಸಲಿರಿಸಬೇಕು. ರಾಜ್ಯದ ಒಟ್ಟು ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ 1/3ರಷ್ಟು ಹುದ್ದೆಗಳನ್ನು ಹಿಂದುಳಿದ ವರ್ಗಗಳಿಗೆ ಮೀಸಲಿ ಡಬೇಕು.

ಎಸ್‌ಸಿ- ಎಸ್ ಟಿ, ಒಬಿಸಿ ವರ್ಗಗಳಿಗೆ ಮೀಸಲಿಡಬೇಕಾದ ಹುದ್ದೆಗಳ ಸಂಖ್ಯೆಯು ರಾಜ್ಯದಲ್ಲಿನ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಒಟ್ಟು ಸಂಖ್ಯೆಯಲ್ಲಿ ಶೇ.50ರಷ್ಟು ಮೀರಬಾರದು. ಹಿಂದುಳಿದ ವರ್ಗಗಳಲ್ಲಿ ಶೇ.80ರಷ್ಟು ಹಿಂದುಳಿದ ವರ್ಗ-ಎ ಮತ್ತು ಶೇ.20ರಷ್ಟು ಹಿಂದುಳಿದ ವರ್ಗ- ಬಿ ವರ್ಗಗಳಿಗೆ ಮೀಸಲಿಡಬೇಕು.

ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳನ್ನು ಗ್ರಾಮ ಪಂಚಾಯತ್‌ಗಳಿಗೆ ಎಸ್‌ಸಿ ಎಸ್ ಟಿ, ಹಿಂದುಳಿದ ವರ್ಗ (ಎ), ಹಿಂದುಳಿದ ವರ್ಗ (ಬಿ), ಸಾಮಾನ್ಯ (ಮಹಿಳೆ) ಮತ್ತು ಸಾಮಾನ್ಯ ಕ್ರಮಾಂಕದಲ್ಲಿ ನಿಗದಿಪಡಿಸಬೇಕು. ಮೊದಲು ಎಸ್ಸಿ ಅಧ್ಯಕ್ಷ ಹುದ್ದೆಯನ್ನು ಮೊದಲು ನಿಗದಿಪಡಿಸಿ ಬಳಿಕ ಎಸ್ಟಿ ಅಧ್ಯಕ್ಷ ಹುದ್ದೆ, ಹಿಂದುಳಿದ ವರ್ಗ (ಎ), ಹಿಂದುಳಿದ ವರ್ಗ (ಬಿ) ಅಧ್ಯಕ್ಷ ಹುದ್ದೆಯಂತೆ ಒಂದಾದ ಬಳಿಕ ಒಂದನ್ನು ತಾಲೂಕಿನ ಗ್ರಾ.ಪಂ. ಗಳಿಗೆ ನಿಗದಿಪಡಿಸಬೇಕು. ಯಾವುದೇ ಮೀಸಲಿರಿಸಿದ ವರ್ಗದ ಅಧ್ಯಕ್ಷ- ಉಪಾಧ್ಯಕ್ಷ ಹುದ್ದೆಗಳನ್ನು ನಿಗದಿಪಡಿಸುವಾಗ ಒಂದು ವೇಳೆ ಸ್ಥಾನಗಳ ಸಂಖ್ಯೆ ಸಮವಾಗಿರುವ ಗ್ರಾ.ಪಂ.ಗಳು ಹಲವಾರಿದ್ದು, ಮೀಸಲಿರಿಸ ಬೇಕಾದ ಹುದ್ದೆಗಳು ಇಂಥ ಗ್ರಾ.ಪಂ.ಗಳಿಗಿಂತ ಕಡಿಮೆ ಇದ್ದಲ್ಲಿ ಅಂಥ ಗ್ರಾ.ಪಂ.ಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ಸಂಬಂಧ ಪಟ್ಟ ಗ್ರಾ.ಪಂ.ಗಳ ಸದಸ್ಯರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಲಾಟರಿ ಎತ್ತಿ ನಿಗದಿಮಾಡಬೇಕು.

ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳನ್ನು ನಿಗದಿಪಡಿಸುವಾಗ ಒಂದೇ ಗ್ರಾಮ ಪಂಚಾಯತ್‌ಗಳಲ್ಲಿ ಒಂದೇ ಪ್ರವರ್ಗದ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳನ್ನು ಏಕಕಾಲದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ನಿಗದಿಪಡಿಸತಕ್ಕದ್ದಲ್ಲ. ತಾಲೂಕುವಾರು ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳನ್ನು ನಿಗದಿಪಡಿಸುವಾಗ ಮೊದಲು ಎಲ್ಲ ಅಧ್ಯಕ್ಷ ಹುದ್ದೆಗಳನ್ನು ನಿಗದಿಪಡಿಸಿ ಬಳಿಕ ಉಪಾಧ್ಯಕ್ಷ ಹುದ್ದೆ ನಿಗದಿಪಡಿಸಬೇಕು ಎಂದು ಚುನಾವಣಾ ಆಯೋಗ ಸೂಚನೆ ನೀಡಿದೆ.

Leave A Reply

Your email address will not be published.